ADVERTISEMENT

ಜನಸ್ನೇಹಿ ಪೊಲೀಸ್‌ ವ್ಯವಸ್ಥೆ ನಗರದಲ್ಲೂ ಜಾರಿ

​ಪ್ರಜಾವಾಣಿ ವಾರ್ತೆ
Published 1 ಜುಲೈ 2016, 19:53 IST
Last Updated 1 ಜುಲೈ 2016, 19:53 IST

ಬೆಂಗಳೂರು: ‘ಜರ್ಮನಿಯ ಮ್ಯುನಿಕ್‌ ನಗರದ ಮಾದರಿಯಲ್ಲಿ ಬೆಂಗಳೂರನ್ನು ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ ಸುರಕ್ಷಿತ ನಗರವನ್ನಾಗಿ ಪರಿವರ್ತಿಸಲಾಗುವುದು’ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌  ಹೇಳಿದರು.ಈ ಸಂಬಂಧ ಜರ್ಮನಿಯ ಬವೇರಿಯ ಸರ್ಕಾರದ ಗೃಹ ಇಲಾಖೆ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಬವೇರಿಯ ರಾಜ್ಯದ ಮ್ಯುನಿಕ್‌ ನಗರ ‘ಸುರಕ್ಷಿತ ನಗರ’ ಎಂದು ಖ್ಯಾತಿ ಪಡೆದಿದೆ. ವಿಶೇಷವಾಗಿ ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ ಅತ್ಯಂತ ಸುರಕ್ಷಿತ ನಗರ ಎನಿಸಿಕೊಂಡಿದೆ. ಅಂತಹ ವ್ಯವಸ್ಥೆ ಬೆಂಗಳೂರಿನಲ್ಲೂ ಜಾರಿ ಆಗಬೇಕು. ಈ ನಿಟ್ಟಿನಲ್ಲಿ  ಅಲ್ಲಿನ ಪೊಲೀಸ್‌  ವ್ಯವಸ್ಥೆಯ ಕೆಲವು ಅಂಶಗಳನ್ನು ನಮ್ಮ ರಾಜ್ಯದಲ್ಲೂ ಅಳವಡಿಸಿಕೊಳ್ಳಲು ಚಿಂತಿಸಲಾಗಿದೆ’ ಎಂದು ಪರಮೇಶ್ವರ್‌ ಹೇಳಿದರು.

ಅಲ್ಲಿನ  ರಾಜ್ಯದ ಆಹ್ವಾನದ ಮೇರೆಗೆ ಮ್ಯುನಿಕ್‌ಗೆ ಇತ್ತೀಚೆಗೆ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದೆವು. ವಿಶೇಷವಾಗಿ ಅಲ್ಲಿನ ಟ್ರಾಫಿಕ್‌ ನಿರ್ವಹಣೆ, ಪೊಲೀಸ್‌ ತರಬೇತಿ, ಸೈಬರ್‌ ಕ್ರೈಮ್‌ ನಿರ್ವಹಣೆ ಮತ್ತು ಶಾಲಾ ಮಕ್ಕಳಲ್ಲಿ ಪೊಲೀಸ್‌ ವ್ಯವಸ್ಥೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಗಮನ ಸೆಳೆಯಿತು. ನಮ್ಮ ರಾಜ್ಯದಲ್ಲೂ ಶಾಲೆಗಳಲ್ಲಿ ಪೊಲೀಸ್‌  ವ್ಯವಸ್ಥೆ ಕುರಿತು ಪೊಲೀಸರಿಂದಲೇ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಅಲ್ಲಿನ ಸಚಿವರು, ಪೊಲೀಸ್‌ ಇಲಾಖೆ ಅಧಿಕಾರಿಗಳು ನಮ್ಮ ರಾಜ್ಯಕ್ಕೂ ಆಹ್ವಾನಿಸಲಾಗಿದೆ’ ಎಂದರು.

ಕರ್ನಾಟಕ ಸರ್ಕಾರ ವಾಣಿಜ್ಯ, ಉದ್ಯಮ, ಪ್ರವಾಸೋದ್ಯಮ ಸಂಬಂಧಿಸಿದಂತೆ ಬವೇರಿಯ  ಸರ್ಕಾರದೊಂದಿಗೆ 2007 ರಲ್ಲೇ ಒಪ್ಪಂದ ಮಾಡಿಕೊಂಡಿದೆ. ಹಳೇ ಒಪ್ಪಂದವನ್ನು ಮುಂದುವರೆಸಲು ಮತ್ತು ಅದರಲ್ಲಿ ಪೊಲೀಸ್‌  ಇಲಾಖೆ ವಿಚಾರವನ್ನು ಸೇರಿಸಲು ನಮ್ಮ ಪ್ರಯತ್ನ ನಡೆದಿತ್ತು. ಅದರ ಭಾಗವಾಗಿ ಹೊಸ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದು ಹೇಳಿದರು.

ಹೊಸ ಒಪ್ಪಂದದ ಅನ್ವಯ ಪೊಲೀಸ್‌  ವ್ಯವಸ್ಥೆಯ ಕುರಿತು ಎರಡೂ ದೇಶಗಳ ಪರಿಣತಿ ಮತ್ತು ಅನುಭವ ವಿನಿಮಯ ಮಾಡಿಕೊಳ್ಳಲಾಗುವುದು. ಪೊಲೀಸರಿಗೆ ಮುಂದುವರೆದ ತರಬೇತಿಗೆ ಆ ದೇಶದ ನೆರವು ಪಡೆದು ಕೊಳ್ಳಲಾಗುವುದು. ನಮ್ಮ ಅಧಿಕಾರಿಗಳನ್ನು ಅಲ್ಲಿಗೆ ಕಳುಹಿಸಲಾಗುವುದು. ಅಲ್ಲಿಯ ಅಧಿಕಾರಿಗಳು ನಮ್ಮ ರಾಜ್ಯಕ್ಕೆ ಬರಲಿದ್ದಾರೆ ಎಂದರು.

‘ಮ್ಯುನಿಕ್‌ ನಗರದಲ್ಲಿ ಶೇ 87ರಷ್ಟು ನಾಗರಿಕರು ಪೊಲೀಸರ ಬಗ್ಗೆ ಸಕಾರಾತ್ಮಕ ಧೋರಣೆ ಹೊಂದಿದ್ದಾರೆ. ಈ ನಗರದಲ್ಲಿ ಎಲ್ಲ ಪ್ರಜೆಗಳಿಗೂ ರಕ್ಷಣೆ ನೀಡುವ ವ್ಯವಸ್ಥೆ ಇದೆ. ಸಾರ್ವಜನಿಕರು ನೆಮ್ಮದಿಯಿಂದ ವಾಸ ಮಾಡಲು ಯೋಗ್ಯ ನಗರ. ಇಲ್ಲಿ ಪೊಲೀಸರನ್ನು ನಕಾತ್ಮಕವಾಗಿ ನೋಡುವುದಿಲ್ಲ.  ಮಕ್ಕಳಿರುವಾಗಲೇ ಕಾನೂನು ಪಾಲನೆಯ ಪ್ರಾಥಮಿಕ ಅರಿವು ಮೂಡಿಸುವ ಕಾರ್ಯ ನಡೆಸಿರುವುದು ಇದಕ್ಕೆ ಕಾರಣ’ ಎಂದು ಪರಮೇಶ್ವರ್‌ ಹೇಳಿದರು.
ಬವೇರಿಯದಲ್ಲಿ ವಿವಿಧ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾರೆ ಎಂಬ ಬಗ್ಗೆ ಪೊಲೀಸರಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಕಳ್ಳರು, ಕೊಲೆಗಾರರು, ಗುಂಪು ಘರ್ಷಣೆ, ಹೀಗೆ ಎಲ್ಲದಕ್ಕೂ ಪ್ರತ್ಯೇಕವಾಗಿ ತರಬೇತಿ ನೀಡಲಾಗುತ್ತದೆ ಎಂದರು.

ಕೋಸ್ಟಲ್‌ ಗಾರ್ಡ್‌ ಅಕಾಡೆಮಿ: ಕರಾವಳಿ ರಕ್ಷಣೆಗಾಗಿ ಕೋಸ್ಟಲ್‌ ಗಾರ್ಡ್‌ ಸಿಬ್ಬಂದಿಗೆ ತರಬೇತಿ ನೀಡಲು ಉಡುಪಿಯಲ್ಲಿ ಕೋಸ್ಟಲ್‌ ಗಾರ್ಡ್‌ ಅಕಾಡೆಮಿ ಸ್ಥಾಪಿಸಲು 25 ಎಕರೆ ಜಾಗ ಗುರುತಿಸಲಾಗಿದೆ ಎಂದು ಪರಮೇಶ್ವರ್‌ ಹೇಳಿದರು. ಇದರ ಸ್ಥಾಪನೆಗೆ ಕೇಂದ್ರ ಸರ್ಕಾರದಿಂದ ₹ 100 ಕೋಟಿ  ನೆರವು ಕೇಳಿದ್ದೇವೆ ಎಂದು ಹೇಳಿದರು.

‘ಆರ್ಡರ್ಲಿ ಪದ್ಧತಿ ಶೀಘ್ರ ರದ್ದು’
ಪೊಲೀಸ್‌ ಇಲಾಖೆಯಲ್ಲಿರುವ ಆರ್ಡರ್ಲಿ ಪದ್ಧತಿಯನ್ನು ಆದಷ್ಟು ಬೇಗ ರದ್ದು ಮಾಡುವುದಾಗಿ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ತಿಳಿಸಿದರು.‘ಈ ಪದ್ಧತಿಯನ್ನು ಏಕಾಏಕಿ ರದ್ದು ಮಾಡಲು ಸಾಧ್ಯವಾಗದಿದ್ದರೂ ಅತಿ ಶೀಘ್ರವೇ ರದ್ದು ಮಾಡುತ್ತೇವೆ’ ಎಂದರು.

‘ಈ ವ್ಯವಸ್ಥೆಯನ್ನು ರದ್ದು ಮಾಡುವುದಕ್ಕೆ ಮುನ್ನ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ. ಈ ಸಂಬಂಧ ಪ್ರಸ್ತಾವನೆಯು ಇಲಾಖೆ ಮುಂದಿದೆ. ಕಾರ್ಯಸಾಧ್ಯತೆ ಪರಿಶೀಲನೆ ನಡೆಸುತ್ತಿದ್ದೇವೆ’ ಎಂದರು.
ಪರ್ಯಾಯ ವ್ಯವಸ್ಥೆಯಲ್ಲಿ ಮುಖ್ಯವಾಗಿ ಅಧಿಕಾರಿಗಳು ತಮಗೆ ಬೇಕಾದವರನ್ನು ನೇಮಿಸಿಕೊಳ್ಳಬಹುದು. ಅದಕ್ಕೆ ಸಂಬಳವನ್ನು ಸರ್ಕಾರದಿಂದಲೇ ನೀಡಲಾಗುತ್ತದೆ. ಮಂತ್ರಿಗಳು ಹೊರಗಿನಿಂದ ಪಿಎ, ಪಿಎಸ್‌ ತೆಗೆದುಕೊಳ್ಳುವ ರೀತಿಯಲ್ಲೇ ಅಧಿಕಾರಿಗಳು ನೇಮಕ ಮಾಡಿಕೊಳ್ಳಬಹುದು. ಆದರೆ, ಅವರು ಸರ್ಕಾರದ ಕಾಯಂ ಸಿಬ್ಬಂದಿ ಆಗಿರುವುದಿಲ್ಲ. ಅಧಿಕಾರಿಗಳು ತಾವಿರುವಷ್ಟು ದಿನ ಇಟ್ಟುಕೊಳ್ಳಬಹುದು’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.