ADVERTISEMENT

ಜಿಇಎಸಿ ನಿರ್ಧಾರ: ರೈತರ ನಿಟ್ಟುಸಿರು

ಕುಲಾಂತರಿ ತಳಿ ವಿರುದ್ಧ ‘ಸಾಸಿವೆ ಸತ್ಯಾಗ್ರಹ’

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2016, 19:30 IST
Last Updated 5 ಫೆಬ್ರುವರಿ 2016, 19:30 IST

ಬೆಂಗಳೂರು: ಜೀವ ವೈವಿಧ್ಯಕ್ಕೆ ಧಕ್ಕೆ ತಂದೊಡ್ಡುವ ಕುಲಾಂತರಿ ಸಾಸಿವೆಯ ವಾಣಿಜ್ಯ ಕೃಷಿಗೆ ಅವಕಾಶ ನೀಡುವುದಕ್ಕೆ ಸಂಬಂಧಿಸಿದಂತೆ ಕುಲಾಂತರಿ ತಂತ್ರಜ್ಞಾನ ಅನುಮೋದನಾ ಸಮಿತಿ (ಜಿಇಎಸಿ) ಶುಕ್ರವಾರ ತನ್ನ ನಿರ್ಧಾರ ಮುಂದೂಡಿದ್ದನ್ನು ರೈತಪರ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಪರಿಸರವಾದಿಗಳು ಸ್ವಾಗತಿಸಿದ್ದಾರೆ.

‘ರೈತರ ಹೋರಾಟಕ್ಕೆ ಸಿಕ್ಕ ಜಯ ಇದಾಗಿದೆ. ಕುಲಾಂತರಿ ಸಾಸಿವೆಯ ವಾಣಿಜ್ಯ ಕೃಷಿಗೆ ಅವಕಾಶ ನೀಡುವ ಪ್ರಸ್ತಾವವನ್ನು ಸಂಪೂರ್ಣವಾಗಿ ಕೈಬಿಡುವವರೆಗೆ ಹೋರಾಟ ಮುಂದುವರಿಯಲಿದೆ’ ಎಂದು ಕುಲಾಂತರಿ ಮುಕ್ತ ಕರ್ನಾಟಕದ ಸಂಚಾಲಕ ಪಿ.ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಬಿ.ಟಿ. ಬದನೆಗೆ ಅವಕಾಶ ನೀಡುವ ಯತ್ನವನ್ನು ಜಿಇಎಸಿ ನಡೆಸಿದಾಗ ದೇಶದಾದ್ಯಂತ ವಿರೋಧ ವ್ಯಕ್ತವಾಗಿತ್ತು. ಬಳಿಕ ಬಿ.ಟಿ. ಬದನೆ ವಾಣಿಜ್ಯ ಕೃಷಿಗೆ ನಿರ್ಬಂಧ ವಿಧಿಸಲಾಗಿತ್ತು.

ದೆಹಲಿ ವಿಶ್ವವಿದ್ಯಾಲಯವು ‘ಧಾರಾ ಮಸ್ಟರ್ಡ್ ಹೈಬ್ರಿಡ್ 11 (ಡಿಎಂಎಚ್ 11) ಎಂಬ ಕುಲಾಂತರಿ ಸಾಸಿವೆ ತಳಿಯನ್ನು ಅಭಿವೃದ್ಧಿಪಡಿಸಿದೆ. ಆದರೆ ಅದರ ಸುರಕ್ಷತೆ ಬಗ್ಗೆ ಖಚಿತವಾದ ಸಂಶೋಧನೆ ನಡೆಯದೇ, ವಾಣಿಜ್ಯ ಕೃಷಿಗೆ ಅವಕಾಶ ಕೊಡಲು ಜಿಇಎಸಿ ಹವಣಿಸುತ್ತಿದೆ. ಅದರ ವಿರುದ್ಧ ದೇಶದಾದ್ಯಂತ ರೈತ ಸಂಘಟನೆಗಳು ಹೋರಾಟ ನಡೆಸುತ್ತಿವೆ ಎಂದು ಭಾರತ್ ಬೀಜ ಸ್ವರಾಜ್ ಮಂಚ್‌ನ ಸಂಚಾಲಕ ಜಿ.ಕೃಷ್ಣ ಪ್ರಸಾದ್ ಹೇಳಿದ್ದಾರೆ.

ಸಾಸಿವೆ ಸತ್ಯಾಗ್ರಹ: ಕುಲಾಂತರಿ ಸಾಸಿವೆಗೆ ವಿರೋಧ ವ್ಯಕ್ತಪಡಿಸಿ ಕಳೆದ ಆರು ತಿಂಗಳಿಂದ ಆಂದೋಲನ ನಡೆಯುತ್ತಿದೆ. ಈವರೆಗೆ 32 ಸಾವಿರಕ್ಕೂ ಹೆಚ್ಚು ಜನರು ಆಕ್ಷೇಪಣೆ ಸಲ್ಲಿಸಿದ್ದಾರೆ. ಕುಲಾಂತರಿ ಸಾಸಿವೆಗೆ ಅನುಮೋದನೆ ಕೊಡಲೇಬಾರದು ಎನ್ನುವುದು ಹೋರಾಟಗಾರರ ಮುಖ್ಯ ಬೇಡಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.