ADVERTISEMENT

ಜಾರಿ ನಿರ್ದೇಶನಾಲಯ ಆಕ್ಷೇಪ

ಜಾಮೀನು ಕಾರ್ಯರೂಪಕ್ಕೆ ಜಯಚಂದ್ರ ಕೋರಿಕೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 19:50 IST
Last Updated 23 ಮಾರ್ಚ್ 2017, 19:50 IST
ಬೆಂಗಳೂರು: ‘ನಿಯೋಜಿತ ವಿಶೇಷ ನ್ಯಾಯಾಲಯ ನೀಡಿರುವ ಜಾಮೀನು  ಆದೇಶ ಕಾರ್ಯರೂಪಕ್ಕೆ ತರುವಂತೆ ನಿರ್ದೇಶನ ನೀಡಬೇಕು’ ಎಂದು ಮನವಿ ಮಾಡಿ  ಜೈಲಿನಲ್ಲಿರುವ ಎಸ್‌.ಸಿ.ಜಯಚಂದ್ರ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದಾರೆ.
 
ಈ ಅರ್ಜಿಯನ್ನು ನ್ಯಾಯಮೂರ್ತಿ ಜಾನ್‌ ಮೈಕೆಲ್‌ ಕುನ್ಹ ಅವರಿದ್ದ ಏಕಸದಸ್ಯ ಪೀಠ ಗುರುವಾರ ವಿಚಾರಣೆ ನಡೆಸಿತು. 
 
ಜಯಚಂದ್ರ ಪರ ವಾದ ಮಂಡಿಸಿದ ಸಂದೀಪ್‌ ಪಾಟೀಲ್, ‘ಅಧೀನ ನ್ಯಾಯಾಲಯ ಒಮ್ಮೆ ಜಾಮೀನು ಮಂಜೂರು ಮಾಡಿದ ಮೇಲೆ ಅದೇ ನ್ಯಾಯಾಲಯ ಅದನ್ನು ತಡೆಹಿಡಿಯುವುದು ಸರಿಯಲ್ಲ’ ಎಂದರು.
 
‘ಅಧೀನ ನ್ಯಾಯಾಲಯ ಇದೇ 9ರಂದು ನೀಡಿರುವ ಆದೇಶ ರದ್ದುಪಡಿಸಬೇಕು. ಜಾಮೀನು ಆದೇಶ ಕಾರ್ಯಗತಗೊಳ್ಳಲು ಸೂಕ್ತ  ಮಧ್ಯಂತರ ನಿರ್ದೇಶನ ನೀಡಬೇಕು’  ಎಂದು ಅವರು ಕೋರಿದರು.
 
ಇದಕ್ಕೆ ಜಾರಿ ನಿರ್ದೇಶನಾಲಯದ ಪರ ಎಸ್‌.ಮಹೇಶ್ ‘ಅರ್ಜಿದಾರರ ವಾದದಲ್ಲಿ ಹುರುಳಿಲ್ಲ’ ಎಂದರು. ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಲಾಗಿದೆ. 
 
ಕಳೆದ ವರ್ಷ ನವೆಂಬರ್ 30ರಂದು ಆದಾಯ ತೆರಿಗೆ ಅಧಿಕಾರಿಗಳು ಜಯಚಂದ್ರ ಮನೆಯ ಮೇಲೆ ದಾಳಿ ನಡೆಸಿ ₹2 ಸಾವಿರ ಮುಖಬೆಲೆಯ ₹5 ಲಕ್ಷ ಮೊತ್ತದ  ಹೊಸ ನೋಟು  ಸೇರಿದಂತೆ ಒಟ್ಟು ₹27 ಲಕ್ಷ ಅಕ್ರಮ ಹಣ  ವಶಪಡಿಸಿಕೊಂಡಿದ್ದರು.
 
ದಾಳಿ ಸಮಯದಲ್ಲಿ ಜಯಚಂದ್ರ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಗಳ ಮುಖ್ಯ ಯೋಜನಾಧಿಕಾರಿ ಆಗಿದ್ದರು. ಪ್ರಕರಣ ದಾಖಲಾದ ಮೇಲೆ ಅವರನ್ನು ಅಮಾನತುಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.