ADVERTISEMENT

‘ತೇಜಸ್ವಿಯೇ ಒಂದು ವಿಶ್ವವಿದ್ಯಾಲಯ’

ಪತಿ ಜತೆಗಿನ ಒಡನಾಟ ಸ್ಮರಿಸಿಕೊಂಡ ರಾಜೇಶ್ವರಿ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2016, 20:21 IST
Last Updated 8 ಸೆಪ್ಟೆಂಬರ್ 2016, 20:21 IST
ರಾಜೇಶ್ವರಿ ತೇಜಸ್ವಿ ಅವರು ಬರೆದ ‘ನಮ್ಮ ಮನೆಗೂ ಬಂದರು ಗಾಂಧೀಜಿ’ ಕೃತಿಯನ್ನು ಕೆ.ಟಿ ಶಿವಪ್ರಸಾದ್‌ ಲೋಕಾರ್ಪಣೆ ಮಾಡಿದರು. ನರಹಳ್ಳಿ ಬಾಲಸುಬ್ರಹ್ಮಣ್ಯ, ರಾಜೇಶ್ವರಿ ತೇಜಸ್ವಿ, ಪ್ರೊ.ವಿಜಯಾ ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ
ರಾಜೇಶ್ವರಿ ತೇಜಸ್ವಿ ಅವರು ಬರೆದ ‘ನಮ್ಮ ಮನೆಗೂ ಬಂದರು ಗಾಂಧೀಜಿ’ ಕೃತಿಯನ್ನು ಕೆ.ಟಿ ಶಿವಪ್ರಸಾದ್‌ ಲೋಕಾರ್ಪಣೆ ಮಾಡಿದರು. ನರಹಳ್ಳಿ ಬಾಲಸುಬ್ರಹ್ಮಣ್ಯ, ರಾಜೇಶ್ವರಿ ತೇಜಸ್ವಿ, ಪ್ರೊ.ವಿಜಯಾ ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಆಧುನಿಕ ಶಿಕ್ಷಣ ಪಡೆದು ಹಳ್ಳಿ ಬದುಕಿನತ್ತ ಮುಖ ಮಾಡಿದ ತೇಜಸ್ವಿ ಅವರೇ ಒಂದು ವಿಶ್ವವಿದ್ಯಾಲಯವಾಗಿ ಕಾಣುತ್ತಾರೆ’ ಎಂದು  ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.

ಅಭಿನವ ಪ್ರಕಾಶನ ಮತ್ತು ತೇಜಸ್ವಿ ಕನ್ನಡ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ  78ನೇ ಹುಟ್ಟುಹಬ್ಬದ ಪ್ರಯುಕ್ತ ಮಲ್ಲೇಶ್ವರದ ಮಹಾರಾಣಿ  ಲಕ್ಷ್ಮಿ ಅಮ್ಮಣ್ಣಿ ಮಹಿಳಾ ವಿದ್ಯಾಲಯದಲ್ಲಿ ಗುರುವಾರ ನಡೆದ ರಾಜೇಶ್ವರಿ ತೇಜಸ್ವಿ ಅವರ ‘ನಮ್ಮ ಮನೆಗೂ ಬಂದರು ಗಾಂಧೀಜಿ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಕೃತಿ ಕುರಿತು ಅವರು ಮಾತನಾಡಿದರು.

‘ಹಳ್ಳಿಯಿಂದ ನಗರಕ್ಕೆ ವಲಸೆ ಬರುವವರ ಸಂಖ್ಯೆ ಹೆಚ್ಚಿದ್ದ ಕಾಲದಲ್ಲಿ ಪಟ್ಟಣದಿಂದ ಹಳ್ಳಿಯತ್ತ ಮುಖ ಮಾಡಿ, ಇಡೀ ಜಗತ್ತು ತಮ್ಮತ್ತ ನೋಡುವಂತೆ ಮಾಡಿದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಹಾಗೂ ನಾಟಕಕಾರ ಕೆ.ವಿ.ಸುಬ್ಬಣ್ಣ  ನನಗೆ ಮುಖ್ಯರೆನ್ನಿಸುತ್ತಾರೆ’ ಎಂದರು.

‘ತೇಜಸ್ವಿ ಅವರ ಸಾಹಿತ್ಯದಲ್ಲಿ ಹಳ್ಳಿಗಾಡಿನ ಸೊಗಡು ಎದ್ದು ಕಾಣುತ್ತದೆ. ಅವರ ಕೈ ಹಿಡಿದ ರಾಜೇಶ್ವರಿ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದವರು. ಜೊತೆಗೆ ಮತ್ತೊಂದು ವಿಶ್ವವಿದ್ಯಾಲಯದಲ್ಲಿ ಬದುಕಿನ ಪಾಠ ಕಲಿತಿದ್ದಾರೆ, ಅದುವೇ ‘ತೇಜಸ್ವಿ ವಿಶ್ವವಿದ್ಯಾಲಯ’ ಎಂದು ಹೊಗಳಿದರು.

‘ಕೃತಿಯ ಹೆಸರು ಕೇಳಿದೊಡನೇ ಗಾಂಧಿಯವರು ಮನೆಗೆ ಬಂದಿದ್ದರಾ ಎಂದು ಪ್ರಶ್ನೆ ಮೂಡಬಹುದು. ಆದರೆ, ಗಾಂಧಿ ಬದಲು ಚರಕ ಬಂದಿರುತ್ತದೆ. ರಾಜೇಶ್ವರಿ ಅವರ ತಾಯಿ ಚರಕದಲ್ಲಿ ನೂಲು ತೆಗೆದು ಮಾರುತ್ತಿದ್ದರು. ಇದೊಂದು ಸ್ತ್ರೀ ಸಂಕಥನ, ಆತ್ಮಗೌರವದ ರೂಪಕವಾಗಿ ಮೂಡಿ ಬಂದಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದ ಕೆ.ಟಿ. ಶಿವಪ್ರಸಾದ್‌ ಅವರು ತೇಜಸ್ವಿಯವರೊಂದಿಗಿನ ಒಡನಾಟ ನೆನಪಿಸಿಕೊಂಡರು. ‘1967ರಲ್ಲಿ ಮುಂಬೈನಿಂದ ಹಾಸನಕ್ಕೆ ಬಂದೆ. ಪ್ರೊ. ನಂಜುಂಡಸ್ವಾಮಿ ಅವರಿಂದ ಪೂರ್ಣಚಂದ್ರ ತೇಜಸ್ವಿ ಅವರ ಪರಿಚಯವಾಯಿತು.   ಆಗ ಕರ್ವಾಲೊ ಕಾದಂಬರಿ ಓದಿದೆ. ಜಗತ್ತಿನ ಬಗ್ಗೆ ಗೊತ್ತಾಯಿತು. ಹಳ್ಳಿಗಾಡಿನ ಬದುಕು, ಅಲ್ಲಿನ ಪಾತ್ರಗಳನ್ನು ಬರವಣಿಗೆ ಮೂಲಕ ಭಿನ್ನವಾಗಿ ಚಿತ್ರಿಸಿದ್ದಾರೆ’ ಎಂದು ಹೇಳಿದರು.

ಲೇಖಕಿ ರಾಜೇಶ್ವರಿ ತೇಜಸ್ವಿ  ಮಾತನಾಡಿ ‘ಇದು ನನ್ನ ಎರಡನೆಯ ಕೃತಿ. ಇದಕ್ಕೆ ಪ್ರೇರಣೆ ನನ್ನ ತಾಯಿ. ದಿನವೆಲ್ಲಾ ಕೆಲಸ ಮಾಡಿದ ನಂತರ ಚರಕದಿಂದ ನೂಲು ನೇಯುತ್ತಿದ್ದಳು, ಆ ನೂಲನ್ನು ಮಾರಿ ಬದುಕಿನ ಬಂಡಿ ಸಾಗಿಸುತ್ತಿದ್ದಳು. ಚರಕ ಇಲ್ಲಿ ಆತ್ಮಗೌರವದ ಸಂಕೇತವಾಗಿದೆ. ಹಾಗಾಗಿ ಈ ಕೃತಿಗೆ ‘ನಮ್ಮ ಮನೆಗೂ ಬಂದರು ಗಾಂಧೀಜಿ’ ಹೆಸರಿಟ್ಟೆವು’’ ಎಂದು ಹೇಳಿದರು.

‘ತೇಜಸ್ವಿ ಅವರನ್ನು ಪ್ರೀತಿಸಿ ಮದುವೆಯಾದೆ. ಎಲ್ಲಿಗೇ ಹೋದರೂ  ಸೈಕಲ್‌  ಜೊತೆಗಿರುತ್ತಿತ್ತು. ಸೈಕಲ್‌ ಇಲ್ಲದೇ ಅವರನ್ನು ನೆನಪಿಸಿಕೊಳ್ಳಲು ಸಾಧ್ಯವಿಲ್ಲ.  ಅಂದಿನ ನೆನಪುಗಳು ಇಂದಿಗೂ ಹಸಿರಾಗಿವೆ’ ಎಂದು ಪತಿಯೊಂದಿಗಿನ ನೆನಪುಗಳ ಪುಟ ತಿರುವಿ ಹಾಕಿದರು.

ಮಹಾರಾಣಿ  ಲಕ್ಷ್ಮಿ ಅಮ್ಮಣ್ಣಿ ಮಹಿಳಾ ವಿದ್ಯಾಲಯದ ಪ್ರಾಂಶುಪಾಲೆ ಪ್ರೊ. ವಿಜಯಾ, ಅಭಿನವ ಪ್ರಕಾಶನದ ನ. ರವಿಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.