ADVERTISEMENT

ಟೆಂಡರ್‌ ಶ್ಯೂರ್‌ ಸರ್ಕಾರದ ಯೋಜನೆ

ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮಿನಾರಾಯಣ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2014, 19:30 IST
Last Updated 20 ಡಿಸೆಂಬರ್ 2014, 19:30 IST

ಬೆಂಗಳೂರು: ‘ನಗರದಲ್ಲಿ ನಡೆಯುತ್ತಿ­ರುವ ಟೆಂಡರ್‌ ಶ್ಯೂರ್‌ ಯೋಜನೆ­ಯನ್ನು ನೇರವಾಗಿ ನಗರಾಭಿವೃದ್ಧಿ ಇಲಾಖೆ ಕೈಗೆತ್ತಿಕೊಂಡಿದೆ. ಬಿಬಿಎಂಪಿ ಕೇವಲ ಅದನ್ನು ಅನುಷ್ಠಾನಗೊಳಿಸುವ ಹೊಣೆ ಹೊತ್ತಿದೆ’ ಎಂದು ಪಾಲಿಕೆ ಆಯುಕ್ತ ಎಂ.ಲಕ್ಷ್ಮಿನಾರಾಯಣ ಹೇಳಿದರು.

ಶನಿವಾರ ಪಾಲಿಕೆ ಕಚೇರಿಯಲ್ಲಿ ‘ನಗರಾಡಳಿತದಲ್ಲಿ ಜನರ ಭಾಗವಹಿಸುವಿಕೆ ಜನಾಂದೋಲನ’ದ (ಸಿಪಿಪಿಯುಜಿ) ಕಾರ್ಯಕರ್ತರೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.

‘ಟೆಂಡರ್‌ ಶ್ಯೂರ್‌ ಯೋಜನೆ ಪ್ರಸ್ತಾವವನ್ನು ಬೆಂಗಳೂರು ಸಿಟಿ ಕನೆಕ್ಟ್‌ ಫೌಂಡೇಷನ್‌ (ಬಿಸಿಸಿಎಫ್‌) ಎಂಬ ಸರ್ಕಾರೇತರ ಸಂಸ್ಥೆ 2011ರಲ್ಲಿ ಆಗಿನ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರ ಸರ್ಕಾರದ ಮುಂದೆ ಇಟ್ಟಿತ್ತು. ಇದಕ್ಕೆ ಒಪ್ಪಿಗೆ ನೀಡಿದ್ದ ಸರ್ಕಾರ ನಗರದ ಆಯ್ದ ರಸ್ತೆಗಳಲ್ಲಿ ಅದರ ಪ್ರಾಯೋಗಿಕ ಯೋಜನೆ ಜಾರಿಗೆ ತರಲು ಬಿಬಿಎಂಪಿಗೆ ರೂ100 ಕೋಟಿ ಅನುದಾನ ನೀಡಿತ್ತು’ ಎಂದು ಹೇಳಿದರು.

‘ಯೋಜನೆಯ ವಿನ್ಯಾಸವನ್ನು ಬಿಸಿಸಿಎಫ್‌ ಸದಸ್ಯರಾದ ರಮೇಶ್‌ ರಾಮನಾಥನ್‌, ಸ್ವಾತಿ ರಾಮನಾಥನ್‌ ಅವರೇ ರೂಪಿಸಿದ್ದರು. ರಸ್ತೆಗಳನ್ನು ಅಭಿವೃದ್ಧಿ ಮಾಡುವ ಹೊಣೆಯನ್ನು ಜನಾ ಅರ್ಬನ್‌ ಸ್ಪೇಸ್‌ ಫೌಂಡೇಷನ್‌ (ಜೆಯುಎಸ್‌ಪಿ) ಎಂಬ ಮತ್ತೊಂದು ಸಂಸ್ಥೆಗೆ ನೀಡಲಾಗಿದೆ’ ಎಂದು ತಿಳಿಸಿದರು.

‘ಬಿಬಿಎಂಪಿ ಈ ಯೋಜನೆಯಲ್ಲಿ ಒಂದು ಪೈಸೆ ಕೂಡ ವಿನಿಯೋಗಿಸಿಲ್ಲ. ನಗರಾಭಿವೃದ್ಧಿ ಇಲಾಖೆ ನೀಡಿದ ರೂ100 ಕೋಟಿಗಳಲ್ಲಿ ಈವರೆಗೆ ರೂ30 ಕೋಟಿಯ ಕಾಮಗಾರಿ ನಡೆದಿದೆ.  ಇದು ನಗರಾಭಿವೃದ್ಧಿ ಇಲಾಖೆ ಯೋಜನೆಯಾದ್ದ­ರಿಂದ ಯೋಜನೆ ಕುರಿತ ಯಾವುದೇ ಆಕ್ಷೇಪಕ್ಕೂ ಬಿಬಿಎಂಪಿ ವತಿಯಿಂದ ಉತ್ತರಿಸಲಾಗದು’ ಎಂದರು.

ಬೃಹತ್‌ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷೆ ಗೀತಾ ವಿವೇಕಾನಂದ ಮಾತನಾಡಿ, ‘ಅನಗತ್ಯ ವಿನ್ಯಾಸಕ್ಕಿಂತ ಸ್ಥಳೀಯ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸರಿಯಾದ ರೀತಿಯಲ್ಲಿ ಕಾಮಗಾರಿ ಕೈಗೊಳ್ಳಬೇಕು’ ಎಂದು ಹೇಳಿದರು. ಟೆಂಡರ್‌ ಶ್ಯೂರ್ ಪ್ಯಾಕೇಜ್‌ –1 ಗುತ್ತಿಗೆ ಪಡೆದ ಎನ್‌ಎಪಿಸಿ ಸಂಸ್ಥೆಯ ಗಣೇಶ ಕಾಮತ್‌ ಮಾತನಾಡಿ, ‘ವಿಠಲ ಮಲ್ಯ, ಕನ್ನಿಂಗ್‌ ಹ್ಯಾಮ್‌ ಮತ್ತು ಮ್ಯೂಸಿಯಂ ರಸ್ತೆಗಳಲ್ಲಿ ಕೈಗೊಂಡಿರುವ ಕಾಮಗಾರಿಯು ಮಾರ್ಚ್‌ ಅಂತ್ಯದ ವೇಳೆಗೆ ಪೂರ್ಣವಾಗಲಿದೆ’ ಎಂದರು.

‘ರಿಚ್ಮಂಡ್‌, ರೆಸಿಡೆನ್ಸಿ ರಸ್ತೆಗಳಲ್ಲಿ ಇದೀಗ ಕಾಮಗಾರಿ ಕೈಗೆತ್ತಿ­ಕೊಳ್ಳಲಾಗುತ್ತಿದೆ. ಸೇಂಟ್‌ ಮಾರ್ಕ್ಸ್‌ ರಸ್ತೆಯ ಕಾಮಗಾರಿ ಶೇ 70 ರಷ್ಟು ಮುಗಿದಿದೆ. ಯೋಜನೆ ಮರು ವಿನ್ಯಾಸ ಕುರಿತಂತೆ ಶೀಘ್ರ ಪಾಲಿಕೆಯಲ್ಲಿ ಬೃಹತ್‌ ಕಾಮಗಾರಿ ಸ್ಥಾಯಿ ಸಮಿತಿ ಸದಸ್ಯರೊಂದಿಗೆ ಸಭೆ ಏರ್ಪಡಿಸಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.