ADVERTISEMENT

ದೋಷಪೂರಿತ ಫಲಿತಾಂಶ: ಬಗೆಹರಿಯದ ಸಮಸ್ಯೆ

ಬೆಂಗಳೂರು ವಿ.ವಿ ವ್ಯಾಪ್ತಿಯ ಚಿಕ್ಕಬಳ್ಳಾಪುರ, ರಾಮನಗರ, ಕೋಲಾರ ವಿದ್ಯಾರ್ಥಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 19:30 IST
Last Updated 20 ಜುಲೈ 2017, 19:30 IST
ದೋಷಪೂರಿತ ಫಲಿತಾಂಶ: ಬಗೆಹರಿಯದ ಸಮಸ್ಯೆ
ದೋಷಪೂರಿತ ಫಲಿತಾಂಶ: ಬಗೆಹರಿಯದ ಸಮಸ್ಯೆ   

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಪ್ರಕಟಿಸಿರುವ ಬಿ.ಕಾಂ, ಬಿಸಿಎ ಪದವಿಯ ಕೊನೆಯ ಸೆಮಿಸ್ಟರ್‌ ಫಲಿತಾಂಶದಲ್ಲಿ ಅನೇಕ ಲೋಪಗಳು ಕಂಡು ಬಂದಿದ್ದು, ವಾರ ಕಳೆದರೂ ಸಮಸ್ಯೆ ಬಗೆಹರಿದಿಲ್ಲ.

ಚಿಕ್ಕಬಳ್ಳಾಪುರ, ರಾಮನಗರ, ಕೋಲಾರ ಮತ್ತು ನಗರದ ನೂರಾರು ವಿದ್ಯಾರ್ಥಿಗಳು ಫಲಿತಾಂಶ ಪಡೆಯಲು ಗುರುವಾರ ವಿಶ್ವವಿದ್ಯಾಲಯಕ್ಕೆ ಬಂದಿದ್ದರು. ಆದರೆ, ಸಿಬ್ಬಂದಿ ಕೊರತೆಯಿಂದ ಒಂದು ದಿನದಲ್ಲಿ ಕೇವಲ 20 ವಿದ್ಯಾರ್ಥಿಗಳಿಗೆ ಲೋಪ ಸರಿಪಡಿಸಿದ ಫಲಿತಾಂಶ ದೊರಕಿದೆ.

‘ಇಲ್ಲಿನ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಪ್ರತಿದಿನ ಇಲ್ಲಿಗೆ ಬಂದು ಹೋಗುವ ವೆಚ್ಚವನ್ನು ವಿಶ್ವವಿದ್ಯಾಲಯ ನೀಡುತ್ತದೆಯೇ’ ಎಂದು ದೂರದ ಊರುಗಳಿಂದ ಬಂದಿದ್ದ ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರಶ್ನಿಸಿದರು. ‘ಜುಲೈ 9ಕ್ಕೆ ಪದವಿ ಫಲಿತಾಂಶ ಪ್ರಕಟಗೊಂಡಿದೆ.

ADVERTISEMENT

ಇನ್ನೂ ಸರಿಯಾದ ಫಲಿತಾಂಶ ಬಂದಿಲ್ಲ. ಸ್ನಾತಕೋತ್ತರ ಪದವಿಗೆ ಅರ್ಜಿ ಸಲ್ಲಿಸಲು ಜುಲೈ 21 ಕೊನೆಯ ದಿನ. ತಾತ್ಕಾಲಿಕ ಅಂಕಪಟ್ಟಿ ಇಲ್ಲದೆ ಅರ್ಜಿ ಸಲ್ಲಿಸಲು ಆಗುವುದಿಲ್ಲ’ ಎಂದು ವಿದ್ಯಾರ್ಥಿ ಮನೋಜ್‌ ಅಳಲು ತೋಡಿಕೊಂಡರು.

‘ಕಾಲೇಜುಗಳು ತಪ್ಪು ಮಾಹಿತಿ ನೀಡಿದಾಗ ಈ ರೀತಿಯ ಸಮಸ್ಯೆ ಆಗುತ್ತದೆ. ಅಂತಿಮ ದಿನಾಂಕದ ಒಳಗೆ ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನದ ಅಂಕಗಳನ್ನು ವಿಶ್ವವಿದ್ಯಾಲಯಕ್ಕೆ ನೀಡಬೇಕು. ಅದು ಸರಿಯಾಗಿ ಬಾರದಿದ್ದಾಗ ಫಲಿತಾಂಶ ತಡೆ ಹಿಡಿಯುತ್ತೇವೆ’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವ ಡಾ. ಎಂ. ಶಂಕರ್‌ ರೆಡ್ಡಿ ತಿಳಿಸಿದರು.

‘ನೋಂದಣಿ ಸಂಖ್ಯೆ ಸರಿಯಾಗಿ ಬರೆಯದಿದ್ದರೆ, ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನದ ಅಂಕಗಳು ಇಲ್ಲದಿದ್ದರೆ ಹಾಗೂ ಕೊಠಡಿ ಮೇಲ್ವಿಚಾರಕರು ಹಾಜರಾತಿ ಬಗ್ಗೆ ತಪ್ಪು ಮಾಹಿತಿ ದಾಖಲಿಸಿದರೆ ಫಲಿತಾಂಶದಲ್ಲಿ ಈ ರೀತಿಯ ಲೋಪಗಳು ಆಗುತ್ತವೆ. ಅವುಗಳನ್ನು ಪರಿಶೀಲಿಸುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.