ADVERTISEMENT

ಜಾರಿ ನಿರ್ದೇಶನಾಲಯಕ್ಕೆ ನೋಟಿಸ್‌ ಜಾರಿಗೆ ಆದೇಶ

ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪತ್ನಿ ಮೇಲ್ಮನವಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2016, 19:39 IST
Last Updated 8 ಫೆಬ್ರುವರಿ 2016, 19:39 IST

ಬೆಂಗಳೂರು: ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು  ಹಾಗೂ ಇಟಾಸ್ಕಾ ಕಂಪೆನಿ ವಿರುದ್ಧ ಜಾರಿ ನಿರ್ದೇಶನಾಲಯ ದಾಖಲಿಸಿರುವ ಲೇವಾದೇವಿ ಅಕ್ರಮ  ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ  ಯಾವುದೇ ಒತ್ತಾಯಪೂರ್ವಕ ಕ್ರಮಕ್ಕೆ ಮುಂದಾಗಬಾರದು ಎಂದು ಹೈಕೋರ್ಟ್‌ ಆದೇಶಿಸಿದೆ.

ಈ ಸಂಬಂಧ ಕಟ್ಟಾ ಸುಬ್ರಹ್ಮಣ್ಯ ನಾಯ್ಡು  ಅವರ ಪತ್ನಿ ಕೆ.ಸೌಭಾಗ್ಯ ಸಲ್ಲಿಸಿರುವ ಮೇಲ್ಮನವಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಹಾಗೂ ನ್ಯಾಯಮೂರ್ತಿ ರವಿ ಮಳಿಮಠ ಅವರಿದ್ದ ವಿಭಾಗೀಯ ಪೀಠವು ಸೋಮವಾರ ವಿಚಾರಣೆ ನಡೆಸಿತು.

ಪ್ರಕರಣ ಪ್ರತಿವಾದಿಗಳಾದ ಕೇಂದ್ರ ಹಣಕಾಸು ಇಲಾಖೆಯ ಕಾರ್ಯದರ್ಶಿ, ಜಾರಿ ನಿರ್ದೇಶನಾಲಯದ ನಿರ್ದೇಶಕರು ಹಾಗೂ ಜಾರಿ ನಿರ್ದೇಶನಾಲಯದ ಬೆಂಗಳೂರು ವಲಯದ ಜಂಟಿ ನಿರ್ದೇಶಕರಿಗೆ ನೋಟಿಸ್‌ ಜಾರಿಗೊಳಿಸಲು ಪೀಠವು ಆದೇಶಿಸಿದೆ.

ಇಟಾಸ್ಕ ಸಾಫ್ಟ್‌ವೇರ್‌ ಡೆವಲಪ್‌ಮೆಂಟ್‌ ಕಂಪೆನಿ ಸೇರಿದಂತೆ ಕಟ್ಟಾ ಅವರ ಕುಟುಂಬ ಹಾಗೂ ಇತರ  23 ಜನರ ವಿವಿಧ ಸ್ಥಿರ ಮತ್ತು ಚರಾಸ್ತಿ ಹಾಗೂ 141 ದಾಖಲೆಗಳನ್ನು ಜಾರಿ ನಿರ್ದೇಶನಾಲಯ 2012ರ ಸೆಪ್ಟೆಂಬರ್‌ 25ರಂದು ಮುಟ್ಟುಗೋಲು ಹಾಕಿಕೊಂಡಿತ್ತು. ಇದನ್ನು  ಸೌಭಾಗ್ಯ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಈ ರಿಟ್‌ ಅರ್ಜಿ ವಿಚಾರಣೆ ನಡೆಸಿದ್ದ  ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಅವರಿದ್ದ ಏಕಸದಸ್ಯ ಪೀಠವು ಇತ್ತೀಚೆಗಷ್ಟೇ ಅರ್ಜಿಯನ್ನು ವಜಾ ಮಾಡಿತ್ತು.

‘ಯಾರಾದರೂ ರಾಷ್ಟ್ರೀಯ ಭದ್ರತೆಗೆ ಧಕ್ಕೆ ಉಂಟು ಮಾಡಿದ್ದರೆ ಅಥವಾ ಆರೋಪಿಯು ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿದ್ದ ಎಂಬ ಸನ್ನಿವೇಶದಲ್ಲಿ ಮಾತ್ರವೇ ಲೇವಾದೇವಿ ಕಾಯ್ದೆ ಅನ್ವಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. ಆದರೆ ನಮ್ಮ ಕುಟುಂಬ ಅಂತಹ ಯಾವುದೇ ಕಾನೂನುಬಾಹಿರ ಚಟುವಟಿಕೆ ನಡೆಸಿಲ್ಲ.  ಹೀಗಾಗಿ ಈ ಕ್ರಮ  ಸಾಂವಿಧಾನಿಕವಾಗಿ ನ್ಯಾಯಸಮ್ಮತವಾಗಿಲ್ಲ. ಆದ್ದರಿಂದ ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿರುವ ದಾಖಲೆಗಳನ್ನು ಹಿಂದಿರುಗಿಸಬೇಕು ಮತ್ತು ಆಸ್ತಿಯನ್ನು ವಶಕ್ಕೆ ನೀಡಬೇಕು’ ಎಂದು ಸೌಭಾಗ್ಯ ಕೋರಿದ್ದರು.

ಕುಲಪತಿಗೆ ಹೈಕೋರ್ಟ್‌ ನೋಟಿಸ್‌
ಮತ್ತೊಂದು ಪ್ರಕರಣದಲ್ಲಿ ಕಾಲೇಜುಗಳ ಸ್ಥಳೀಯ ತನಿಖಾ ಸಮಿತಿಯಲ್ಲಿನ ಸದಸ್ಯರ ನೇಮಕ ವಿಷಯಕ್ಕೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಇಲಾಖೆಯ ಉಪ ಕಾರ್ಯದರ್ಶಿ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗೆ ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.

ಈ ಕುರಿತಂತೆ ತಿಪ್ಪಸಂದ್ರ ಮುಖ್ಯ ರಸ್ತೆಯ ನಿವಾಸಿ ಜಯಚಂದ್ರ ರೆಡ್ಡಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಅಶೋಕ ಬಿ. ಹಿಂಚಿಗೇರಿ ಅವರಿದ್ದ ಏಕಸದಸ್ಯ ಪೀಠವು ಸೋಮವಾರ ವಿಚಾರಣೆ ನಡೆಸಿತು.

‘ಬೆಂಗಳೂರು ವಿಶ್ವವಿದ್ಯಾಲಯದ ಅಧೀನದಲ್ಲಿರುವ ಎಲ್ಲ ಕಾಲೇಜುಗಳ ಅಂಗೀಕೃತ ವಿಚಾರ ಹಾಗೂ ವಾರ್ಷಿಕ ತನಿಖೆಗೆ ಸಂಬಂಧಿಸಿದ ಸಮಿತಿಗೆ ಇಬ್ಬರು ಸ್ಥಳೀಯರನ್ನು ಸರ್ಕಾರವೇ ನೇಮಕ ಮಾಡಿದೆ. ಇದು ಕಾನೂನು ಬಾಹಿರ.  ಈ ಅಧಿಕಾರ ಸಿಂಡಿಕೇಟ್‌ಗೆ ಇದೆ’ ಎಂದು ಸರ್ಕಾರದ ಆದೇಶವನ್ನು ಪ್ರಶ್ನಿಸಿ ಈ ರಿಟ್‌  ಅರ್ಜಿ ಸಲ್ಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT