ADVERTISEMENT

ಜನರ ಸಂಪರ್ಕಕ್ಕಾಗಿ ಶಾಸಕರಿಂದ ‘ಆ್ಯಪ್‌’

​ಪ್ರಜಾವಾಣಿ ವಾರ್ತೆ
Published 5 ಜುಲೈ 2015, 19:38 IST
Last Updated 5 ಜುಲೈ 2015, 19:38 IST

ಬೆಂಗಳೂರು: ಜನರ ಜತೆಗೆ  ಸಂಪರ್ಕ ಸಾಧಿಸಲು ಹಾಗೂ  ಸಮಸ್ಯೆಗಳನ್ನು ಆಲಿಸಲು ಹುಬ್ಬಳ್ಳಿ– ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಅವರು ಆರಂಭಿಸಿರುವ ಮೊಬೈಲ್‌ ಆ್ಯಪ್‌ನ್ನು ಭಾನುವಾರ ಬಿಡುಗಡೆ ಮಾಡಲಾಯಿತು.  ಇದೇ ವೇಳೆ ವೆಬ್‌ಸೈಟ್‌ ಮತ್ತು ಉಚಿತ ಸಹಾಯವಾಣಿಗೆ ಚಾಲನೆ ನೀಡಲಾಯಿತು.
ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ರಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತಕುಮಾರ್ ಅವರು ಆ್ಯಪ್ ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅರವಿಂದ ಬೆಲ್ಲದ, ‘ಪೊಲಿಟಿಕಲ್‌ ಕೋಷಂಟ್‌ ಕನ್ಸಲ್ಟೆಂಟ್ಸ್ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿಯು,  Namma Bellad ಎಂಬ ಮೊಬೈಲ್ ಆ್ಯಪ್‌ ಮತ್ತು www.nammabellad.com ಎಂಬ ವೆಬ್‌ಸೈಟ್‌ನ್ನು ಅಭಿವೃದ್ಧಿಪಡಿಸಿದೆ’ ಎಂದರು. ‘ಕಳೆದ ಚುನಾವಣೆಯಲ್ಲಿ ಸಾಮಾಜಿಕ ಮಾಧ್ಯಮಗಳು ಪರಿಣಾಮಕಾರಿಯಾಗಿ ಕೆಲಸ ಮಾಡಿದವು. ಹೀಗಾಗಿ ಜನರ ಸಮಸ್ಯೆಗಳನ್ನು ಆಲಿಸಲು ಮತ್ತು ಕ್ಷೇತ್ರದ ಅಭಿವೃದ್ಧಿಗೆ ಜನರಿಂದ ಸಲಹೆಗಳನ್ನು ಪಡೆಯಲು ಆ್ಯಪ್‌ ಮತ್ತು ವೆಬ್‌ಸೈಟ್‌ ಅಭಿವೃದ್ಧಿಪಡಿಸಲಾಗಿದೆ’ ಎಂದು ಹೇಳಿದರು.

ಆ್ಯಪ್‌ ಹಾಗೂ ವೆಬ್‌ಸೈಟ್‌ ಬಳಸಲು ಬಾರದವರಿಗಾಗಿ ಸಹಾಯವಾಣಿ ತೆರೆಯಲಾಗಿದೆ. ಕ್ಷೇತ್ರದ ಜನರು 1800 3000 3443 ಸಂಖ್ಯೆಗೆ ಮಿಸ್‌ ಕಾಲ್ ಕೊಟ್ಟರೆ, ನಮ್ಮ ಸಿಬ್ಬಂದಿ ವಾಪಸ್‌ ಕರೆ ಮಾಡಿ ದೂರು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತಾರೆ ಎಂದು ಮಾಹಿತಿ ನೀಡಿದರು. ಹುಬ್ಬಳಿಯಲ್ಲಿರುವ ಕಚೇರಿಯಲ್ಲಿ ವೆಬ್‌ಸೈಟ್‌ ಮತ್ತು ಸಹಾಯವಾಣಿಯನ್ನು ನಿರ್ವಹಣೆ ಮಾಡಲಾಗುತ್ತದೆ. ಪ್ರತಿ ವಾರ ಜನರಿಂದ ಬಂದಿರುವ ದೂರುಗಳನ್ನು  ತರಿಸಿಕೊಂಡು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದರು.

‘ವೆಬ್‌ಸೈಟ್‌ ಆರಂಭಿಸಿದ ಒಂದು ವಾರದಲ್ಲಿ 131 ಜನರು ನೋಂದಾಯಿಸಿಕೊಂಡಿದ್ದಾರೆ. ಮೊಬೈಲ್‌ ಆ್ಯಪ್‌ ಮೂಲಕ 16 ದೂರುಗಳು ಬಂದಿದ್ದು, ಅದರಲ್ಲಿ ಎರಡು ದೂರುಗಳಿಗೆ ಪರಿಹಾರ ದೊರಕಿಸಲಾಗಿದೆ’ ಎಂದು ತಿಳಿಸಿದರು.
ಅನಂತಕುಮಾರ್‌ ಮಾತನಾಡಿ, ‘ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಲು ಆ್ಯಪ್‌ ಬಿಡುಗಡೆ ಮಾಡಿರುವುದು ಉತ್ತಮ ಕೆಲಸ. ವಾಯ್ಸ್‌ಮೇಲ್‌ ಮೂಲಕವೂ ದೂರು ಸ್ವೀಕರಿಸುವ ವ್ಯವಸ್ಥೆ ಮಾಡಿದರೆ ಜನರಿಗೆ ಇನ್ನಷ್ಟು ಅನುಕೂಲವಾಗಲಿದೆ’ ಎಂದು ಸಲಹೆ ನೀಡಿದರು.

ಆ್ಯಪ್‌ ಅಭಿವೃದ್ಧಿಪಡಿಸಿರುವ ಕಂಪೆನಿಯ ಮುಖ್ಯ ಕಾರ್ಯನಿರ್ವಣಾಧಿಕಾರಿ ಎಚ್‌.ಆರ್.ಸುರಭಿ, ‘ಆಂಡ್ರಾಯ್ಡ್‌ ಫೊನ್‌ಗಳಲ್ಲಿ ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.   ಆ್ಯಪ್‌ ಮತ್ತು ವೆಬ್‌ಸೈಟ್‌ನಲ್ಲಿ ಕ್ಷೇತ್ರದ ಜನರು ಅಲ್ಲಿನ ಸಮಸ್ಯೆಗಳ ಬಗ್ಗೆ ದೂರು ಸಲ್ಲಿಸಬಹುದು ಮತ್ತು ಸಲಹೆ ಸೂಚನೆಗಳನ್ನು ನೀಡಬಹುದಾಗಿದೆ’ ಎಂದು ತಿಳಿಸಿದರು. 

ವೆಬ್‌ಸೈಟ್‌ ಮತ್ತು ಆ್ಯಪ್‌ನಲ್ಲಿ ಕನ್ನಡ ಹಾಗೂ ಇಂಗ್ಲಿಷ್‌ ಎರಡೂ ಭಾಷೆಗಳಲ್ಲಿಯೂ ದೂರು ಹಾಗೂ ಸಲಹೆಗಳನ್ನು ಸಲ್ಲಿಸಲು ವ್ಯವಸ್ಥೆ ಮಾಡಲಾಗಿದೆ. ದೂರು ಸಲ್ಲಿಸುವ ಜತೆಗೆ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆಯೂ ವೆಬ್‌ಸೈಟ್‌ನಲ್ಲಿ ಮಾಹಿತಿ ಪಡೆಯಬಹುದಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.