ADVERTISEMENT

ತ್ಯಾಜ್ಯ ಹೊಂಡವಾದ ಕೆರೆ

​ಪ್ರಜಾವಾಣಿ ವಾರ್ತೆ
Published 20 ಮೇ 2012, 19:10 IST
Last Updated 20 ಮೇ 2012, 19:10 IST

ಪೀಣ್ಯ ದಾಸರಹಳ್ಳಿ: ಚಿಕ್ಕಬಾಣಾವರ ಗ್ರಾಮದ ಕೆರೆಯ ತುಂಬಾ ಜೊಂಡು ಬೆಳೆದು ನಿಂತಿದ್ದು, ಕಸ-ಕಡ್ಡಿಗಳಿಂದ ಕೊಳೆತು ನಾರುತ್ತಿದೆ. ಅಲ್ಲದೆ, ಸುತ್ತಮುತ್ತ ಅಪಾರ್ಟ್‌ಮೆಂಟ್‌ಗಳು ತಲೆಯೆತ್ತುತ್ತಿರುವುದರಿಂದ ಕೆರೆಯ ಜಾಗ ಒತ್ತುವರಿಯಾಗುತ್ತಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ನಡುವೆ, ಹಳೇ ಕಟ್ಟಡಗಳ ಕಲ್ಲು, ಮಣ್ಣು ಸೇರಿದಂತೆ ಇತರ ತ್ಯಾಜ್ಯ ವಸ್ತುಗಳನ್ನು ಕೆರೆಗೆ ತಂದು ಸುರಿಯುತ್ತಿರುವುದರಿಂದ ಅದು ನಿಧಾನವಾಗಿ ಮುಚ್ಚಿ ಹೋಗುವ ಸ್ಥಿತಿಯಲ್ಲಿದೆ. ಸುಮಾರು ಎರಡು ಮೂರು ಕಿಲೋ ಮೀಟರ್ ದೂರದ ಕಟ್ಟಡಗಳು, ಆಸ್ಪತ್ರೆಗಳು, ಹೋಟೆಲ್‌ಗಳ ತ್ಯಾಜ್ಯಗಳನ್ನು ಕೆರೆಗೆ ತಂದು ಸುರಿಯುತ್ತಿರುವುದರಿಂದ ನೀರು ಕಲುಷಿತಗೊಳ್ಳುತ್ತಿದೆ ಎಂದಿದ್ದಾರೆ.

`ಹತ್ತಾರು ವರ್ಷಗಳ ಹಿಂದೆ ಸುತ್ತಮುತ್ತಲಿನ ಹಳ್ಳಿಗಳ ಜಾನುವಾರುಗಳು ಹಾಗೂ ಜಲಚರಗಳಿಗೆ ಆಶ್ರಯವಾಗಿದ್ದ ಕೆರೆ ಇದೀಗ ಕಲುಷಿತ ನೀರಿನಿಂದ ಗಬ್ಬುನಾರುತ್ತಿದೆ. ಇದರಿಂದ ಕೆರೆಯು ತನ್ನ ಅಂದವನ್ನೇ ಕಳೆದುಕೊಳ್ಳುತ್ತಿದೆ. ಕಲುಷಿತ ನೀರಿನಿಂದ ಸೊಳ್ಳೆ, ಕೀಟಗಳ ಹಾವಳಿ ಹೆಚ್ಚಾಗಿ ಕೆರೆಯ ಸುತ್ತಮುತ್ತಲಿನ ನಿವಾಸಿಗಳು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ~ ಎಂದು ಅವರು ದೂರಿದರು.

`ಈ ಪ್ರದೇಶದ ಜನತೆ ಕುಡಿಯುವ ನೀರಿಗೆ ತೀವ್ರ ತೊಂದರೆ ಅನುಭವಿಸುತ್ತಿರುವ ಸಂದರ್ಭದಲ್ಲಿ ಸರ್ಕಾರ ಈ ಕೆರೆಯನ್ನು ಅಭಿವೃದ್ಧಿಪಡಿಸಿದಲ್ಲಿ ಕೊಳವೆಬಾವಿಗಳಲ್ಲಿಯೂ ಅಂತರ್ಜಲ ಪ್ರಮಾಣ ಹೆಚ್ಚಲಿದೆ. ಇದರಿಂದ ಜನರಿಗೆ ಪರಿಶುದ್ಧ ನೀರು ದೊರೆಯಲಿದೆ~ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.