ADVERTISEMENT

ತೆರವಾಗಿರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ವೇಳಾಪಟ್ಟಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 23 ಮೇ 2018, 19:30 IST
Last Updated 23 ಮೇ 2018, 19:30 IST

ಬೆಂಗಳೂರು: ವಿವಿಧ ಕಾರಣಗಳಿಂದ ತೆರವಾಗಿರುವ ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಬುಧವಾರ ವೇಳಾಪಟ್ಟಿ ಪ್ರಕಟಿಸಿದೆ.

ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿಯ ಐದು, ತಾಲ್ಲೂಕು ಪಂಚಾಯಿತಿಯ ನಾಲ್ಕು, ಗ್ರಾಮ ಪಂಚಾಯಿತಿಯ 332 ಸದಸ್ಯ ಸ್ಥಾನಗಳಿಗೆ ಜೂನ್ 14ಕ್ಕೆ ಮತದಾನ (ಅವಶ್ಯವಿದ್ದರೆ) ನಡೆಯಲಿದೆ. ಬೆಂಗಳೂರು ನಗರ ಜಿಲ್ಲೆಯ ಹುರಳಿ ಚಿಕ್ಕನಹಳ್ಳಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವೆಂಕಟಗಿರಿ ಕೋಟೆ ಗ್ರಾಮ ಪಂಚಾಯಿತಿಗಳ ಸದಸ್ಯ ಸ್ಥಾನಕ್ಕೂ ಆ ದಿನ ಮತದಾನ ನಡೆಯುತ್ತದೆ.

ನಗರ ಸಂಸ್ಥೆಗಳ ವೇಳಾಪಟ್ಟಿ: ಅದೇ ರೀತಿ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಜೂನ್ 17ರಂದು ದಿನಾಂಕ ನಿಗದಿಯಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಮೇ 30ರಂದು ಅಧಿಸೂಚನೆ ಹೊರಡಿಸಲಿದ್ದಾರೆ.

ADVERTISEMENT

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರಸಭೆ (ವಾರ್ಡ್ ಸಂಖ್ಯೆ 22) ಹಾಗೂ ಬೆಂಗಳೂರು ಮಹಾನಗರ ಪಾಲಿಕೆಯ ಬಿನ್ನಿಪೇಟೆ ವಾರ್ಡ್‌ಗಳಿಗೆ (ಸಂಖ್ಯೆ 121) ಉಪಚುನಾವಣೆ ನಡೆಯಲಿದೆ.

ಈ ಚುನಾವಣೆಗೆ ನಾಮಪತ್ರ ಸಲ್ಲಿಸಲು ಜೂನ್ 6 ಕೊನೆ ದಿನವಾಗಿದ್ದು, ಮರುದಿನ ನಾಮಪತ್ರ ಪರಿಶೀಲನೆ ನಡೆಯಲಿದೆ. ಜೂನ್ 9ರೊಳಗೆ ಉಮೇದುವಾರಿಕೆ ವಾಪಸ್ ಪಡೆಯಬಹುದು. ಜೂನ್17ರ ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಅಗತ್ಯ ಬಿದ್ದ ಕಡೆಗಳಲ್ಲಿ ಜೂನ್ 18ರಂದು ಮರುಮತದಾನ ಮಾಡಲಾಗುವುದು. ಮರುದಿನ ಮತ ಎಣಿಕೆ ಕಾರ್ಯ ನಡೆಯುತ್ತದೆ ಎಂದು ರಾಜ್ಯ ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.

ಚುನಾವಣೆ ಅಧಿಸೂಚನೆ ಹೊರಬಿದ್ದ ದಿನದಿಂದ (ಮೇ 30) ಮತ ಎಣಿಕೆ ಮುಗಿಯುವ ದಿನದವರೆಗೂ, ಆಯಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.