ADVERTISEMENT

ತಾಂತ್ರಿಕ ಸಮಿತಿ ರಚನೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2015, 19:30 IST
Last Updated 31 ಆಗಸ್ಟ್ 2015, 19:30 IST

ಬೆಂಗಳೂರು:  ಬೃಹತ್‌ ಬೆಂಗಳೂರಿನ ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ 2005ರಿಂದ 2012ರ ನಡುವಣ ಅವಧಿಯಲ್ಲಿ ನಡೆದಿರುವ ರಸ್ತೆ ಡಾಂಬರೀಕರಣ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ತನಿಖೆ ನಡೆಸುವುದಕ್ಕಾಗಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತಾಂತ್ರಿಕ ಸಮಿತಿ ರಚನೆಗೆ ಸಚಿವ ಸಂಪುಟ ತೀರ್ಮಾನಿಸಿದೆ.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ಟಿ.ಬಿ. ಜಯಚಂದ್ರ, ‘ಈ ತಾಂತ್ರಿಕ ಸಮಿತಿಯಲ್ಲಿ ನ್ಯಾಯಮೂರ್ತಿ ಅವರಲ್ಲದೆ, ಇಬ್ಬರು ಅಥವಾ ಮೂವರು ನಿವೃತ್ತ ಎಂಜಿನಿಯರ್‌ಗಳು ಇರಲಿದ್ದಾರೆ’ ಎಂದು ಹೇಳಿದರು.
‘2005ರಿಂದ 2012ರ ಅವಧಿಯಲ್ಲಿ ಮಲ್ಲೇಶ್ವರ, ಗಾಂಧಿನಗರ ಮತ್ತು ರಾಜರಾಜೇಶ್ವರಿ ನಗರ ವಿಭಾಗಗಳಲ್ಲಿ ನಡೆದಿದ್ದ ರಸ್ತೆ ಡಾಂಬರೀಕರಣ ಅವ್ಯವಹಾರ ಪ್ರಕರಣಗಳನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿತ್ತು. ಆದರೆ, ಇದುವರೆಗೆ ಸಿಐಡಿಯು 78 ಕಾಮಗಾರಿಗಳ ತನಿಖೆಯನ್ನು ಮಾತ್ರ ಪೂರ್ಣಗೊಳಿಸಿದೆ.

ತನಿಖೆಯು ನಿಧಾನ ಆಗುತ್ತಿರುವುದರಿಂದ 283 ಕಾಮಗಾರಿಗಳನ್ನು ಹೊರತುಪಡಿಸಿ, ಉಳಿದ 5,903 ಕಾಮಗಾರಿಗಳ ತನಿಖೆಯನ್ನು ಸಿಐಡಿಯಿಂದ ವಾಪಸ್‌ ಪಡೆದು ತಾಂತ್ರಿಕ ಸಮಿತಿಗೆ ನೀಡಲು ತೀರ್ಮಾನಿಸಲಾಗಿದೆ’ ಎಂದು ಅವರು ತಿಳಿಸಿದರು.

‘283 ಕಾಮಗಾರಿಗಳ ತನಿಖೆ ಪ್ರಗತಿಯಲ್ಲಿ ಇರುವುದರಿಂದ ಸಿಐಡಿಯೇ ಅದನ್ನು ಮುಂದುವರಿಸಲಿದೆ. ಇವುಗಳ ಜೊತೆಗೆ ಉಳಿದ 24 ವಿಭಾಗಗಳಲ್ಲಿ ನಡೆದಿರಬಹುದಾದ ಅವ್ಯವಹಾರಗಳನ್ನು ಇದೇ ಸಮಿತಿಯಿಂದ ತನಿಖೆ ನಡೆಸಲು ತೀರ್ಮಾನಿಸಲಾಗಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT