ADVERTISEMENT

ತೆರಿಗೆ ಇಲಾಖೆ ಅಧಿಕಾರಿಗಳಿಂದ ತನಿಖೆ

ವಕೀಲನ ಕಾರಿನಲ್ಲಿ ₹1.97 ಕೋಟಿ ಪತ್ತೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2016, 19:42 IST
Last Updated 24 ಅಕ್ಟೋಬರ್ 2016, 19:42 IST

ಬೆಂಗಳೂರು: ವಿಧಾನಸೌಧ  ಆವರಣ ದೊಳಗೆ ಹೋಗುತ್ತಿದ್ದ ವಕೀಲ ಸಿದ್ದಾರ್ಥ ಹಿರೇಮಠ ಅವರ ಕಾರಿನಲ್ಲಿ ಪತ್ತೆಯಾದ ₹1.97 ಕೋಟಿ ಸಂಬಂಧ ರಿಯಲ್‌ ಎಸ್ಟೇಟ್‌ ಉದ್ಯಮಿ ಸೇರಿ ಹಲವರ ಹೇಳಿ ಕೆಯನ್ನು ತೆರಿಗೆ ಇಲಾಖೆಯ ಅಧಿಕಾರಿಗಳು ಸೋಮವಾರ ಪಡೆದುಕೊಂಡಿದ್ದಾರೆ.

ಹರಪನಹಳ್ಳಿ ಮೂಲದ ಸಿದ್ದಾರ್ಥ, ತಮ್ಮ ಫೋಕ್ಸ್‌ ವ್ಯಾಗನ್‌ ಕಾರಿನಲ್ಲಿ ಹಣವಿಟ್ಟುಕೊಂಡು ಮಧ್ಯಾಹ್ನ 1.35ಕ್ಕೆ ಗೇಟ್‌ ನಂಬರ್‌ 1ರ ಮೂಲಕ ವಿಧಾನಸೌಧದ ಆವರಣದೊಳಗೆ ಹೋಗುತ್ತಿದ್ದರು. ಈ ವೇಳೆ ಕಾರಿನಲ್ಲಿ ದಾಖಲೆ ಇಲ್ಲದ ₹1.97 ಕೋಟಿ ನಗದು ಪತ್ತೆಯಾಗಿತ್ತು.

ಆ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆ ಹಣವನ್ನು ನ್ಯಾಯಾಲ ಯದ ಸುಪರ್ದಿಗೆ ಒಪ್ಪಿಸಿದ್ದಾರೆ.ಅದೇ ಹಣದ ತನಿಖೆ ನಡೆಸುತ್ತಿರುವ ಇಲಾಖೆಯ ಅಧಿಕಾರಿಗಳು, ಸೋಮ ವಾರ (ಅ.24) ವಿಚಾರಣೆಗೆ  ಹಾಜರಾಗುವಂತೆ ಸಿದ್ದಾರ್ಥ ಸೇರಿದಂತೆ ಹಲವರಿಗೆ ನೋಟಿಸ್‌ ನೀಡಿತ್ತು. 

‘ನೋಟಿಸ್‌ ನೀಡಿದ್ದರಿಂದ ಸಿದ್ದಾರ್ಥ ಹಾಗೂ ಅವರಿಗೆ ಹಣ ನೀಡಿದ್ದಾರೆ ಎನ್ನಲಾದ ರಿಯಲ್‌ ಎಸ್ಟೇಟ್‌ ಉದ್ಯಮಿ ಗಫಾರ್‌ ಮತ್ತು ಸ್ನೇಹಿತ ರಾಜಪ್ಪ ಅವರು ಕಚೇರಿಗೆ ಬಂದು ಹೇಳಿಕೆ ನೀಡಿದ್ದಾರೆ’ ಎಂದು ತೆರಿಗೆ ಇಲಾಖೆಯ ಅಧಿಕಾರಿಯೊ ಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ವಿಚಾರಣೆ ವೇಳೆ ಹಣದ ಮೂಲದ ಬಗ್ಗೆ ಅಧಿಕಾರಿಗಳು ಪ್ರಶ್ನಿಸಿದಾಗ, ಮೂವರು ಸಹ ಬೇರೆ ಬೇರೆ ಉತ್ತರ ನೀಡಿದ್ದಾರೆ ಎನ್ನಲಾಗಿದೆ. ಅದು ಅಧಿಕಾರಿಗಳ ಗೊಂದಲಕ್ಕೆ ಕಾರಣವಾ ಗಿದ್ದರಿಂದ ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಹೇಳಿ ಕಳುಹಿಸಿದ್ದಾರೆ.

‘ಉದ್ಯಮಿ ಗಫಾರ್‌  ತಮ್ಮ ಹೇಳಿಕೆಯಲ್ಲಿ ಹಣದ ಮೂಲದ ಬಗ್ಗೆ ಮಾಹಿತಿ ನೀಡಿಲ್ಲ. ಸ್ನೇಹಿತ ರಾಜಪ್ಪ ಅವರು ದಾಖಲೆ ನೀಡುವುದಾಗಿ ಸಮಯ ಪಡೆದುಕೊಂಡಿದ್ದಾರೆ’ ಎಂದು ಅಧಿಕಾರಿ ತಿಳಿಸಿದರು.

ಎರಡೂವರೆ ಪುಟದ ಹೇಳಿಕೆ: ಪೊಲೀಸರಿಗೆ ಎರಡೂವರೆ ಪುಟದ ಹೇಳಿಕೆ ನೀಡಿರುವ ಸಿದ್ದಾರ್ಥ, ಹಣದ ಮೂಲಕ್ಕೆ ಹಲವು ಉತ್ತರಗಳನ್ನು ನೀಡಿದ್ದಾರೆ. ಅದೇ ಹೇಳಿಕೆಯನ್ನೇ ತೆರಿಗೆ ಇಲಾಖೆ ಅಧಿಕಾರಿಗಳಿಗೂ ಕೊಟ್ಟಿದ್ದಾರೆ.

‘ಹೈ ಪಾಯಿಂಟ್‌ನಲ್ಲಿ ಕಚೇರಿ ಖರೀದಿಸುವುದಕ್ಕಾಗಿ ಹಲವು ದಿನಗ ಳಿಂದ ಹಣ ಹೊಂದಿಸಿದ್ದೆ. ಅ.21ರಂದು ಕಟ್ಟಡದ ಮಾಲೀಕರಿಗೆ ಹಣ ನೀಡುವ ಭರವಸೆ ನೀಡಿದ್ದೆ’.‘ಅದರಂತೆ ಮಧ್ಯಾಹ್ನ ಊಟ ಮುಗಿಸಿ, ಹಣವನ್ನು ಕಾರಿನಲ್ಲಿಟ್ಟುಕೊಂಡು ವಿಧಾನಸೌಧ ಆವರಣದಿಂದ ಹೈಕೋರ್ಟ್‌ಗೆ ಹೋಗುತ್ತಿದ್ದೆ. ದಿನವೂ ಇದೇ ಮಾರ್ಗದಿಂದಲೇ ನಾನು ಹೈಕೋರ್ಟ್‌ಗೆ ಹೋಗುವುದು, ಜತೆಗೆ ವಾಪಸ್‌ ಕಚೇರಿಗೆ ಬರುವುದು’

‘ಪ್ರಕರಣವೊಂದರ ವಕಾಲತ್ತು ವಹಿಸಿದ್ದರಿಂದ ಅದು ಮುಗಿದ ಕೂಡಲೇ ಹೈಕೋರ್ಟ್‌ನಿಂದಲೇ ನೇರವಾಗಿ ಮಾಲೀಕರ ಕಡೆ ಹೋಗಬೇಕಿತ್ತು. ಅಷ್ಟ ರಲ್ಲಿ ಈ ಘಟನೆ ನಡೆದು ಹೋಯಿತು’ ಎಂದು  ಹೇಳಿಕೆಯಲ್ಲಿ ಸಿದ್ದಾರ್ಥ ತಿಳಿಸಿರುವುದಾಗಿ ಅಧಿಕಾರಿ ಹೇಳಿದರು.
*
ಕುಮಾರಸ್ವಾಮಿ ಹೇಳಿಕೆಗೆ  ಆಕ್ಷೇಪ
ಬೆಂಗಳೂರು:
‘ಯಡಿಯೂರಪ್ಪನವರ ವಿರುದ್ಧ ‘ಹಿಟ್‌ ಅಂಡ್‌ ರನ್‌’ ರೀತಿ ಆರೋಪ ಮಾಡುವುದನ್ನು   ಜೆಡಿಎಸ್  ರಾಜ್ಯ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ನಿಲ್ಲಿಸಲಿ’ ಎಂದು ಬಿಜೆಪಿ ವಕ್ತಾರ ಎಸ್‌. ಸುರೇಶಕುಮಾರ್ ಹೇಳಿದರು.

‘ವಿಧಾನಸೌಧದದ ಆವರಣದಲ್ಲಿ ವಕೀಲರೊಬ್ಬರ ಕಾರಿನಲ್ಲಿದ್ದ ಬಹುಕೋಟಿ ಹಣದ ಮೂಲದ ಬಗ್ಗೆ ಯಡಿಯೂರಪ್ಪನವರಿಗೆ ಮಾಹಿತಿ ಇದೆ’ ಎಂಬ ಕುಮಾರಸ್ವಾಮಿ ಹೇಳಿಕೆಗೆ ಮಾಧ್ಯಮಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ಮಾಜಿ ಮುಖ್ಯಮಂತ್ರಿಯಿಂದ ಇಂತಹ ಬೇಜವಾಬ್ದಾರಿ ಹೇಳಿಕೆ ನಿರೀಕ್ಷಿಸಿರಲಿಲ್ಲ ಎಂದರು.

‘ತಮ್ಮ ಮಗನ ಜಾಗ್ವಾರ್‌ ಸಿನಿಮಾ ಚಿತ್ರೀಕರಣವನ್ನು  ವಿದೇಶದಲ್ಲಿ ನಡೆಸಿದರು. ಅದಕ್ಕೆ ಎಷ್ಟು ಖರ್ಚಾಯಿತು? ಹಣದ ಮೂಲ ಯಾವುದು ಎಂದು ಯಾರೂ ಪ್ರಶ್ನಿಸಿಲ್ಲ. ಕುಮಾರಸ್ವಾಮಿ ಕೂಡ ಇಂತಹ ವಿಷಯದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಲಿ’ ಎಂದರು.

ಹಣ ಕೊಂಡೊಯ್ದ ವಕೀಲರು ಮತ್ತು ಯಡಿಯೂರಪ್ಪ ಮಧ್ಯೆ ವಕೀಲ, ಕಕ್ಷಿದಾರ ಸಂಬಂಧ ಇರಬಹುದು. ಹಾಗೆಂದ ಮಾತ್ರಕ್ಕೆ ಸಾಗಿಸುತ್ತಿದ್ದ ಹಣದ ವಿಷಯದಲ್ಲಿ ಸಂಬಂಧ ಕಲ್ಪಿಸುವುದು ವಕೀಲ ವೃತ್ತಿಗೆ ಮಾಡುವ ಅವಮಾನ. ಯಡಿಯೂರಪ್ಪ ಅವರ ಜನಪ್ರಿಯತೆ ಸಹಿಸದೇ ಸಂಶಯದ ಬೀಜ ಬಿತ್ತುವ ಕೆಲಸವನ್ನು ಕುಮಾರಸ್ವಾಮಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT