ADVERTISEMENT

ಜಯದೇವ: ಮತ್ತೊಂದು ಡಿಲಕ್ಸ್‌ ವಾರ್ಡ್‌ ಬ್ಲಾಕ್‌

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2015, 19:39 IST
Last Updated 27 ಫೆಬ್ರುವರಿ 2015, 19:39 IST

ಬೆಂಗಳೂರು: ಜಯದೇವ ಹೃದ್ರೋಗ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆ ಯಲ್ಲಿ ನೂತ­ನ­ವಾಗಿ ನಿರ್ಮಿಸಲಾ ಗಿರುವ ಸುಸ­ಜ್ಜಿತ ಡಿಲಕ್ಸ್‌ ವಾರ್ಡ್‌ ಬ್ಲಾಕ್‌ನ ಉದ್ಘಾಟನೆ ಶುಕ್ರವಾರ ನಡೆಯಿತು.

ಆರನೇ ಮಹಡಿಯಲ್ಲಿ ₹ 1.25 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಬ್ಲಾಕ್‌ನಲ್ಲಿ 20 ಕೊಠಡಿಗಳಿವೆ. 8 ಸಾವಿರ ಚದರ ಅಡಿ ವಿಸ್ತೀರ್ಣದ ಬ್ಲಾಕ್‌ನಲ್ಲಿ 20 ಹಾಸಿಗೆಗಳ ಸೌಲಭ್ಯ­ವಿದೆ. ಪ್ರತಿ ಕೊಠಡಿಯಲ್ಲಿ ಹೈಡ್ರೋಲಿಕ್‌ ಮಂಚ, ಆಕ್ಸಿಜನ್‌ ಲೈನ್‌, ಶೌಚಾಲಯ, ಹವಾನಿಯಂತ್ರಿತ ವ್ಯವಸ್ಥೆ, ಫ್ಯಾನ್‌, ಟಿ.ವಿ, ದೂರವಾಣಿ, ಕಾಲಿಂಗ್‌ ಬೆಲ್‌, ಸಹಾಯಕರು ಮಲಗಲು ಮಂಚ, ಇಂಡಕ್ಷನ್‌ ಸ್ಟವ್‌ ಸೌಲಭ್ಯವಿದೆ.

10 ಕೊಠಡಿಗಳಲ್ಲಿ ತಲಾ ಒಬ್ಬರು ಹಾಗೂ 5 ಕೊಠಡಿಗಳಲ್ಲಿ ತಲಾ ಇಬ್ಬರು ರೋಗಿಗಳು ಉಳಿದುಕೊಳ್ಳಲು ವ್ಯವಸ್ಥೆ ಇದೆ. ಒಂದು ಹಾಸಿಗೆಯ ಕೊಠಡಿಗೆ ದಿನಕ್ಕೆ ₹ 3,000 ಹಾಗೂ ಎರಡು ಹಾಸಿಗೆಯ ಕೊಠಡಿಗೆ   ₹ 3,500 ದರ ನಿಗದಿ­ಪಡಿಸ­ಲಾಗಿದೆ. ಇದಲ್ಲದೇ, ಈ ಬ್ಲಾಕ್‌ನಲ್ಲಿ ಸಂದರ್ಶಕರ ಕೊಠಡಿ, ವೈದ್ಯರ ಕೊಠಡಿ, ನರ್ಸ್‌ಗಳ ಕೊಠಡಿಗಳಿವೆ.

ಬ್ಲಾಕ್‌ ಉದ್ಘಾಟಿಸಿ ಮಾತನಾಡಿದ ರಾಜ್ಯಪಾಲ ವಜುಭಾಯಿ ವಾಲಾ, ‘ಇಡೀ ಭಾರತದಲ್ಲಿ ಈ ರೀತಿಯ ಸೌಲಭ್ಯ ಇರುವ ಸರ್ಕಾರಿ ಆಸ್ಪತ್ರೆ ಇಲ್ಲ. ಚಿಕಿತ್ಸೆಗೆಂದು ಸರ್ಕಾರಿ ಆಸ್ಪತ್ರೆಗಳಿಗೆ ಹೋಗುವವರ ಸಂಖ್ಯೆ ಕಡಿಮೆ. ಆದರೆ, ಇಲ್ಲಿಗೆ ವರ್ಷಕ್ಕೆ 3.7 ಲಕ್ಷ ಮಂದಿ ಚಿಕಿತ್ಸೆಗೆ ಬರುತ್ತಾರೆ ಎಂದು ಕೇಳಿ ಅಚ್ಚರಿ ಯಾಯಿತು. ಅಮೆರಿಕ, ಬ್ರಿಟನ್‌ನಿಂದ ಕೂಡ ಚಿಕಿತ್ಸೆ ಹಾಗೂ ಜ್ಞಾನಾ ರ್ಜನೆಗೆಂದು ಬರುತ್ತಿದ್ದಾರೆ’ ಎಂದು ಶ್ಲಾಘಿಸಿದರು.

‘ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದವರಿಗೆ ಶೇ 70ರಷ್ಟು ಚಿಕಿತ್ಸೆಯ ವೆಚ್ಚ ಭರಿಸುತ್ತಿದೆ. ಇನ್ನುಳಿದ ಶೇ 30ರಷ್ಟು ವೆಚ್ಚ ಭರಿಸಿದರೆ ಇಡೀ ದೇಶದಲ್ಲಿ ಉಚಿತವಾಗಿ ಚಿಕಿತ್ಸೆ ನೀಡುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗ­ಬಹುದು’ ಎಂದು ಸಲಹೆ ನೀಡಿದರು.

ಸಂಸ್ಥೆಯ ನಿರ್ದೇಶಕ ಡಾ. ಮಂಜುನಾಥ್‌, ‘ಬೇರೆ ರಾಜ್ಯಗಳಿಂದ ಶ್ರೀಮಂತರು ಚಿಕಿತ್ಸೆಗೆಂದು ಈ ಆಸ್ಪತ್ರೆಗೆ ಬರುತ್ತಿದ್ದಾರೆ. ಹಾಗಾಗಿ ಈ ವ್ಯವಸ್ಥೆ ಕಲ್ಪಿ ಸಲಾಗಿದೆ. ಈಗಾಗಲೇ ಐದನೇ ಮಹ ಡಿಯಲ್ಲೂ ಡಿಲಕ್ಸ್‌ ವಾರ್ಡ್‌ ಬ್ಲಾಕ್‌ ಇದೆ. ನೂತನ ವ್ಯವಸ್ಥೆಯೂ ಸೇರಿ ಆಸ್ಪತ್ರೆ ಯಲ್ಲಿನ ಹಾಸಿಗೆ ಸಂಖ್ಯೆ 640ಕ್ಕೇರಿದೆ’ ಎಂದರು.

‘ರಾಷ್ಟ್ರೀಯ ಆಸ್ಪತ್ರೆಗಳ ಮಾನ್ಯತಾ ಮಂಡಳಿಯು ಮಾರ್ಚ್‌ನಲ್ಲಿ ಆಸ್ಪತ್ರೆಗೆ ಭೇಟಿ ನೀಡಿ ಸೌಲಭ್ಯ ಪರಿಶೀಲಿಸಲಿದೆ. ಮಾನ್ಯತೆ ಲಭಿಸುವ ಭರವಸೆ ಇದೆ. ದೇಶದಲ್ಲಿ ಸರ್ಕಾರದ ಯಾವುದೇ ಆಸ್ಪತ್ರೆಗಳಿಗೆ ಇದುವರೆಗೆ ಮಂಡಳಿಯ ಮಾನ್ಯತೆ ಲಭಿಸಿಲ್ಲ’ ಎಂದು ಹೇಳಿದರು. 

‘ಪ್ಯಾಕ್ಸ್ ವ್ಯವಸ್ಥೆಗೆ ಚಾಲನೆ’
ರೋಗಿಯ ಹೃದಯ ಚಿಕಿತ್ಸೆ ಹಂತಗಳ ಬಗ್ಗೆ ಪೂರ್ಣ ಮಾಹಿತಿ ನೀಡುವ ‘ಪಿಕ್ಚರ್‌ ಆರ್ಕೈವಲ್‌ ಕಮ್ಯೂನಿಕೇಷನ್‌ ಸಿಸ್ಟಮ್‌’ (ಪ್ಯಾಕ್ಸ್‌) ಸಾಫ್ಟ್‌ವೇರ್‌ ವ್ಯವಸ್ಥೆಗೆ ಸಚಿವ ಶರಣಪ್ರಕಾಶ್‌ ಪಾಟೀಲ ಚಾಲನೆ ನೀಡಿದರು. ಈ ವ್ಯವಸ್ಥೆಯಡಿ ಎಕ್ಸರೇ, ಸಿ.ಟಿ.ಸ್ಕ್ಯಾನ್‌, ನ್ಯೂಕ್ಲಿಯರ್‌ ಸ್ಕ್ಯಾನ್‌, ಆಂಜಿಯೊಗ್ರಾಮ್‌, ಟ್ರೆಡ್‌ಮಿಲ್‌ ರಿಪೋರ್ಟ್‌ ದಾಖಲೆಗಳನ್ನು ಕಂಪ್ಯೂಟರ್‌ನಲ್ಲಿ ಸಂಗ್ರಹಿಸಿಡಬಹುದು.

ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದ ಡಾ.ಮಂಜುನಾಥ್‌, ‘ಆಸ್ಪತ್ರೆಯಲ್ಲಿ 40 ಕಂಪ್ಯೂಟರ್‌ಗಳಲ್ಲಿ ಈ ವ್ಯವಸ್ಥೆ ಲಭ್ಯವಾಗಲಿದೆ. ಶಸ್ತ್ರಚಿಕಿತ್ಸೆ ನಡೆಸುವಾಗ ಹಾಗೂ ಇತರ ಸಂದರ್ಭಗಳಲ್ಲಿ ರೋಗಿಯ ಬಗ್ಗೆ ಮಾಹಿತಿ ಬೇಕೆಂದರೆ ಕಂಪ್ಯೂಟರ್‌ ನೆರವಿನಿಂದ ಕ್ಷಣಾರ್ಧದಲ್ಲಿ ಎಲ್ಲಾ ವರದಿಗಳನ್ನು ತೆರೆದು ಪರಿಶೀಲಿಸಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT