ADVERTISEMENT

ದೊಡ್ಡಗುಬ್ಬಿ ಕೆರೆಯಲ್ಲಿ ಮೀನುಗಳ ಸಾವು

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2018, 19:32 IST
Last Updated 24 ಏಪ್ರಿಲ್ 2018, 19:32 IST
ಮೀನುಗಳು ಮೃತಪಟ್ಟಿರುವುದು
ಮೀನುಗಳು ಮೃತಪಟ್ಟಿರುವುದು   

ಬೆಂಗಳೂರು: ಮಹದೇವಪುರ ಕ್ಷೇತ್ರದ ದೊಡ್ಡಗುಬ್ಬಿ ಗ್ರಾಮದ ಕೆರೆಯಲ್ಲಿ ಮಂಗಳವಾರ ಸಾವಿರಾರು ಮೀನುಗಳು ಮೃತಪಟ್ಟಿವೆ.

‘ಕಲುಷಿತ ನೀರು ಕೆರೆಗೆ ಸೇರುತ್ತಿರುವುದರಿಂದ ಇಲ್ಲಿ ಮೀನುಗಳು ಸಾಯುತ್ತಲೇ ಇವೆ. ಇಂದು ಕೆರೆ ಬಳಿ ಹೋದಾಗ ಸಾಕಷ್ಟು ಮೀನುಗಳು ಅರ್ಧ ಜೀವದಲ್ಲಿ ಒದ್ದಾಡುತ್ತಿದ್ದವು. ಹದ್ದುಗಳು ಹಾಗೂ ಕಾಗೆಗಳು ನೀರಿಗೆ ಧುಮಿಕಿ ಮೀನುಗಳನ್ನು ಕಚ್ಚಿಕೊಂಡು ಹೋಗುತ್ತಿದ್ದವು. ಆ ಮನಕಲಕುವ ದೃಶ್ಯ ಇನ್ನೂ ಕಣ್ಣಿಗೆ ಕಟ್ಟಿದ ಹಾಗಿದೆ’ ಎಂದು ಸ್ಥಳೀಯ ವೆಂಕಟೇಶ ಅಡಿಗ ಹೇಳಿದರು.

ಸರ್ವೇ ನಂ.38ರಲ್ಲಿರುವ ಕೆರೆಯು ಚಿಕ್ಕಗುಬ್ಬಿ ಹಾಗೂ ಗೊಲ್ಲಹಳ್ಳಿ ಗಡಿಯಲ್ಲಿದೆ. ಒಟ್ಟು 105 ಎಕರೆ 18 ಗುಂಟೆ ವಿಸ್ತೀರ್ಣವನ್ನು ಕೆರೆ ಹೊಂದಿದ್ದು ಈಗಾಗಲೇ ಸಾಕಷ್ಟು ಒತ್ತುವರಿಯಾಗಿದೆ.

ADVERTISEMENT

ಕಟ್ಟಡ ತ್ಯಾಜ್ಯ ಹಾಗೂ ಹಸಿ ತ್ಯಾಜ್ಯವನ್ನು ಕೆರೆಗೆ ತಂದು ಸುರಿಯಲಾಗುತ್ತಿದೆ. ರಾಸಾಯನಿಕಯುಕ್ತ ನೀರು ಕೆರೆ ಸೇರುತ್ತಿದೆ. ಈ ಬಗ್ಗೆ ಸಾಕಷ್ಟು ಬಾರಿ ದೂರು ನೀಡಿದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕೆರೆ ಹೋರಾಟಗಾರ ಹರೀಶ್‌ ನಾಯ್ಕ್‌ ತಿಳಿಸಿದರು.

ಕೆರೆಯ ನೀರು ಕಡುಹಸಿರು ಬಣ್ಣಕ್ಕೆ ತಿರುಗಿದೆ. ನೀರಿನಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಮೀನುಗಳು ಸತ್ತಿವೆ ಎಂದು ಸ್ಥಳೀಯ ಆರ್. ರಕ್ಷಕ್‌ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.