ADVERTISEMENT

ಟಿಟಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಸಾರಿಗೆ ಇಲಾಖೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2015, 19:58 IST
Last Updated 9 ಅಕ್ಟೋಬರ್ 2015, 19:58 IST

ಬೆಂಗಳೂರು:  ಟೆಂಪೊ ಟ್ರಾವೆಲರ್‌ನಲ್ಲಿ ಕಾಲ್‌ಸೆಂಟರ್‌ ಉದ್ಯೋಗಿಯೊಬ್ಬರ  ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದ ನಂತರ ಸಾರಿಗೆ ಇಲಾಖೆಯು ಟೆಂಪೊ ಟ್ರಾವೆಲರ್‌ ಮತ್ತು ಮ್ಯಾಕ್ಸಿ ಕ್ಯಾಬ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.

ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಇಲಾಖೆ ಹೊರಡಿಸಿರುವ ಮಾರ್ಗಸೂಚಿಗಳನ್ನು ಬಹುತೇಕ ಟೆಂಪೊ ಟ್ರಾವೆಲರ್‌ಗಳು ಮತ್ತು ಮ್ಯಾಕ್ಸಿ ಕ್ಯಾಬ್‌ಗಳು ಪಾಲಿಸುತ್ತಿಲ್ಲ.

ಹೀಗಾಗಿ ಮಾರ್ಗಸೂಚಿ ಪಾಲಿಸದ ಮತ್ತು ಪ್ರಯಾಣಿಕರ ಸುರಕ್ಷತೆಗೆ ಕ್ರಮ ಕೈಗೊಳ್ಳದ ಟಿಟಿಗಳನ್ನು ಪತ್ತೆ ಮಾಡಲು ಇಲಾಖೆ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದು, ಕಳೆದ ನಾಲ್ಕು ದಿನಗಳಲ್ಲಿ 350ಕ್ಕೂ ಹೆಚ್ಚು ಟಿಟಿಗಳನ್ನು ಇಲಾಖೆ ಜಪ್ತಿ ಮಾಡಿದೆ.

ನಗರದಲ್ಲಿ 20– 25 ಸಾವಿರ ಟಿಟಿ ಮತ್ತು ಮ್ಯಾಕ್ಸಿ ಕ್ಯಾಬ್‌ಗಳಿದ್ದು, ಬಹುತೇಕ ಟಿಟಿ ಮತ್ತು ಕ್ಯಾಬ್‌ಗಳು ಐಟಿ ಬಿಟಿ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಸೇವೆ ನೀಡುತ್ತಿವೆ.

ಸಾರಿಗೆ ಇಲಾಖೆಯು ವಿಶೇಷ ಕಾರ್ಯಾಚರಣೆ ಆರಂಭಿಸಿದ ನಂತರ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳದ ಟಿಟಿ ಮತ್ತು ಮ್ಯಾಕ್ಸಿ ಕ್ಯಾಬ್‌ಗಳು ಸಂಚಾರ ನಿಲ್ಲಿಸಿವೆ. ಹೀಗಾಗಿ ಉದ್ಯೋಗಿಗಳು ಸ್ವಂತ ಖರ್ಚಿನಲ್ಲಿ ಸಾರಿಗೆ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. 

ಈ ಬಗ್ಗೆ ಪ್ರತಿಕ್ರಿಯಿಸಿದ ಸರ್ಜಾಪುರದ ಐಟಿ ಉದ್ಯೋಗಿ ಆರ್‌.ದೀಪ್ತಿ, ‘ಕಳೆದ ಮೂರು ದಿನಗಳಿಂದ   ಕಂಪೆನಿ ಜತೆ ಒಪ್ಪಂದ ಮಾಡಿಕೊಂಡಿದ್ದ ಟಿಟಿಗಳು ಬರುತ್ತಿಲ್ಲ. ಪರ್ಯಾಯ ವ್ಯವಸ್ಥೆ ಮಾಡುವವರೆಗೂ ಸ್ವಂತ ವ್ಯವಸ್ಥೆ               ಮಾಡಿಕೊಳ್ಳುವಂತೆ ಕಂಪೆನಿ ಹೇಳಿದೆ. ಕೆಲಸ ಮುಗಿಸಿಕೊಂಡು ನಾನು ಮತ್ತು ಇಬ್ಬರು      ಸಹೋದ್ಯೋಗಿಗಳು ಆಟೊದಲ್ಲಿ ಪಿಜಿಗೆ  ಹೋಗುತ್ತೇವೆ. ಇದಕ್ಕೆ ₹ 250 ಖರ್ಚಾಗುತ್ತದೆ’ ಎಂದರು.

‘ಈ ಹಿಂದೆ ದಿನಕ್ಕೆ ಆರರಿಂದ ಏಳು ಬಾಡಿಗೆ ಸಿಗುತ್ತಿದ್ದವು. ಕಳೆದ ಮೂರು ದಿನಗಳಿಂದ  10–12  ಬಾಡಿಗೆ ಸಿಗುತ್ತಿವೆ.   ಬಾಡಿಗೆ ಬರುವವರಲ್ಲಿ ಬಹುತೇಕರು ಐಟಿ ಬಿಟಿ ಉದ್ಯೋಗಿಗಳು’ ಎಂದು ಟ್ಯಾಕ್ಸಿ ಚಾಲಕ ಮಂಜುನಾಥ್‌ ಎಂಬುವವರು  ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.