ADVERTISEMENT

ಜಯಾ ಪ್ರಕರಣ: ಮೇಲ್ಮನವಿ ವಿಚಾರಣೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 25 ಮೇ 2015, 19:49 IST
Last Updated 25 ಮೇ 2015, 19:49 IST

ಬೆಂಗಳೂರು: ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರನ್ನು ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ದೋಷಮುಕ್ತಗೊಳಿಸಿದ ಹೈಕೋರ್ಟ್‌ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಬಗ್ಗೆ ಸೋಮವಾರ ನಡೆದ ಸಚಿವ ಸಂಪುಟ ಸಭೆ ಯಾವುದೇ ತೀರ್ಮಾನ ಕೈಗೊಂಡಿಲ್ಲ.

‘ಇನ್ನೊಂದಿಷ್ಟು ಮಾಹಿತಿ ಕಲೆ ಹಾಕೋಣ. ಈ ವಿಷಯವನ್ನು ಮತ್ತೆ ಚರ್ಚಿಸೋಣ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆಯಲ್ಲಿ ಹೇಳಿದರು ಎಂದು ಗೊತ್ತಾಗಿದೆ. ಈ ಪ್ರಕರಣದಲ್ಲಿ ಹೈಕೋರ್ಟ್‌ ನೀಡಿರುವ ಆದೇಶ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಸೂಕ್ತ ಎಂದು ಪ್ರಕರಣದ ಪ್ರಾಸಿಕ್ಯೂಟರ್,  ವಕೀಲ ಬಿ.ವಿ. ಆಚಾರ್ಯ ಅವರು ಸರ್ಕಾರಕ್ಕೆ ವರದಿ ನೀಡಿದ್ದಾರೆ.

‘ಅಡ್ವೊಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್, ಕಾನೂನು ಇಲಾಖೆ ಮತ್ತು ಆಚಾರ್ಯ ಅವರ ಕಾನೂನು ಅಭಿಪ್ರಾಯಗಳಿಗೆ ಸಂಬಂಧಿಸಿದಂತೆ ಕೆಲವು ವಿವರಣೆಗಳು ಬೇಕಿವೆ. ವಿವರಣೆ ಪಡೆದ ನಂತರವೇ ಈ ಕುರಿತು ಚರ್ಚಿಸುವುದು ಸೂಕ್ತ’ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರು ಸಭೆಯಲ್ಲಿ ಹೇಳಿದರು ಎನ್ನಲಾಗಿದೆ.

‘ಮೇಲ್ಮನವಿ ಸಲ್ಲಿಸುವ ಸಂಬಂಧ ನೀವೇ ಒಂದು ತೀರ್ಮಾನ ಕೈಗೊಳ್ಳಿ. ನಾವು ಅದನ್ನು ಬೆಂಬಲಿಸುತ್ತೇವೆ’ ಎಂದು ಕೆಲವು ಸಚಿವರು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೇಳಿದರು ಎಂದು ಗೊತ್ತಾಗಿದೆ. ಆದರೆ, ‘ಇನ್ನಷ್ಟು ಮಾಹಿತಿ ಪಡೆದು ಮುಂದಡಿ ಇಡೋಣ’ ಎಂದು ಮುಖ್ಯಮಂತ್ರಿಯವರು ಹೇಳಿದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.