ADVERTISEMENT

ಚಿತ್ರರಂಗದ ಬೆಳವಣಿಗೆಗೆ ಡಬ್ಬಿಂಗ್ ಮಾರಕ

ಸಂವಾದದಲ್ಲಿ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2017, 19:30 IST
Last Updated 24 ಸೆಪ್ಟೆಂಬರ್ 2017, 19:30 IST
ಚಿತ್ರರಂಗದ ಬೆಳವಣಿಗೆಗೆ ಡಬ್ಬಿಂಗ್ ಮಾರಕ
ಚಿತ್ರರಂಗದ ಬೆಳವಣಿಗೆಗೆ ಡಬ್ಬಿಂಗ್ ಮಾರಕ   

ಬೆಂಗಳೂರು: ‘ಚಿತ್ರರಂಗದ ಬೆಳವಣಿಗೆಗೆ ಡಬ್ಬಿಂಗ್ ಮಾರಕ. ಇದರಿಂದ ಚಿತ್ರರಂಗದ ಅಸಂಖ್ಯಾತ ಕಾರ್ಮಿಕರ ತುತ್ತಿನ ಚೀಲಕ್ಕೆ ಭಾರಿ ಹೊಡೆತ ಬೀಳಲಿದೆ. ಕನ್ನಡದ ಆಸ್ಮಿತೆಗೂ ಧಕ್ಕೆ ಬರಲಿದೆ’ ಎಂದು ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಆತಂಕ ವ್ಯಕ್ತಪಡಿಸಿದರು.

ದುಬಾಸಿಪಾಳ್ಯದ ಅನೇಕಾ ಸ್ಟುಡಿಯೋದಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ‘ಕೆಲ ನಿರ್ಮಾಪಕರು ಹಾಗೂ ಕಂಠದಾನ ಕಲಾವಿದರಿಗೆ ಮಾತ್ರ ಇದರಿಂದ ಲಾಭವಾಗಲಿದೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಬಹು ಭಾಷಾ ಚಿತ್ರಗಳ ಸ್ಪರ್ಧೆಯ ನಡುವೆ ಕನ್ನಡ ಚಿತ್ರರಂಗ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ. ಕಲಾತ್ಮಕ ಚಿತ್ರಗಳಿಗೆ ಚಿತ್ರಮಂದಿರಗಳ ಸಮಸ್ಯೆ ಕಾಡುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಸಿನಿಮಾ ಕೇವಲ ಮನೋರಂಜನೆಯ ಸರಕಾಗಬಾರದು. ಮಾಹಿತಿ ಹಾಗೂ ಮೌಲ್ಯಗಳನ್ನು ಜನರಲ್ಲಿ ಜಾಗೃತಗೊಳಿಸಬೇಕು. ಮನೋರಂಜನೆ ಹೆಸರಿನಲ್ಲಿ ಹಿಂಸೆ, ಕ್ರೌರ್ಯ, ಅಶ್ಲೀಲತೆಯ ಪ್ರದರ್ಶನ ಸರಿಯಲ್ಲ’ ಎಂದರು.

‘ಎಲ್ಲಾ ಯಶಸ್ವಿ ಚಿತ್ರಗಳು ಉತ್ತಮ ಚಿತ್ರಗಳಾಗಬೇಕಿಲ್ಲ. ಉತ್ತಮ ಚಿತ್ರವೆಂಬ ಹೆಗ್ಗಳಿಕೆಗೆ ಸಿನಿಮಾ ಯಶಸ್ಸು ಮಾನದಂಡವಾಗಲಾರದು. ಜೇನುಗೂಡು, ಉಯ್ಯಾಲೆಯಂತ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡಲಿಲ್ಲ. ಕಥಾ ವಸ್ತುವಿನಿಂದಾಗಿ ಜನ ಮಾನಸದಲ್ಲಿ ಸ್ಥಿರವಾಗಿ ಉಳಿದಿವೆ’ ಎಂದು ತಿಳಿಸಿದರು.

***

ಡಬ್ಬಿಂಗ್ ವಿರೋಧಿ ಆಂದೋಲನಕ್ಕೆ ನಾಂದಿ ಹಾಡಿದವರು ಅನಕೃ ಮತ್ತು ಎಂ.ಎ.ರಾಮಮೂರ್ತಿ ಅವರಂಥ ಕನ್ನಡದ ಮಹಾನ್ ಬರಹಗಾರರು.
–ಗಿರೀಶ್ ಕಾಸರವಳ್ಳಿ, ಚಲನಚಿತ್ರ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.