ADVERTISEMENT

ಚಿನ್ನದ ಹುಡುಗಿಗೆ ಕೃಷಿ ಮೇಲೆ ಪ್ರೀತಿ

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಪ್ಲಾಂಟೇಷನ್‌ ಮ್ಯಾನೇಜ್‌ಮೆಂಟ್‌ ಘಟಿಕೋತ್ಸವ

​ಪ್ರಜಾವಾಣಿ ವಾರ್ತೆ
Published 26 ಮೇ 2016, 19:41 IST
Last Updated 26 ಮೇ 2016, 19:41 IST
ಚಿನ್ನದ ಪದಕ ವಿಜೇತರಾದ ವಿ.ಪದ್ಮಪ್ರಿಯ ಮತ್ತು ಜಿ.ಅನೀಶ್‌ ಸಂತಸದ ಕ್ಷಣದಲ್ಲಿ
ಚಿನ್ನದ ಪದಕ ವಿಜೇತರಾದ ವಿ.ಪದ್ಮಪ್ರಿಯ ಮತ್ತು ಜಿ.ಅನೀಶ್‌ ಸಂತಸದ ಕ್ಷಣದಲ್ಲಿ   

ಬೆಂಗಳೂರು: ಹುಡುಗಿ’ಗೆ  ಐಟಿ–ಬಿಟಿ, ಮೆಡಿಕಲ್‌, ಎಂಜಿನಿಯರಿಂಗ್‌ಗಿಂತಲೂ ನೇಗಿಲ ಯೋಗಿಗಳ ಬಗ್ಗೆ ಪ್ರೀತಿ, ಭೂತಾಯಿಯ ಬಗ್ಗೆ ಒಲವು. ರೈತಾಪಿ ವರ್ಗಕ್ಕೆ ಏನಾದರೂ ಒಳಿತು ಮಾಡಬೇಕೆಂಬ ಕಳಕಳಿ.

ಕೃಷಿಯ ಬಗ್ಗೆ ಅಪಾರ ಒಲವು ಹೊಂದಿರುವ ಈ ‘ಚಿನ್ನದ ಹುಡುಗಿ’ ಬೆಂಗಳೂರಿನ  ವಿ. ಪದ್ಮಪ್ರಿಯ. ಗುರುವಾರ ನಡೆದ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಪ್ಲಾಂಟೇಷನ್‌ ಮ್ಯಾನೇಜ್‌ಮೆಂಟ್‌ (ಐಐಎಂಪಿ) ಘಟಿಕೋತ್ಸವದಲ್ಲಿ ಇವರು ಚಿನ್ನದ ಪದಕ ಪಡೆದರು.

‘ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ್ದೆ. ಮನೆಯಲ್ಲಿ ಎಂಜಿನಿಯರಿಂಗ್‌ ಮತ್ತು ವೈದ್ಯ ಕೋರ್ಸ್‌ಗೆ ಸೇರಲು ಒತ್ತಾಯವಿತ್ತು. ಆದರೆ, ಜೀವ ವಿಜ್ಞಾನ ಮತ್ತು ಪರಿಸರದ ಮೇಲಿನ ಒಲವು ಕೃಷಿ ಶಿಕ್ಷಣದತ್ತ ಎಳೆದು ತಂದಿತು. ನಮ್ಮ  ಅಪ್ಪ–  ಅಮ್ಮ  ಮೂಲತಃ ಆಂಧ್ರದ ಕೂಚಿಪುಡಿಯವರು.

ಶಿವಮೊಗ್ಗಕ್ಕೆ ವಲಸೆ ಬಂದವರು. ಪಿಯುಸಿ ಬಳಿಕ ಬೆಂಗಳೂರಿನಲ್ಲಿ ಜಿಕೆವಿಕೆಗೆ ಸೇರಿದೆ. ನಬಾರ್ಡ್‌ನಲ್ಲಿ ಇಂಟರ್ನ್‌ಷಿಪ್‌ ಮಾಡಿದೆ. ಆ ಸಂದರ್ಭದಲ್ಲಿ ಕರ್ನಾಟಕದ ಹಳ್ಳಿ–ಹಳ್ಳಿಗಳನ್ನು ಸುತ್ತುವ ಮತ್ತು ಅಲ್ಲಿನ  ವಾಸ್ತವ ಸ್ಥಿತಿಯನ್ನು ಅರಿತುಕೊಳ್ಳುವ ಅವಕಾಶ ಒದಗಿ ಬಂದಿತು. ನಗರ ಪ್ರದೇಶದವಳಾದ ನನಗೆ ಇವೆಲ್ಲ  ಹೊಸತು’ ಎಂದು ‘ಪ್ರಜಾವಾಣಿ’ಗೆ  ತಿಳಿಸಿದರು.

‘ಈಗ ನನಗೆ ಖಾಸಗಿ ಕಂಪೆನಿಯಲ್ಲಿ ಒಳ್ಳೆ ಕೆಲಸವೇನೋ ಸಿಕ್ಕಿದೆ. ಸಂಬಳವೂ ಚೆನ್ನಾಗಿದೆ. ಆದರೆ, ತೃಪ್ತಿ ಇಲ್ಲ. ಕೃಷಿಗೆ ಸಂಬಂದದ್ದೇನಾದರೂ ಮಾಡಬೇಕು ಎಂಬುದೇ ನನ್ನ ಆಸೆ. ಕೃಷಿ ಮ್ಯಾನೇಜ್‌ಮೆಂಟ್‌  ಕೋರ್ಸ್‌ ಮಾಡಿದ್ದು. 

ನಾವು ಓದಿರುವ ಥಿಯರಿಯನ್ನು ಅನುಷ್ಠಾನಗೊಳಿಸುವ ಸವಾಲು ನನ್ನ ಮುಂದಿದೆ. ವಿದೇಶಕ್ಕೆ ಹೋಗಿ ಅಲ್ಲಿನ ವ್ಯವಸ್ಥೆ ತಿಳಿದುಕೊಂಡು ಭಾರತದಲ್ಲಿ ಅದನ್ನು ಅಳವಡಿಸುವ ಬಗ್ಗೆ ಆಸೆ ಏನೋ ಇದೆ. ಆದರೆ, ಅಲ್ಲಿಗೆ ಹೋಗಿ ಬರುವಷ್ಟು ಹಣ ನಮ್ಮಲ್ಲಿಲ್ಲ’.

‘ವಿಜ್ಞಾನ ಓದಿದವರು ಸಾಮಾನ್ಯವಾಗಿ ಎಂಜಿನಿಯರಿಂಗ್‌, ವೈದ್ಯ ಕೋರ್ಸ್‌ಗೆ ಬಯಸುತ್ತಾರೆ. ಆದರೆ, ಜೀವ ವಿಜ್ಞಾನದ ಬಗ್ಗೆ ಕಳಕಳಿಯುಳ್ಳವರು, ಪ್ರಕೃತಿ, ಕೃಷಿಯ ಬಗ್ಗೆ ಪ್ರೀತಿ ಇರುವವರು ಗಟ್ಟಿ ಮನಸ್ಸು ಮಾಡಿಕೊಂಡು ಈ ಬಗೆಯ ಕೋರ್ಸ್‌ಗಳನ್ನು ತೆಗೆದುಕೊಳ್ಳಬೇಕು.

ಯಾವ ಹಾದಿಯಲ್ಲಿ ಸಾಗಬೇಕು ಎಂಬುದನ್ನು ತಾವೇ ನಿರ್ಣಯ ತೆಗೆದುಕೊಳ್ಳಬೇಕು’ ಎಂಬ ಸ್ಫೂರ್ತಿಯ ಮಾತು ಪದ್ಮಪ್ರಿಯ ಅವರದು. ಬೆಳ್ಳಿಯ ಹುಡುಗ ಮೊಹಮ್ಮದ್‌: ಕೇರಳದ ಮೊಹಮ್ಮದ್‌ ಅಬ್ದುಲ್‌ ಜಮೈಯ್ಯ, ಅಗ್ರಿ ಬಿಜಿನೆಸ್‌ ಮತ್ತು ಪ್ಲಾಂಟೇಷನ್‌ ಮ್ಯಾನೇಜ್‌ಮೆಂಟ್‌ನಲ್ಲಿ  ಬೆಳ್ಳಿ ಪದಕ ಪಡೆದಿದ್ದಾರೆ.

‘ಭಾರತದಲ್ಲಿ ತೋಟದ ಬೆಳೆಗಳ ಕ್ಷೇತ್ರವೂ ಸೇರಿದಂತೆ ಕೃಷಿಯಲ್ಲಿ ಮ್ಯಾನೇಜ್‌ಮೆಂಟ್‌ ಕೊರತೆ ದೊಡ್ಡ ಲೋಪ. ನನ್ನದು ರಬ್ಬರ್‌ ಬೆಳಗಾರ ಕುಟುಂಬ. ಹೀಗಾಗಿ ಮ್ಯಾನೇಜ್‌ಮೆಂಟ್‌ ಲೋಪಗಳು ಏನು ಎಂಬುದನ್ನು ಅರಿತುಕೊಳ್ಳಲು ಸಾಧ್ಯವಾಗಿದೆ. ಗುಣಮಟ್ಟದ ಕೊರತೆ, ಕಳಪೆ ನಿರ್ವಹಣೆಯಿಂದಾಗಿ ಭಾರತದ ಕೃಷಿ ಉತ್ಪನ್ನಕ್ಕೆ ವಿಶ್ವದಲ್ಲಿ ಮಾನ್ಯತೆ ಸಿಗುತ್ತಿಲ್ಲ’ ಎಂಬುದು ಮೊಹಮ್ಮದ್‌ ಅಭಿಪ್ರಾಯ.

ಸ್ನೋ– ಪೌಡರ್‌ ಬಿಡಿ, ಚೆನ್ನಾಗಿ ಓದಿ!‘ಸ್ನೋ–ಪೌಡರ್‌ ಹಚ್ಕೊಂಡು ಫ್ಯಾಷನ್‌ ಮಾಡೋದನ್ನು ಬಿಡಿ, ಚೆನ್ನಾಗಿ ಓದಿ’
–ಇದು ರಾಜ್ಯಪಾಲ ವಜುಭಾಯಿ ವಾಲಾ ಅವರು ಘಟಿಕೋತ್ಸವ ಭಾಷಣದಲ್ಲಿ ವಿದ್ಯಾರ್ಥಿಗಳಿಗೆ ನೀಡಿದ ಉಪದೇಶ!

ಜೀವನದಲ್ಲಿ ಏನಾದರೂ ಆಗಬೇಕಿದ್ದರೆ ಹಣದ ಹಿಂದೆ ಬೀಳಬೇಡಿ.  ಸೂಟು ಬೂಟು ತೊಟ್ಟು, ಸ್ನೋ ಪೌಡರ್‌ ಹಾಕಿಕೊಂಡು ಶೋಕಿ ಮಾಡುವುದನ್ನು ಬಿಟ್ಟು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಪ್ರಯತ್ನಿಸಿ. 40 ವರ್ಷ ಆದ ಬಳಿಕ ಸೌಂದರ್ಯ ಹೊರಟು ಹೋಗಿರುತ್ತದೆ. ವಿದ್ಯಾರ್ಥಿ ಜೀವನಲ್ಲಿ ಕಷ್ಟಪಟ್ಟರೆ ಜೀವನವಿಡೀ ಸಂತಸದಲ್ಲಿರಬಹುದು ಎಂದರು.

ADVERTISEMENT

ಚಿನ್ನದ ಪದಕ ವಿಜೇತರು
* ವಿ.ಪದ್ಮಪ್ರಿಯ: ಪಿಜಿಡಿಎಂ– ಎಬಿಪಿಎಂ (2014–2016)
* ಅನೀಷ್‌ ಜಿ: ಪಿಜಿಡಿಎಂ– ಎಬಿಪಿಎಂ (2013–2015)

ಬೆಳ್ಳಿ ಪದಕ ವಿಜೇತರು
*ಮೊಹಮ್ಮದ್‌ ಅಬ್ದುಲ್‌ ಜಮೈಯ್ಯ: ಪಿಜಿಡಿಎಂ– ಎಬಿಪಿಎಂ(2014–2016)
*ನಿಖಿಲ್‌.ಎಂ: ಪಿಜಿಡಿಎಂ– ಎಬಿಪಿಎಂ(2013–2015)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.