ADVERTISEMENT

ಚಿರತೆ ಹಿಡಿದರೂ ದೂರವಾಗದ ಆತಂಕ

ಪೋಷಕರೊಂದಿಗೆ ಭಯದಲ್ಲೇ ಶಾಲೆಗೆ ಬಂದ ಮಕ್ಕಳು: ಭದ್ರತೆ ಒದಗಿಸಿದ ಆಡಳಿತ ಮಂಡಳಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2016, 20:06 IST
Last Updated 8 ಫೆಬ್ರುವರಿ 2016, 20:06 IST
ಚಿರತೆ ದಾಳಿ ನಡೆಸಿದ ಜಾಗದಲ್ಲಿ ಸೋರಿದ್ದ ರಕ್ತವನ್ನು ಶಾಲಾ ಸಿಬ್ಬಂದಿ ಸ್ವಚ್ಛಗೊಳಿಸಿದರು
ಚಿರತೆ ದಾಳಿ ನಡೆಸಿದ ಜಾಗದಲ್ಲಿ ಸೋರಿದ್ದ ರಕ್ತವನ್ನು ಶಾಲಾ ಸಿಬ್ಬಂದಿ ಸ್ವಚ್ಛಗೊಳಿಸಿದರು   

ಬೆಂಗಳೂರು: ವರ್ತೂರಿನ ವಿಬ್ಗಯೊರ್‌ ಶಾಲೆಯಲ್ಲಿ ಭಾನುವಾರ ಕಾಣಿಸಿ ಕೊಂಡಿದ್ದ ಚಿರತೆಯನ್ನು ಹಿಡಿದು ಬನ್ನೇರುಘಟ್ಟ ಜೈವಿಕ ಉದ್ಯಾನ ಕಳು ಹಿಸಿದ್ದರೂ, ಶಾಲೆ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಇನ್ನೂ ಭಯದ ಆತಂಕ ಮನೆ ಮಾಡಿದೆ.

ಪೋಷಕರೊಂದಿಗೆ ಸೋಮವಾರ ಶಾಲೆಗೆ ಬಂದ ಮಕ್ಕಳ ಮೊಗದಲ್ಲಿ ಭಯದ ಛಾಯೆ ಆವರಿಸಿತ್ತು.

ಚಿರತೆಯಿಂದಾಗಿ ದಿನವಿಡೀ ಸುದ್ದಿಯಾಗಿದ್ದ ಶಾಲೆಯಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸ ಲಾಗಿತ್ತು. ಶಾಲೆಯೊಳಕ್ಕೆ ಪೋಷಕರಿಗೆ ಪ್ರವೇಶ ನಿರಾಕರಿಸಿದ ಸಿಬ್ಬಂದಿ, ಮಕ್ಕಳನ್ನು ತಾವೇ ಗೇಟಿನಿಂದ ಒಳಗೆ ಕರೆದೊಯ್ಯುತ್ತಿದ್ದರು.

‘ಇದೇ ಶಾಲೆಗೆ ಚಿರತೆ ಬಂದಿತ್ತಂತೆ’  ಎಂಬ ಕುತೂಹಲದಿಂದ, ರಸ್ತೆಯಲ್ಲಿ ಓಡಾಡುತ್ತಿದ್ದ ಕೆಲ ಸಾರ್ವಜನಿಕರೂ ಶಾಲೆಯತ್ತ ದೃಷ್ಟಿ ಹರಿಸುತ್ತಿದ್ದ ದೃಶ್ಯ ಕಂಡು ಬಂತು.

ಮತ್ತೊಂದು ಚಿರತೆ ಭಯ: ಗುಂಜೂರು ಅರಣ್ಯ ಪ್ರದೇಶದಲ್ಲಿ ಎರಡು ಚಿರತೆಗಳು ಕಾಣಿಸಿಕೊಂಡಿದ್ದವು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದ ಮಾತು, ಅರಣ್ಯ ಭಾಗದ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳಲ್ಲಿ ಭಯದ ವಾತಾವರಣ ಮೂಡಿಸಿತ್ತು.

‘ಅಧಿಕಾರಿಗಳು 2 ಚಿರತೆ ಕಾಣಿಸಿಕೊಂಡಿದ್ದವು ಎಂದಿದ್ದಾರೆ. ಈಗ ಒಂದನ್ನು ಹಿಡಿದಿದ್ದಾರೆ. ಹಾಗಾದರೆ ಇನ್ನೊಂದು ಚಿರತೆ ಎಲ್ಲಿದೆ? ಸೆರೆಯಾದ ಚಿರತೆಯನ್ನು ಅರಸಿಕೊಂಡು ಮತ್ತೊಂದು ಈ ಕಡೆಗೆ ಬಂದರೆ ಬರ ಬಹುದಲ್ಲವೆ?’ ಎಂದು ವಿಬ್ಗಯೊರ್‌ ಶಾಲೆ ಸಮೀಪದ ಅಪಾರ್ಟ್‌ಮೆಂಟ್‌ ವಾಸಿಯೊಬ್ಬರು ಆತಂಕ ವ್ಯಕ್ತಪಡಿಸಿದರು.

ಗುಂಜೂರು ಅರಣ್ಯ ಪ್ರದೇಶದ ಸುತ್ತಮುತ್ತಲಿನ ಗ್ರಾಮಗಳಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡು ವಾಸವಾಗಿರುವ ಕೂಲಿ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರು ಸಹ ಆತಂಕದಿಂದ ಓಡಾಡುತ್ತಿದ್ದರಲ್ಲದೆ, ಕತ್ತಲೆಗೂ ಮುಂಚೆ ಮನೆ ಸೇರಿಕೊಳ್ಳುತ್ತಿದ್ದರು.

‘ತೋಪಿಗೆ ಹೊಂದಿಕೊಂಡು ವರ್ತೂರು ಕೆರೆ ಇದ್ದು, ದಟ್ಟ ಗಿಡಮರ ಗಳ ರಾಶಿ ಇದೆ. ಹಾಗೆಯೇ, ಪಣತ್ತೂರು ಗ್ರಾಮದ ಹೊರವಲಯದ ಅರಣ್ಯ ಪ್ರದೇಶವೂ ಕೇವಲ ಒಂದು ಕಿಲೋ ಮೀಟರ್ ಅಂತರದಲ್ಲಿದೆ. ಹಾಗಾಗಿ, ಮತ್ತೊಂದು ಚಿರತೆ ಬರುವ ಭಯ ದಿಂದಾಗಿ ಶೆಡ್‌ನಿಂದ ಹೊರಬರಲು ಹೆದರಿಕೆಯಾಗುತ್ತಿದೆ’ ಎಂದು ಸ್ಥಳೀಯ ಶೆಡ್‌ನ ವಾಸಿಯೊಬ್ಬರು ಹೇಳಿದರು.

‘ನಿತ್ಯ ಮಗಳನ್ನು ಶಾಲಾ ವಾಹನದಲ್ಲೇ ಕಳುಹಿಸುತ್ತಿದ್ದೆ. ನೆನ್ನೆಯ ಘಟನೆಯಿಂದಾಗಿ ಮಗಳು ಶಾಲೆಗೆ ಹೋಗಲು ಭಯಗೊಂಡಿದ್ದಳು. ಹಾಗಾಗಿ ನಾನು ಮತ್ತು ಪತ್ನಿ ಇಬ್ಬರು ಬಂದು ಶಾಲೆಗೆ ಬಿಟ್ಟು ಹೋಗಿದ್ದೇವೆ. ನಗರದ ಹೊರವಲಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಪೋಷಕರೊಬ್ಬರು ಹೇಳಿದರು.

ಸಿಬ್ಬಂದಿಗೆ ಸನ್ಮಾನ: ಶಾಲೆಯ ಆವರಣ ದೊಳಕ್ಕೆ ಚಿರತೆ ಬಂದಿರುವ ಬಗ್ಗೆ, ಕೂಡಲೇ ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡುವ ಮೂಲಕ ಸಮಯ ಪ್ರಜ್ಞೆ ತೋರಿದ ವಿಬ್ಗಯೊರ್ ಪ್ರೌಢಶಾಲೆಯ ಭದ್ರತಾ ಸಿಬ್ಬಂದಿ ಎನ್‌.ಎಸ್‌. ಬಾಬು ಮತ್ತು ಸ್ಯಾಮ್ಯುಯಲ್ ಅವರನ್ನು ಶಾಲಾ ಆಡಳಿತ ಮಂಡಳಿ ಸನ್ಮಾನಿಸಿತು.

‘ಶಾಲಾ ಆವರಣದಲ್ಲಿ ಅಗತ್ಯ ಸುರಕ್ಷತಾ ಕ್ರಮ ಕೈಗೊಂಡಿದ್ದೇವೆ. ಶಾಲೆಯ ಪ್ರತಿ ಗೇಟ್‌ಗಳಲ್ಲಿ ತರಬೇತಿ ಹೊಂದಿದ ಭದ್ರತಾ ಸಿಬ್ಬಂದಿ ನಿಯೋ ಜನೆ ಜತೆಗೆ, ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅರಣ್ಯ ಇಲಾಖೆ ಮತ್ತೇನಾದರೂ ಸಲಹೆ ನೀಡಿದರೆ, ಅಳವಡಿಸಿಕೊಳ್ಳಲು ಸಿದ್ದರಿದ್ದೇವೆ’ ಎಂದು ಶಾಲೆಯ ಪ್ರಾಂಶುಪಾಲ ರೋಶನ್ ಡಿಸೋಜಾ ತಿಳಿಸಿದರು.

ಶಾಲೆಯ ಆವರಣದಲ್ಲಿ ನಸುಕಿನಲ್ಲಿ ಕಾಣಿಸಿಕೊಂಡಿದ್ದ ಚಿರತೆಯನ್ನು 13 ತಾಸು ಕಾರ್ಯಾಚರಣೆ ನಡೆಸಿ ಬಲೆಗೆ ಬೀಳಿಸಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ಬಳಿಕ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಕಳುಹಿಸಿದ್ದರು. ಚಿರತೆ ಹಿಡಿಯುವ ಕಾರ್ಯಾಚರಣೆ ವೇಳೆ, ವನ್ಯಜೀವಿ ತಜ್ಞ ಸಂಜಯ್‌ ಗುಬ್ಬಿ ಸೇರಿ ಇಬ್ಬರ ಮೇಲೆ ದಾಳಿ ನಡೆಸಿ ಗಾಯಗೊಳಿಸಿತ್ತು.

ವೃತ್ತಿಪರ ತಂಡ ಬೇಕಿದೆ: ‘ಅರಣ್ಯ ಇಲಾಖೆ ಬಳಿ ಉತ್ತಮ ಪರಿಹಾರ ಕಾರ್ಯಾಚರಣೆ ತಂಡಗಳು ಇವೆ. ಆದರೂ, ವಿಬ್ಗಯೊರ್ ಶಾಲೆಯಲ್ಲಿ ನಡೆ ದಂತಹ ಘಟನೆಗಳನ್ನು ನಿರ್ವ ಹಿಸಲು ಮತ್ತು ಕಾರ್ಯಾಚರಣೆ ನಡೆಸಲು ವೃತ್ತಿ ಪರ ತಂಡಗಳ ಅಗತ್ಯವಿದೆ’ ಎಂದು ಇಲಾಖೆಯ ಉಪ ಅರಣ್ಯ ಸಂರಕ್ಷಾ ಧಿಕಾರಿ ದೀಪಿಕಾ ಬಾಜಪೇಯಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ತಂತ್ರಜ್ಞಾನವನ್ನು ಬಳಸಿಕೊಂಡು ಇಂತಹ ಪರಿಸ್ಥಿತಿ ನಿಭಾಯಿಸಿ ಕಾರ್ಯಾ ಚರಣೆ ನಡೆಸುವ ಕುರಿತು ಇಲಾಖೆ ಪ್ರಸ್ತಾವವೊಂದನ್ನು ಸಿದ್ಧಪಡಿಸುತ್ತಿದ್ದು, ಸದ್ಯದಲ್ಲೇ ಸರ್ಕಾರಕ್ಕೆ ಕಳುಹಿಸಲಾಗು ವುದು’ ಎಂದು ಅವರು ಹೇಳಿದರು.

ಚಿರತೆಗೆ ಚಿಕಿತ್ಸೆ 

ಬನ್ನೇರುಘಟ್ಟ ಜೈವಿಕ ಉದ್ಯಾನದ ಪ್ರಾಣಿ ಪುನರ್ವಸತಿ ಕೇಂದ್ರದಲ್ಲಿರುವ ಚಿರತೆಯ ಹೊಟ್ಟೆ, ಕಣ್ಣು ಹಾಗೂ ದೇಹದ ಇತರ ಭಾಗಗಳಿಗೆ ತರಚಿದ ಗಾಯಗಳಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

ADVERTISEMENT

‘ಕಾರ್ಯಾಚರಣೆ ವೇಳೆ ಚಿರತೆ ತಪ್ಪಿಸಿಕೊಳ್ಳಲು ಕಟ್ಟಡದ ಅತ್ತಿಂದಿತ್ತ ಜಿಗಿದಾಗ ಗಾಯ ಗೊಂಡಿದೆ. ಆಹಾರವಿಲ್ಲದೆ  ಬಳ ಲಿದ್ದ ಚಿರತೆಗೆ ಅಗತ್ಯ ಚಿಕಿತ್ಸೆ ನೀಡಲಾಗಿದ್ದು, ಒಂದೆರಡು ದಿನ ದಲ್ಲಿ ಸುಧಾರಿಸಿಕೊಳ್ಳಲಿದೆ’ ಎಂದು  ಉದ್ಯಾನದ ವೈದ್ಯರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.