ADVERTISEMENT

ದೌರ್ಜನ್ಯ ಖಂಡಿಸಿ ಪ್ರತಿಭಟನೆ

ಬೃಹತ್‌ ಬೆಂಗಳೂರು ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2015, 19:45 IST
Last Updated 1 ಡಿಸೆಂಬರ್ 2015, 19:45 IST

ಬೆಂಗಳೂರು: ಸಂಚಾರ ಪೊಲೀಸರು ಕಾನೂನುಬಾಹಿರವಾಗಿ ಎತ್ತಂಗಡಿ ಮಾಡುವುದು ನಿಲ್ಲಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೃಹತ್‌ ಬೆಂಗಳೂರು ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಸದಸ್ಯರು ಮಂಗಳವಾರ ಆನಂದರಾವ್‌ ವೃತ್ತದಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಸಂಚಾಲಕ ವಿನಯ್‌ ಶ್ರೀನಿವಾಸ ಅವರು, ‘ಕಳೆದ ಹಲವಾರು ತಿಂಗಳಿಂದ ಶಿವಾಜಿನಗರ ಸೇರಿದಂತೆ ನಗರದ ಅನೇಕ ಕಡೆಗಳಲ್ಲಿ ಬೀದಿ ವ್ಯಾಪಾರಿಗಳಿಗೆ ಸಂಚಾರ ಪೊಲೀಸರ ಕಿರುಕುಳ ಹೆಚ್ಚಾಗಿದೆ. ಇದರಿಂದಾಗಿ ಬೀದಿ ವ್ಯಾಪಾರಿಗಳ ಬದುಕು ಸಂಕಷ್ಟಕ್ಕೆ ಸಿಲುಕಿದೆ’ ಎಂದು ತಿಳಿಸಿದರು.

‘ಬೀದಿ ವ್ಯಾಪಾರಿಗಳ ಮೇಲೆ ಸಂಚಾರ ಪೊಲೀಸರು ನಡೆಸುತ್ತಿರುವ ದೌರ್ಜನ್ಯ ಖಂಡಿಸಿ ಗುರುವಾರ (ಡಿ.3) ಶಿವಾಜಿನಗರದ ಛೋಟಾ ಮೈದಾನದಿಂದ ಬ್ರಾಡ್‌ವೇ ಸಂಚಾರ ಪೊಲೀಸ್‌ ಠಾಣೆವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.
ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿರ್ವಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಪ್ರಾಧ್ಯಾಪಕ ಪ್ರೊ.ಬಾಬು ಮ್ಯಾಥ್ಯು ಮಾತನಾಡಿ, ‘ಕೇಂದ್ರ ಸರ್ಕಾರ 2014 ರಲ್ಲಿ ಬೀದಿ ವ್ಯಾಪಾರಿಗಳ ಹಿತ ರಕ್ಷಣೆಗಾಗಿ ಹೊಸ ಕಾನೂನು ಜಾರಿಗೆ ತಂದಿದೆ. ಅದರ ಪ್ರಕಾರ ಬಿಬಿಎಂಪಿಯು ಸಮೀಕ್ಷೆ ನಡೆಸಿ, ಪರ್ಯಾಯ ಜಾಗ ತೋರಿಸಿ, ಪರವಾನಗಿ ನೀಡುವ ವರೆಗೂ ಬೀದಿ ವ್ಯಾಪಾರಿಗಳನ್ನು ಎತ್ತಂಗಡಿ ಮಾಡುವ ಹಾಗಿಲ್ಲ. ಆದರೆ, ಪೊಲೀಸರು ನಿಯಮಾವಳಿಗಳನ್ನು ಉಲ್ಲಂಘಿಸಿ ದೌರ್ಜನ್ಯ ನಡೆಸುತ್ತಿದ್ದಾರೆ’ ಎಂದು ದೂರಿದರು.

ಶಿವಾಜಿನಗರ ಬೀದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಗೋವಿಂದರಾಜು ಮಾತನಾಡಿ, ‘ನಾನು ಕಳೆದ 50 ವರ್ಷಗಳಿಂದ ಬೀದಿಯಲ್ಲಿಯೇ ವ್ಯಾಪಾರ ಮಾಡುತ್ತ ಬದುಕುತ್ತಿದ್ದೇನೆ. ಆದರೆ, ಇತ್ತೀಚೆಗೆ ಪೊಲೀಸರು ನಮ್ಮನ್ನು ಬೀದಿನಾಯಿಗಳಿಂದ ಕನಿಷ್ಠವಾಗಿ ನಡೆಸಿಕೊಳ್ಳುತ್ತಿದ್ದಾರೆ. ಹೀಗಾಗಿ, ವ್ಯಾಪಾರಿಗಳಿಗೆ ಬದುಕುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ’ ಎಂದು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.