ADVERTISEMENT

ಜಯನಗರ ತ್ಯಾಜ್ಯ ಘಟಕದಿಂದ ಪ್ಯಾರಿಸ್‌ಗೆ!

ಜಗತ್ತಿನ ತಜ್ಞರಿಗೆ ನಗರದ ಯುವಕನಿಂದ ಕಸದ ಪಾಠ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2015, 20:12 IST
Last Updated 30 ನವೆಂಬರ್ 2015, 20:12 IST

ಬೆಂಗಳೂರು: ಜಾಗತಿಕ ಹವಾಮಾನ ವೈಪರೀತ್ಯದ ಕುರಿತು ನಡೆದಿರುವ ಶೃಂಗಸಭೆಯಲ್ಲಿ ಪಾಠ ಮಾಡಲು ನಗರದ ಯುವಕ ಮನ್ಸೂರ್‌ ಅಹ್ಮದ್‌ ಪ್ಯಾರಿಸ್‌ಗೆ ಹಾರಿದ್ದಾರೆ.

ಜಯನಗರದಲ್ಲಿ ಒಣತ್ಯಾಜ್ಯ ಘಟಕ ನಿರ್ವಹಣೆ ಮಾಡುತ್ತಿರುವ ಈ ಯುವಕ, ಕಸ ನಿರ್ವಹಣೆಗೆ ಸಂಬಂಧಿಸಿದಂತೆ ಮಾತನಾಡಲು ಅವಕಾಶ ಪಡೆದ ಭಾರತದ ಏಕೈಕ ವ್ಯಕ್ತಿ. ಔರಂಗಾಬಾದ್‌ನ ಆಶಾಬಾಯಿ ಎಂಬುವವರೂ ಆಹ್ವಾನ ಪಡೆದಿದ್ದರು. ಆದರೆ, ವೀಸಾ ಸಮಸ್ಯೆಯಿಂದ ಅವರಿಗೆ ಪ್ಯಾರಿಸ್‌ಗೆ ತೆರಳಲು ಸಾಧ್ಯವಾಗಿಲ್ಲ. 

ತ್ಯಾಜ್ಯ ವಿಂಗಡಣೆ ಮಾಡುವ ಸಂಬಂಧ ಜನರಲ್ಲಿ ಹೇಗೆ ಜಾಗೃತಿ ಉಂಟು ಮಾಡಲಾಯಿತು ಎಂಬ ವಿಷಯವಾಗಿ ಮನ್ಸೂರ್‌ ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ. ಏಳು ವರ್ಷದ ಬಾಲಕನಾಗಿದ್ದ ದಿನಗಳಿಂದಲೂ ಕಸದ ಕಾರ್ಯಕರ್ತರಾಗಿರುವ ಮನ್ಸೂರ್‌, ತ್ಯಾಜ್ಯ ನಿರ್ವಹಣೆಯಲ್ಲಿ ಈಗ 25 ವರ್ಷಗಳ ಅನುಭವ ಹೊಂದಿದ್ದಾರೆ.

ಕಸ ಆಯುವವರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ‘ಹಸಿರು ದಳ’ ಸಂಸ್ಥೆ ಮೂಲಕ ಮನ್ಸೂರ್‌ ಅವರಿಗೆ ಈ ಅವಕಾಶ ಲಭ್ಯವಾಗಿದೆ.
ಮನ್ಸೂರ್‌ ಅವರಿಗೆ ಆರು ಸಹೋದರಿಯರು ಮತ್ತು ಇಬ್ಬರು ಸಹೋದರರಿದ್ದಾರೆ. ಅವರು ಐದನೇ ತರಗತಿಯಲ್ಲಿ ಓದುತ್ತಿದ್ದಾಗ ತಂದೆ ತೀರಿಕೊಂಡರು. ಶಾಲೆ ಬಿಟ್ಟ ಮನ್ಸೂರ್‌ ಕುಟುಂಬದ ಸಹಾಯಕ್ಕೆ ನಿಂತರು.

ಅವರ ಪಾಲಕರು ಒಂದು ಸಣ್ಣ ಗುಜರಿ ಅಂಗಡಿ ನಡೆಸುತ್ತಿದ್ದರು. ಅದರಲ್ಲಿ ಗುಜರಿಯನ್ನು ಪ್ರತ್ಯೇಕಗೊಳಿಸುವುದು ಮನ್ಸೂರ್‌ ಕೆಲಸವಾಗಿತ್ತು. ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಆ ಅಂಗಡಿಯನ್ನು ಮುಚ್ಚಬೇಕಾಯಿತು.

ಹಸಿರು ದಳದ ಸಂಪರ್ಕಕ್ಕೆ ಬಂದ ಮನ್ಸೂರ್‌ ಮತ್ತೆ ಒಣತ್ಯಾಜ್ಯ ವಹಿವಾಟು ಆರಂಭಿಸಿದರು. ನಿತ್ಯ 120 ಕೆ.ಜಿಯಷ್ಟು ಗುಜರಿ ಸಂಗ್ರಹ ಆಗುತ್ತಿತ್ತು. ಐದು ಅಪಾರ್ಟ್‌ಮೆಂಟ್‌ಗಳಿಗೂ ಸೇವೆ ಒದಗಿಸಿದ ಅವರು ನಿತ್ಯ ಒಂದು ಟನ್‌ನಷ್ಟು ಗುಜರಿ ಸಂಗ್ರಹ ಮಾಡತೊಡಗಿದರು.

ಕನ್ನಡ, ಹಿಂದಿ, ಉರ್ದು ಮತ್ತು ತಮಿಳು ಭಾಷೆಗಳನ್ನು ಮಾತನಾಡಬಲ್ಲ ಮನ್ಸೂರ್‌, ಒಳ್ಳೆಯ ವಹಿವಾಟು ನಡೆಸುತ್ತಾರೆ. ಕೆಲವು ಕುಟುಂಬಗಳಿಗೆ ಆಶ್ರಯ ನೀಡುವಷ್ಟು ಅವರೀಗ ಬೆಳೆದಿದ್ದಾರೆ ಎನ್ನುತ್ತಾರೆ ಹಸಿರು ದಳದ ಮುಖ್ಯಸ್ಥೆ ನಳಿನಿ ಶೇಖರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.