ADVERTISEMENT

‘ತಾನೇ ಸ್ಕೂಟರ್‌ ಬೀಳಿಸಿ, ಸುಳ್ಳು ದೂರು ಕೊಟ್ಟ ಕಾನ್‌ಸ್ಟೆಬಲ್’

ಚಪ್ಪಲಿಯಿಂದ ಹೊಡೆದ ಆರೋಪ ನಿರಾಕರಿಸಿದ ವಿದ್ಯಾರ್ಥಿನಿ ಸಾರಿಕಾ ತಂದೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2017, 19:41 IST
Last Updated 22 ಜೂನ್ 2017, 19:41 IST
‘ತಾನೇ ಸ್ಕೂಟರ್‌ ಬೀಳಿಸಿ, ಸುಳ್ಳು ದೂರು ಕೊಟ್ಟ ಕಾನ್‌ಸ್ಟೆಬಲ್’
‘ತಾನೇ ಸ್ಕೂಟರ್‌ ಬೀಳಿಸಿ, ಸುಳ್ಳು ದೂರು ಕೊಟ್ಟ ಕಾನ್‌ಸ್ಟೆಬಲ್’   

ಬೆಂಗಳೂರು: ‘ಪೊಲೀಸರೇ ನನ್ನ ಮಗಳ ಸ್ಕೂಟರ್‌ ತಳ್ಳಿದರು. ಕೆಳಗೆ ಬಿದ್ದು ಗಾಯಗೊಂಡರೂ ಆಕೆಯನ್ನು ರಾತ್ರಿ 9 ಗಂಟೆವೆರೆಗೆ ಠಾಣೆಯಲ್ಲಿ ಕೂರಿಸಿದ್ದರು. ತಪ್ಪು ಮಾಡದಿದ್ದರೂ ಅವಳೇ ಕ್ಷಮೆಯಾಚಿಸಿ ಬಂದಿದ್ದಳು. ಇಷ್ಟಾದರೂ ಮರುದಿನ ಬೆಳಿಗ್ಗೆ ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿದ್ದಾರೆ’ ಎಂದು ವಿದ್ಯಾರ್ಥಿನಿ ಸಾರಿಕಾ ತಂದೆ ಕೃಷ್ಣ ಆರೋಪಿಸಿದರು.

ಸಾರಿಕಾ ಅವರು ಕರ್ತವ್ಯನಿರತ ಕಾನ್‌ಸ್ಟೆಬಲ್ ವೆಂಕಟೇಶ್ ಅವರಿಗೆ ಚಪ್ಪಲಿಯಿಂದ ಹೊಡೆದ ಆರೋಪ ಎದುರಿಸುತ್ತಿದ್ದಾರೆ. ಆದರೆ, ಈ ಆರೋಪ ತಳ್ಳಿ ಹಾಕಿರುವ ವಿದ್ಯಾರ್ಥಿನಿಯ ಕುಟುಂಬ ಸದಸ್ಯರು, ಇದೆಲ್ಲ ಪೊಲೀಸರೇ ಹೆಣೆದಿರುವ ಕಟ್ಟುಕತೆ ಎಂದಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೃಷ್ಣ, ‘ಜೂನ್ 12ರ ಮಧ್ಯಾಹ್ನ ಸಾರಿಕಾ ಕಾಲೇಜು ಮುಗಿಸಿ ಕ್ವೀನ್ಸ್ ರಸ್ತೆ ಮಾರ್ಗವಾಗಿ ಮನೆಗೆ ಬರುತ್ತಿದ್ದಳು. ಅದೇ ವೇಳೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಆ ರಸ್ತೆಯಲ್ಲಿ ಸಾಗುತ್ತಿದ್ದಾರೆ ಎಂಬ ವಿಚಾರ ಆಕೆಗೆ ಗೊತ್ತಿರಲಿಲ್ಲ. ಅವರ ಬೆಂಗಾವಲು ವಾಹನಗಳ ಹಿಂದೆಯೇ ಹೋದ ಮಗಳನ್ನು ತಡೆದ ಕಾನ್‌ಸ್ಟೆಬಲ್ ವೆಂಕಟೇಶ್, ಸಿಟ್ಟಿನಲ್ಲಿ ಸ್ಕೂಟರ್ ಕೆಳಗೆ ತಳ್ಳಿದರು. ಇದರಿಂದ ಕೆಳಗೆ ಬಿದ್ದು ಕಾಲಿಗೆ ಪೆಟ್ಟಾಯಿತು’ ಎಂದು ಹೇಳಿದರು.

ADVERTISEMENT

‘ಗಾಯಗೊಂಡು ನರಳಾಡುತ್ತಿದ್ದಾಗ ಕನಿಷ್ಠ ಮಾನವಿಯತೆಯನ್ನೂ ತೋರದ ಕಾನ್‌ಸ್ಟೆಬಲ್, ಆ ಸ್ಥಿತಿಯಲ್ಲೂ ಮಗಳಿಗೆ ಅವಾಚ್ಯ ಶಬ್ದಗಳಿಂದ ಬೈದು ಅವಮಾನ ಮಾಡಿದ್ದರು. ನಂತರ ಆಕೆಯನ್ನು ಹೈಗ್ರೌಂಡ್ಸ್ ಠಾಣೆಗೆ ಕರೆದೊಯ್ದಿದ್ದರು. ಈ ವೇಳೆ ಮಗಳು ನನಗೆ ಕರೆ ಮಾಡಿ ಘಟನೆಯನ್ನು ವಿವರಿಸಿದ್ದಳು. ತಕ್ಷಣ ನಾನು ಠಾಣೆಗೆ ತೆರಳಿದ್ದೆ. ರಾತ್ರಿ 9.30ರವರೆಗೂ ನಮ್ಮಿಬ್ಬರನ್ನೂ ಅಲ್ಲೇ ಕೂರಿಸಿಕೊಂಡಿದ್ದರು.

‘ಏತಕ್ಕಾಗಿ ನಮ್ಮನ್ನು ಇಲ್ಲಿಟ್ಟುಕೊಂಡಿದ್ದೀರಾ’ ಎಂದು ಠಾಣಾಧಿಕಾರಿಯನ್ನು ಪ್ರಶ್ನಿಸಿದರೆ, ಅವರು  ಸರಿಯಾಗಿ ಉತ್ತರಿಸಲಿಲ್ಲ. ಕೊನೆಗೆ ಮಗಳು, ‘ನಾನು ಯಾವುದೇ ತಪ್ಪು ಮಾಡಿಲ್ಲ. ಆದರೂ ಚಿಂತೆಯಿಲ್ಲ. ಕ್ಷಮಾಪಣ ಪತ್ರ ಬರೆದುಕೊಡುತ್ತೇನೆ. ನಮ್ಮನ್ನು ಕಳುಹಿಸಿಕೊಡಿ’ ಎಂದಳು. ಆ ನಂತರ ಪೊಲೀಸರು ಬಿಟ್ಟು ಕಳುಹಿಸಿದ್ದರು.

‘ಆದರೆ, ಮರುದಿನ (ಜೂನ್ 13) ಮಗಳ ವಿರುದ್ಧ ಆ ಕಾನ್‌ಸ್ಟೆಬಲ್ ಸುಳ್ಳು ದೂರು ಕೊಟ್ಟಿದ್ದಾರೆ.  ದೂರಿನ ಅನ್ವಯ ಸರ್ಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ (ಐಪಿಸಿ 353) ಜೂನ್ 14ರಂದು ಎಫ್‌ಐಆರ್ ದಾಖಲಾಗಿದೆ. ಸಾರಿಕಾ ತಪ್ಪು ಮಾಡಿದ್ದರೆ ಆ ದಿನವೇ ಏಕೆ ಕ್ರಮ ತೆಗೆದುಕೊಳ್ಳಲಿಲ್ಲ. ದೂರು ಕೊಡಲು ಕಾನ್‌ಸ್ಟೆಬಲ್ ತಡ ಮಾಡಿದ್ದೇಕೆ’ ಎಂದು ಕೃಷ್ಣ ಪ್ರಶ್ನಿಸಿದರು.

ಕಮಿಷನರ್‌ಗೆ ಮನವಿ: ‘ಪೊಲೀಸರ ವರ್ತನೆ ಹಾಗೂ ಅವರು ತಮಗೆ ತೋಚಿದಂತೆ ಎಫ್‌ಐಆರ್ ಮಾಡಿರುವ ಕಾರಣ ಮಗಳು ಆಘಾತಗೊಂಡಿದ್ದಾಳೆ. ಈ ಕುರಿತು ನಗರ ಪೊಲೀಸ್ ಕಮಿಷನರ್ ಪ್ರವೀಣ್ ಸೂದ್ ಅವರನ್ನು ಭೇಟಿಯಾಗಿ ನ್ಯಾಯ ಕೊಡಿಸುವಂತೆ ಮನವಿ ಮಾಡುತ್ತೇವೆ’ ಎಂದು  ಹೇಳಿದರು.

ಏನಿದು ಪ್ರಕರಣ: ಜೂನ್ 12ರಂದು ಬೆಂಗಳೂರಿಗೆ ಬಂದಿದ್ದ ರಾಹುಲ್ ಗಾಂಧಿ ಅವರು, ಮಧ್ಯಾಹ್ನ 1.30ರ ಸುಮಾರಿಗೆ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ ತೆರಳುತ್ತಿದ್ದರು. ಈ ವೇಳೆ ಅವರ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಕ್ವೀನ್ಸ್ ರಸ್ತೆಯಲ್ಲಿ ಕೆಲ ಕಾಲ ಇತರೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು.

ಆದರೆ, ಸಾರಿಕಾ ಬೆಂಗಾವಲು ವಾಹನಗಳ ಹಿಂದೆ ಸ್ಕೂಟರ್ ಓಡಿಸಿಕೊಂಡು ಬಂದಿದ್ದರು. 

ಅದನ್ನು ಪ್ರಶ್ನಿಸಿದ ಕೆ.ಜಿ.ಹಳ್ಳಿ ಸಂಚಾರ ಠಾಣೆ ಕಾನ್‌ಸ್ಟೆಬಲ್ ವೆಂಕಟೇಶ್ ಅವರ ಕಪಾಳಕ್ಕೆ ಚಪ್ಪಲಿಯಿಂದ ಹೊಡೆದಿದ್ದಲ್ಲದೆ, ‘ಯಾಕೋ ಲೋಫರ್, ಗಾಡಿ ತಡೆಯುತ್ತೀಯಾ’ ಎಂದು ನಿಂದಿಸಿದ್ದ ಆರೋಪ ಅವರ ವಿರುದ್ಧ ಕೇಳಿ ಬಂದಿತ್ತು.

**

ಕಾನೂನು ಹೋರಾಟ
‘ಸಾರಿಕಾ ಮೃದು ಸ್ವಭಾವದವಳು. ಮನೆಯಲ್ಲೇ ಆಕೆ ಏರು ಧ್ವನಿಯಲ್ಲಿ ಯಾವತ್ತೂ ಮಾತನಾಡಿಲ್ಲ. ಹೀಗಿರುವಾಗ ಪೊಲೀಸರ ಜತೆ ಅಂಥ ವರ್ತನೆ ತೋರಿರಲು ಸಾಧ್ಯವೇ ಇಲ್ಲ. ಬೇಕಿದ್ದರೆ ಘಟನಾ ಸ್ಥಳದ ಸಿ.ಸಿ ಟಿ.ವಿ ಕ್ಯಾಮೆರಾ ತೆಗೆದು ಸಾರ್ವಜನಿಕವಾಗಿ ಪ್ರದರ್ಶಿಸಲಿ. ಯಾವುದು ಸತ್ಯ ಎಂಬುದು ಗೊತ್ತಾಗುತ್ತದೆ. ನ್ಯಾಯ ಸಿಗುವವರೆಗೂ ಕಾನೂನು ಹೋರಾಟ ಮುಂದುವರಿಸುತ್ತೇವೆ’ ಎಂದು ಸಾರಿಕಾ ತಂದೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.