ADVERTISEMENT

ತಾತ್ಕಾಲಿಕ ಪಟ್ಟಿ ಸೋಮವಾರ

ಕೆಂಪೇಗೌಡ ಬಡಾವಣೆ ನಿವೇಶನ

​ಪ್ರಜಾವಾಣಿ ವಾರ್ತೆ
Published 29 ಜೂನ್ 2016, 19:30 IST
Last Updated 29 ಜೂನ್ 2016, 19:30 IST

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದಂತೆ ತಾತ್ಕಾಲಿಕ ಪಟ್ಟಿಯನ್ನು ಸೋಮವಾರ ಪ್ರಕಟಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಧರಿಸಿದೆ.

ಪ್ರಾಧಿಕಾರದಲ್ಲಿ ಬುಧವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಲಾಯಿತು. ಆರಂಭಿಕ ಹಂತದಲ್ಲಿ 5 ಸಾವಿರ ಮಂದಿಯ ಪಟ್ಟಿಯನ್ನು ಬಿಡಿಎ ಪ್ರಕಟಿಸಲಿದೆ. 13 ವರ್ಷಗಳ ದೀರ್ಘ ಅವಧಿಯ ಬಳಿಕ ಬಿಡಿಎ ಇದೀಗ ನಿವೇಶನ ಹಂಚಿಕೆ ಮಾಡಲಿದೆ. ಅರ್ಕಾವತಿ ಬಡಾವಣೆಯ ವಿವಾದದ ಬಳಿಕ ಬಿಡಿಎ ನಿವೇಶನಗಳನ್ನು ಹಂಚಿರಲಿಲ್ಲ. 

ಬಡಾವಣೆ ನಿರ್ಮಾಣಕ್ಕಾಗಿ 12 ಗ್ರಾಮಗಳ ಒಟ್ಟು 4,043 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ವಿವಿಧ ಅಳತೆಯ ಒಟ್ಟು 20,368 ನಿವೇಶನ
ಗಳು ಇರುತ್ತವೆ. ಆದರೆ, ಸದ್ಯ ಅಭಿವೃದ್ಧಿ ಪಡಿಸಲಾದ ನಿವೇಶನಗಳನ್ನು ಮೊದಲ ಹಂತದಲ್ಲಿ ಹಂಚಿಕೆ ಮಾಡಲಾಗುತ್ತದೆ. ಜೂನ್‌ 15ರೊಳಗೆ ಪಟ್ಟಿ ಪ್ರಕಟಿಸಬೇಕು ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಗಡುವು ನೀಡಿದ್ದರು. ‘ಆಡಳಿತಾತ್ಮಕ ಹಾಗೂ ತಾಂತ್ರಿಕ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಸೋಮವಾರ ತಾತ್ಕಾಲಿಕ ಪ್ರಕಟಿಸುತ್ತೇವೆ’ ಎಂದು ಬಿಡಿಎ ಅಧ್ಯಕ್ಷ ಮಹೇಂದ್ರ ಜೈನ್‌ ತಿಳಿಸಿದರು.

‘ಜೂನ್‌ 15ರೊಳಗೆ ಪಟ್ಟಿ ಪ್ರಕಟಿಸಲು ನಿರ್ಧರಿಸಲಾಗಿತ್ತು. ತಾಂತ್ರಿಕ ಕಾರಣಗಳಿಂದ ಸ್ವಲ್ಪ ವಿಳಂಬವಾಯಿತು. ಸಮಿತಿಯೂ ಇರಲಿಲ್ಲ. ಈಗ ನಿವೇಶನ ಹಂಚಿಕೆಗೆ ಸಮಿತಿ ರಚನೆ ಮಾಡಿದ್ದೇವೆ. ಈ ಸಮಿತಿ ಪಟ್ಟಿಗೆ ಅಂತಿಮ ರೂಪ ನೀಡಲಿದೆ. ತಾತ್ಕಾಲಿಕ ಪಟ್ಟಿಗೆ ಆಕ್ಷೇಪ ವ್ಯಕ್ತಪಡಿಸಲು 15 ದಿನ ಕಾಲಾವಕಾಶ ನೀಡುತ್ತೇವೆ’ ಎಂದು ಬಿಡಿಎ ಆಯುಕ್ತ ರಾಜ್‌ಕುಮಾರ್‌ ಖತ್ರಿ ತಿಳಿಸಿದರು.

ಸಮಿತಿ ಸದಸ್ಯರು: ಬಿಡಿಎ ಅಧ್ಯಕ್ಷ ಮಹೇಂದ್ರ ಜೈನ್‌, ಆಯುಕ್ತ ರಾಜ್‌ ಕುಮಾರ್‌ ಖತ್ರಿ, ಜಲಮಂಡಳಿ ಅಧ್ಯಕ್ಷರು, ಬಿಎಂಆರ್‌ಡಿಎ ಆಯುಕ್ತರು, ಬಿಡಿಎ ಸದಸ್ಯರಾಗಿರುವ ಶಾಸಕರಾದ ಎಸ್‌.ಟಿ. ಸೋಮಶೇಖರ್‌, ಬೈರತಿ ಬಸವರಾಜು, ಸದಸ್ಯ ಜಗದೀಶ ರೆಡ್ಡಿ ಸಮಿತಿಯ ಸದಸ್ಯರಾಗಿರುವರು.  ಈ ಸಮಿತಿ ಪಟ್ಟಿ ಪ್ರಕಟಣೆಗೆ ಮುನ್ನ ಪಟ್ಟಿಯಲ್ಲಿನ ಹೆಸರು, ನಿವೇಶನಗಳ ವಿಸ್ತೀರ್ಣ, ಮೀಸಲಾತಿ ವಿಷಯಗಳನ್ನು ಮತ್ತೊಮ್ಮೆ ಪರಿಶೀಲಿಸಲಿದೆ.

150 ಅಡಿ ರಸ್ತೆಗೆ ಅನುಮೋದನೆ; ವಿಶ್ವೇಶ್ವರಯ್ಯ ಬಡಾವಣೆಯಿಂದ ಮಾಗಡಿ ರಸ್ತೆಯವರೆಗೆ 150 ಅಡಿ ರಸ್ತೆ ನಿರ್ಮಾಣ ಯೋಜನೆಗೆ ಕೂಡ ಆಡಳಿತ ಮಂಡಳಿಯಲ್ಲಿ ಅನುಮೋದನೆ ನೀಡಲಾಯಿತು. ಜೊತೆಗೆ, ಉಕ್ಕಿನ ಸೇತುವೆಯ ಟೆಂಡರ್, ಭೂಸ್ವಾಧೀನ ಹಾಗೂ ಪರಿಹಾರ ವಿತರಣೆಯ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಉಕ್ಕಿನ ಸೇತುವೆಗೆ ನಾಲ್ಕು ಎಕರೆ ಸರ್ಕಾರಿ ಭೂಮಿ ಹಾಗೂ ಒಂದು ಎಕರೆ ಖಾಸಗಿ ಭೂಮಿ ಬೇಕಿದೆ ಎಂದು ಬಿಡಿಎ ಸದಸ್ಯ ಸೋಮಶೇಖರ್‌ ಮಾಹಿತಿ ನೀಡಿದರು. ‘ಬಿಡಿಎ ಆರ್ಥಿಕ ಸ್ಥಿತಿ ಅಷ್ಟು ಚೆನ್ನಾಗಿಲ್ಲ. ಹೀಗಾಗಿ ಆದಾಯ ತರುವ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವ ಬಗ್ಗೆಯೂ ಚರ್ಚಿಸಲಾಯಿತು. ಅಗತ್ಯ ಬಿದ್ದರೆ ಮಾತ್ರ ಬ್ಯಾಂಕ್‌ಗಳಿಂದ ಸಾಲ ಪಡೆಯುವ ಕುರಿತೂ ಸಮಾಲೋಚಿಸಲಾಯಿತು’ ಎಂದು ಖತ್ರಿ ಮಾಹಿತಿ ನೀಡಿದರು.

ನಿವೇಶನದಾರರ ಭೇಟಿ: ಸಭೆ ನಡೆಯುತ್ತಿದ್ದ ವೇಳೆ ಅರ್ಕಾವತಿ ಬಡಾ ವಣೆ ನಿವೇಶನದಾರರು ಗೊಂದಲಗಳ ಪರಿಹಾರ ಹಾಗೂ ಸೂಕ್ತನಿವೇಶನದ ಮರುಹಂಚಿಕೆ ಕೋರಿ ತಂಡ ತಂಡವಾಗಿ ಆಯುಕ್ತರನ್ನು ಭೇಟಿಮಾಡಿ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.