ADVERTISEMENT

ಡಿಸಿಪಿ ಕಚೇರಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 4 ಮೇ 2017, 19:46 IST
Last Updated 4 ಮೇ 2017, 19:46 IST

ಬೆಂಗಳೂರು: ಪ್ರೆಸ್ಟೀಜ್ ಸಂಸ್ಥೆ ವತಿಯಿಂದ ₹ 2.75 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ  ವೈಟ್‌ಫೀಲ್ಡ್ ಪೊಲೀಸ್ ಠಾಣೆ ಹಾಗೂ ಡಿಸಿಪಿ ಕಚೇರಿಯನ್ನು ಗುರುವಾರ ಉದ್ಘಾಟಿಸಲಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ‘ಪೊಲೀಸ್ ಠಾಣೆಗಳು ನೋಡುವುದಕ್ಕೆ ಎಷ್ಟು ಆಕರ್ಷಕವಾಗಿವೆ ಎಂಬುದಕ್ಕಿಂತ ಜನಸಾಮಾನ್ಯರ ಪಾಲಿಗೆ ಅವು ಎಷ್ಟು ಹತ್ತಿರವಾಗುತ್ತವೆ ಎಂಬುದು ಮುಖ್ಯ. ವೈಟ್‌ಫೀಲ್ಡ್‌ ಐಟಿ–ಬಿಟಿ ಸಂಸ್ಥೆಗಳನ್ನು ಹೊಂದಿರುವ ಪ್ರದೇಶ. ಪ್ರತಿಯೊಬ್ಬರ ಸುರಕ್ಷತೆಗೆ ಪೊಲೀಸರು ಗಮನಹರಿಸಬೇಕು’ ಎಂದರು.

‘ಈ ಪ್ರದೇಶ ನಗರದ ಹೊರ ವಲಯದಲ್ಲಿ ಇರುವುದರಿಂದ ಭೂ ವ್ಯವಹಾರಗಳು ಹೆಚ್ಚಾಗಿ ನಡೆಯುತ್ತವೆ. ಪೊಲೀಸರ ಸಹಕಾರವಿಲ್ಲದೆ ಇವೆಲ್ಲ ನಡೆಯಲು ಸಾಧ್ಯವಿಲ್ಲ. ಸಿಬ್ಬಂದಿ ಕಾನೂನು ಪ್ರಕಾರ ಕೆಲಸ ಮಾಡದಿದ್ದರೆ ಶಿಸ್ತಿನ ಕ್ರಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಮಾತನಾಡಿ, ‘ಇಲಾಖೆಯಲ್ಲಿ ರಾಜಕೀಯ ಹಸ್ತಕ್ಷೇಪ ನಡೆಯುತ್ತಿದೆ. ಇದರಿಂದಾಗಿ ಪಾರದರ್ಶಕ ತನಿಖೆ ನಡೆಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಮೊದಲು ಇಂಥ ಹಸ್ತಕ್ಷೇಪಗಳು ನಿಲ್ಲಬೇಕು’ ಎಂದರು.

ಗೃಹ ಸಚಿವ ಡಾ.ಜಿ.ಪರಮೇಶ್ವರ್, ‘ರಾಜ್ಯದಲ್ಲಿ 1,500 ಠಾಣೆಗಳಿವೆ. ಆಧುನಿಕತೆಯನ್ನು ಪೊಲೀಸ್ ವ್ಯವಸ್ಥೆಯಲ್ಲಿ ಜಾರಿಗೆ ತರಬೇಕಿದೆ. ಹೀಗಾಗಿ, ಎಲ್ಲ ಠಾಣೆಗಳಲ್ಲೂ  ಕ್ರೈಂ ಅಂಡ್ ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್‌ವರ್ಕ್‌ ಸಿಸ್ಟಮ್ (ಸಿ.ಸಿ.ಟಿ.ಎನ್‌.ಎಸ್) ಅವಳಡಿಸಲಾಗುತ್ತದೆ’ ಎಂದರು.

ಠಾಣೆ ಹುಡುಕಲು ಆ್ಯಪ್

ಸಾರ್ವಜನಿಕರು ಇನ್ನು ಮುಂದೆ ಮೊಬೈಲ್ ಆ್ಯಪ್ ಮೂಲಕವೇ ತಮ್ಮ ಹತ್ತಿರದ ಪೊಲೀಸ್ ಠಾಣೆಯನ್ನು ಹುಡುಕಿಕೊಳ್ಳಬಹುದು. ಇದೇ ಉದ್ದೇಶಕ್ಕಾಗಿ ಅಭಿವೃದ್ಧಿಪಡಿಸಿರುವ ‘Find Your Police Station’ ಆ್ಯಪ್‌ ಅನ್ನು ಸಿದ್ದರಾಮಯ್ಯ ಬಿಡುಗಡೆ ಮಾಡಿದರು.

ದಟ್ಟಣೆಯಲ್ಲಿ ಸಿಲುಕಿದ ಆಂಬುಲೆನ್ಸ್‌

ಸಿದ್ದರಾಮಯ್ಯ ಅವರು ಕಟ್ಟಡ ಉದ್ಘಾಟಿಸಿದ ಬಳಿಕ ಸ್ವಲ್ಪ ದೂರದಲ್ಲಿದ್ದ ವೇದಿಕೆಗೆ ತೆರಳಲು ಮುಂದಾದರು. ಆಗ ಪೊಲೀಸರು ಇತರೆ ವಾಹನಗಳ ಓಡಾಟವನ್ನು ನಿಲ್ಲಿಸಿದರು. ಇದೇ ವೇಳೆಗೆ ಪಕ್ಷದ ಕಾರ್ಯಕರ್ತರೂ ರಸ್ತೆಗೆ ಧಾವಿಸಿದ್ದರಿಂದ ಭಾರೀ ದಟ್ಟಣೆ ಉಂಟಾಗಿ, ವಾಹನಗಳ ಮಧ್ಯೆ ಆಂಬುಲೆನ್ಸ್‌ ಸಿಲುಕಿಕೊಂಡಿತು.

‘ಆಂಬುಲೆನ್ಸ್‌ನಲ್ಲಿ ರೋಗಿ ಇರಲಿಲ್ಲ. ಅಷ್ಟೊಂದು ದಟ್ಟಣೆ ಇದ್ದರೂ, 2–3 ನಿಮಿಷಗಳಲ್ಲೇ ಸಂಚಾರ ವ್ಯವಸ್ಥೆಯನ್ನು ಸಹಜ ಸ್ಥಿತಿಗೆ ತಂದಿದ್ದೇವೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.