ADVERTISEMENT

ದೀಪಾವಳಿ: ಕೊಂಚ ಏರಿದ ಶಬ್ದಮಾಲಿನ್ಯ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2014, 19:55 IST
Last Updated 23 ಅಕ್ಟೋಬರ್ 2014, 19:55 IST

ಬೆಂಗಳೂರು: ‘ನರಕ ಚತುರ್ದಶಿಯ ದಿನವಾದ ಬುಧವಾರ ಹಗಲಿನ ವೇಳೆ­ಯಲ್ಲಿ  ಮಂಗಳ­ವಾರಕ್ಕಿಂತ ಶಬ್ದ­ಮಾಲಿನ್ಯ ಕಡಿಮೆಯಿದ್ದರೆ, ರಾತ್ರಿ ಕೊಂಚ ಹೆಚ್ಚಾಗಿದೆ’ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ತಿಳಿಸಿದರು.

ಮಾಲಿನ್ಯ ನಿಯಂತ್ರಣ ಮಂಡಳಿಯು ನಗರದ ಶಬ್ದಮಾಲಿನ್ಯ ಮಾಪನಕ್ಕಾಗಿ ವಿವಿಧ ವಲಯ­ಗಳಿಗೆ ಸೇರಿದ ಹತ್ತು ಕಡೆಗಳಲ್ಲಿ ಸ್ವಯಂ ಚಾಲಿತ ಯಂತ್ರ­ಗಳನ್ನು ಅಳವಡಿಸಿದೆ. ಈ ಯಂತ್ರ­ಗಳು ಕ್ಷಣ ಕ್ಷಣದ ಮಾಹಿತಿಯನ್ನು ಸಂಗ್ರಹಿಸಿ ಪ್ರತಿ ಹತ್ತು ನಿಮಿಷಕ್ಕೊಮ್ಮೆ ಕೇಂದ್ರ ವ್ಯವಸ್ಥೆಯಲ್ಲಿನ ಮಾಹಿತಿಯನ್ನು ಪರಿಷ್ಕರಿಸುತ್ತವೆ.

ಮಂಡಳಿಯ ಮಾಹಿತಿ ಪ್ರಕಾರ  ಮಂಗಳ­ವಾರಕ್ಕೆ ಹೋಲಿಸಿದರೆ, ಕೈಗಾರಿಕೆ ಪ್ರದೇಶ­ದಲ್ಲಿರುವ ಪೀಣ್ಯ, ವಾಣಿಜ್ಯ ಪ್ರದೇಶದಲ್ಲಿರುವ ಚರ್ಚ್‌ ಸ್ಟ್ರಿಟ್‌, ಯಶವಂತಪುರ ಮತ್ತು ಮಾರತ್‌ ಹಳ್ಳಿ ಹಾಗೂ ಸೂಕ್ಷ್ಮ ಪ್ರದೇಶಕ್ಕೆ ಮೈಸೂರು ರಸ್ತೆಯಲ್ಲಿರುವ ಆರ್.ವಿ.ಎಂಜಿನಿ­ಯರಿಂಗ್‌ ಕಾಲೇಜಿನ ಸುತ್ತಮುತ್ತ ಹಗಲಿನ ವೇಳೆ ಶಬ್ದ ಪ್ರಮಾಣದ ಕಡಿಮೆಯಾಗಿದೆ.

ಇನ್ನು, ರಾತ್ರಿ ವೇಳೆಯಲ್ಲಿ ಈ ಮೇಲಿನ ಪ್ರದೇಶ­ಗಳು ಒಳಗೊಂಡಂತೆ ಕೈಗಾರಿಕೆ ಪ್ರದೇಶದ­ಲ್ಲಿರುವ ವೈಟ್‌ಫೀಲ್ಡ್‌, ಜನವಸತಿ ಪ್ರದೇಶ­ಗಳಾದ ಬಸವೇಶ್ವರ ನಗರ, ಬಿಟಿಎಂ ಬಡಾವಣೆ, ದೊಮ್ಮಲೂರಿನ ಟೆರಿ ಕಚೇರಿ ಸುತ್ತಮುತ್ತ ಮತ್ತು ಸೂಕ್ಷ್ಮ ಪ್ರದೇಶದಲ್ಲಿರುವ ನಿಮಾನ್ಸ್‌ ಸಮೀಪ ಏರಿಕೆ ಕಂಡುಬಂದಿದೆ.

ಬುಧವಾರ ಹಗಲಿನ ವೇಳೆ ಅತಿ ಹೆಚ್ಚು ಶಬ್ದ (ಶೇ 3.6) ಬಸವೇಶ್ವರ ನಗರದ ನಿಸರ್ಗ ಭವನದ ಸುತ್ತಮುತ್ತ ಕೇಳಿಬಂದರೆ, ನಿಮಾನ್ಸ್‌ ಸುತ್ತಲಿನ ಪರಿಸರದಲ್ಲಿ ಯಾವುದೇ ಬದಲಾವಣೆ­ಯಾಗಿಲ್ಲ. ಆದರೆ,  ರಾತ್ರಿಯ ವೇಳೆ ನಿಮಾನ್ಸ್‌ ಸುತ್ತ ಅಧಿಕ ಪ್ರಮಾಣದಲ್ಲಿ (ಶೇ 30.5)ಶಬ್ದ ದಾಖ­ಲಾಗಿದೆ. ಪೀಣ್ಯ­ದಲ್ಲಿ ಅದರ ಪ್ರಮಾಣ ಶೇ 0.5 ರಷ್ಟಿತ್ತು.

‘ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ನಡೆದಿರುವ ಮಾಲಿನ್ಯ ನಿಯಂತ್ರಣ ಕಾರ್ಯಕ್ರಮಗಳು ಮೂಡಿಸಿ­ರುವ ಜಾಗೃತಿ ಮತ್ತು ವಿಶೇಷವಾಗಿ ಮಳೆ­ಯಿಂದ ಈ ಬಾರಿ ನರಕ ಚತುರ್ದಶಿ­ಯಂದು ಹೆಚ್ಚು ಜನರು ಪಟಾಕಿ ಸಿಡಿ­ಸಿಲ್ಲ. ಇದರಿಂದ ಕಳೆದ ಬಾರಿ ದೀಪಾವಳಿ ಈ ದಿನಕ್ಕೆ ಹೋಲಿಕೆ ಮಾಡಿದರೆ ಈ ಬಾರಿಯ ಶಬ್ದ ಮಾಲಿನ್ಯ ಪ್ರಮಾಣ­ದಲ್ಲಿ ಇಳಿಕೆಯಾಗಿದೆ’ ಎಂದು ಅವರು ಹೇಳಿದರು.

ಪಟಾಕಿ ಸಿಡಿಸಲು ಮಳೆ ಅಡ್ಡಿಯಾದ ಕಾರಣ ದೀಪಾವಳಿ ಈ ಮೊದಲ ದಿನ ಶಬ್ದಮಾಲಿನ್ಯ­ದಷ್ಟೇ ವಾಯು ಮಾಲಿನ್ಯ ಕೂಡ ತಗ್ಗಿದೆ. ಅದರ ಮಾಹಿತಿ ಇನ್ನೆರಡು ದಿನಗಳಲ್ಲಿ ದೊರೆಯಲಿದೆ ಎನ್ನುತ್ತಾರೆ ಅಧಿಕಾರಿಗಳು.

9ಮಂದಿಗೆ ಗಾಯ
ಮಳೆಯ ಮಧ್ಯ ಪಟಾಕಿ ಸುಡಲು ಜನರ ಹೆಣಗಾಟ ನಡೆಸಿದ ನಡುವೆಯೇ ಪಟಾಕಿ ಸಿಡಿತದ ಅವಘಡದಲ್ಲಿ ಇಬ್ಬರು ಬಾಲಕರ ಕಣ್ಣಿಗೆ ಗಾಯಗಳಾಗಿವೆ. ವಾಲ್ಮೀಕಿ ನಗರದ ಸೈಯ್ಯದ್‌ ಪಾಷಾ (9) ಎಂಬ ಬಾಲಕ ಹೂವುಕುಂಡಕ್ಕೆ ಬೆಂಕಿ ಇಡುವ ವೇಳೆ ಅದು ಸ್ಫೋಟ­ಗೊಂಡ ಕಾರಣ ಬಲಗಣ್ಣಿಗೆ ತೀವ್ರ ಗಾಯವಾಗಿದೆ. ಆತನನ್ನು ನಗರದ ಮಿಂಟೊ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೈಯ್ಯದ್‌ನ ಕಣ್ಣಿನಲ್ಲಿ ರಕ್ತಸ್ರಾವ­ವಾಗಿದೆ. ಆತ ಗುಣಮುಖನಾಗಲು ಕೆಲ ದಿನಗಳು ಆಸ್ಪತ್ರೆಯಲ್ಲಿರುವ ಅಗತ್ಯವಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದರು.

ಹೆಗಡೆ ನಗರದ ನಿವಾಸಿ ಚಂದು ಎನ್ನುವ 12 ವರ್ಷದ ಬಾಲಕ ಬೇರೊ­ಬ್ಬರು ಸಿಡಿಸಿದ ಪಟಾಕಿಗೆ ಗಾಯಗೊಂಡು ಚಿಕಿತ್ಸೆಗಾಗಿ ಮಿಂಟೊ ಆಸ್ಪತ್ರೆಗೆ ದಾಖಲಾಗಿದ್ದಾನೆ.

‘ಈ ಮಳೆ ಗುರುವಾರ ಮತ್ತು ಶುಕ್ರ­ವಾರ ಕೂಡ ಸುರಿಯಲಿ. ಅದರಿಂದ­ಲಾದರೂ ಪಟಾಕಿ ಸಿಡಿತದಿಂದಾಗುವ ಮಾಲಿನ್ಯ ಮತ್ತು ಅವಘಡಗಳು ಕಡಿಮೆಯಾಗಲಿ’ ಎನ್ನುವ ಮಿಂಟೊ ಆಸ್ಪತ್ರೆಯ ಅಧಿಕ್ಷಕ ಡಾ.ಟಿ.ಕೆ.ರಮೇಶ್‌ ಅವರು ‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪಟಾಕಿಯಿಂದ ಗಾಯ­ಗೊಂಡವರು ಕಡಿಮೆ. 2013ರಲ್ಲಿ ಪಟಾಕಿ ಸಿಡಿತದಿಂದ 61 ಜನ ಗಾಯ­ಗೊಂಡಿದ್ದರು’ ಎಂದು ಹೇಳಿದರು.
ಇನ್ನು, ಪಟಾಕಿ ಅವಘಡದಲ್ಲಿ ಗಾಯಗೊಂಡ ಐದು ಜನರು ನಾರಾಯಣ ನೇತ್ರಾಲಯದಲ್ಲಿ ಮತ್ತು ಇಬ್ಬರು ಯಲಹಂಕದ ರಂಗಲಕ್ಷ್ಮಿ ಕಣ್ಣಿನ ಆಸ್ಪತ್ರೆಯಲ್ಲಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.

ಕಡಿಮೆ ಪಟಾಕಿ ಕೊಂಡೆ
ಪ್ರತಿ ವರ್ಷ ಮಗನಿಗೆ ರೂ700 ಪಟಾಕಿ ಕೊಡಿಸುತ್ತಿದೆ. ಈ ಬಾರಿ ಪರಿಸರ ಮಾಲಿನ್ಯ ಕುರಿತು ಕೆಲ ಜಾಹಿರಾತುಗಳನ್ನು ನೋಡಿದ ಕಾರಣ ಈ ಬಾರಿ ಕೇವಲ ರೂ300 ಮಾತ್ರ ಕೊಡಿಸಿದ್ದೇನೆ. ಮುಂದಿನ ಬಾರಿ ಅದನ್ನು ಕೂಡ ಕೊಡಿಸಬಾರದು ಎಂದು ನಿರ್ಧರಿಸಿರುವೆ.
- ಶಶಿಧರ್, ರಾಜಾಜಿನಗರ ನಿವಾಸಿ

ಸಂಜೆ ವಾಕ್‌ ಹೋಗಬೇಡಿ

ದೀಪಾವಳಿ ಸಮಯದಲ್ಲಿ ಅತಿಯಾಗಿ ಪಟಾಕಿ ಸುಡುವುದರಿಂದ ಸಂಜೆ ವೇಳೆ ವಾತಾವರಣ ವಿಪರೀತ ಕಲುಷಿತವಾಗಿರುತ್ತದೆ. ಆದ್ದರಿಂದ, ಅಸ್ತಮಾ ಸೇರಿದಂತೆ ಶ್ವಾಸಕೋಶ ಕಾಯಿಲೆಯಿಂದ ಬಳಲುವವರು ವಾಕಿಂಗ್‌ಗೆ ಹೋಗದಿರುವುದೇ ವಾಸಿ. ಇನ್ನು, ಸಾಮಾನ್ಯ ಜನರು ಈ ವೇಳೆ ಗುಣಮಟ್ಟದ ಮಾಸ್ಕ್‌ ಧರಿಸಿ  ವಾಯುವಿಹಾರಕ್ಕೆ ಹೋಗುವುದು ಒಳಿತು.
–ಡಾ.ರಂಗನಾಥ್, ಶ್ವಾಸಕೋಶ ತಜ್ಞ, ನಾರಾಯಣ ಹೃದಯಾಲಯ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT