ADVERTISEMENT

ಜಮೀನಿಗೆ ರಾಜಕಾಲುವೆ ನೀರು: ಆರೋಪ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2016, 20:11 IST
Last Updated 27 ಆಗಸ್ಟ್ 2016, 20:11 IST
ನಾಗರಾಜ್‌ ಜಮೀನಿನ ಬಳಿ ರಾಜಕಾಲುವೆಯ ಕೊಳಚೆ ನೀರು ಸಂಗ್ರಹಗೊಂಡಿದೆ
ನಾಗರಾಜ್‌ ಜಮೀನಿನ ಬಳಿ ರಾಜಕಾಲುವೆಯ ಕೊಳಚೆ ನೀರು ಸಂಗ್ರಹಗೊಂಡಿದೆ   

ಬೆಂಗಳೂರು: ‘ನಕ್ಷೆ ಪ್ರಕಾರ ಇರುವ ರಾಜಕಾಲುವೆಯನ್ನು ಮುಚ್ಚಿ ಬೇರೆಡೆ ತಿರುಗಿಸಿರುವುದರಿಂದ ಕೊಳಚೆ ನೀರು ನಮ್ಮ ಜಮೀನಿನಲ್ಲಿ ಸಂಗ್ರಹಗೊಳ್ಳುತ್ತಿದೆ’ ಎಂದು ಯಲಹಂಕ ನಿವಾಸಿ ನಾಗರಾಜ್‌ ಆರೋಪಿಸಿದರು.

‘ಯಲಹಂಕದ ಅಮಾನಿಕೆರೆಯ ಬಳಿ ಸರ್ವೆ ಸಂಖ್ಯೆ 46/1 ಹಾಗೂ 46/8 ರಲ್ಲಿ  ಹಾದುಹೋಗಿರುವ ರಾಜಕಾಲುವೆಯನ್ನು ಮಣ್ಣಿನಿಂದ ಮುಚ್ಚಿ, ಕಾಲುವೆಯನ್ನು ಬೇರೆಡೆಗೆ ತಿರುಗಿಸಲಾಗಿದೆ. ಇದರಿಂದ ಕೆರೆಯ ಕೊನೆಯ ಭಾಗದಲ್ಲಿ ಕಲುಷಿತ ನೀರು ಸಂಗ್ರಹವಾಗುತ್ತಿದೆ. ಈ ಪ್ರದೇಶದಲ್ಲಿ ದುರ್ವಾಸನೆ ಬೀರುತ್ತಿದ್ದು, ಸೊಳ್ಳೆಗಳ ಆವಾಸ ಸ್ಥಾನವಾಗಿ ಮಾರ್ಪಾಟಾಗಿದೆ’ ಎಂದರು.

‘ಕೇಂದ್ರೀಯ ವಿಹಾರ ಜನವಸತಿ ಪ್ರದೇಶದ ಕೊಳಚೆ ನೀರು ಹರಿದು ಹೋಗುವ ರಾಜಕಾಲುವೆಯನ್ನೂ ಮುಚ್ಚಲಾಗಿದೆ. ಇದರಿಂದ ಕೆರೆ ಕೋಡಿ ಬಿದ್ದ ಸಂದರ್ಭದಲ್ಲಿ ನೀರು ಹಿಮ್ಮುಖವಾಗಿ ಹರಿದು ಜನವಸತಿ ಪ್ರದೇಶ ಸೇರಿದಂತೆ ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗುವ ಸಂಭವವಿದೆ’ ಎಂದರು.

‘ಈ ಬಗ್ಗೆ ಕಳೆದ ನಾಲ್ಕು ವರ್ಷಗಳಿಂದಲೂ ಪಾಲಿಕೆಯ ರಾಜಕಾಲುವೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಕಚೇರಿ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಬಿಬಿಎಂಪಿ ಯಲಹಂಕ ವಲಯದ ಕಾರ್ಯಪಾಲಕ ಎಂಜಿನಿಯರ್‌ ಅವರಿಗೂ ದೂರು ನೀಡಿ, ಮಾಹಿತಿ ಹಕ್ಕು ಕಾಯ್ದೆಯಡಿ ಉತ್ತರ ನೀಡಲು ಕೋರಲಾಗಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.