ADVERTISEMENT

ನಂದಿನಿ ಬಡಾವಣೆ ಸಕ್ರಮಕ್ಕೆ ಶಿಫಾರಸು

37 ವರ್ಷಗಳಿಂದ 5,678 ಸ್ವತ್ತುಗಳ ಭವಿಷ್ಯ ಅತಂತ್ರ: ಅರ್ಜಿ ಸಮಿತಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 28 ಜುಲೈ 2014, 20:03 IST
Last Updated 28 ಜುಲೈ 2014, 20:03 IST

ಬೆಂಗಳೂರು: ಬೆಂಗಳೂರು ನಗರ ಉತ್ತರ ತಾಲ್ಲೂಕಿನ ಯಶವಂತಪುರ ಹೋಬಳಿಯಲ್ಲಿ 37 ವರ್ಷಗಳ ಹಿಂದೆ ನಿರ್ಮಿಸಿದ ನಂದಿನಿ ಬಡಾವಣೆಯನ್ನು ಸಕ್ರಮಗೊಳಿಸಬೇಕು ಎಂದು ವಿಧಾನಸಭೆ ಅರ್ಜಿಗಳ ಸಮಿತಿಯು ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಸಮಿತಿ ಅಧ್ಯಕ್ಷರಾಗಿರುವ ಎನ್‌.ಎಚ್‌. ಶಿವಶಂಕರ ರೆಡ್ಡಿ ಅವರು ಸೋಮವಾರ ವಿಧಾನಸಭೆಯಲ್ಲಿ ವರದಿಯನ್ನು ಮಂಡಿಸಿದರು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ತೋರಿದ ನಿರ್ಲಕ್ಷ್ಯವೇ ಗೊಂದಲಕ್ಕೆ ಕಾರಣ­ವಾಗಿದೆ. ಬಡಾವಣೆ ನಿವಾಸಿಗಳಿಗೆ ಶಾಶ್ವತ ಪರಿ­ಹಾರ ಒದಗಿಸುವ ಅಗತ್ಯ ಮನವರಿಕೆಯಾಗಿದೆ ಎಂದು ಸಮಿತಿ ಸ್ಪಷ್ಟವಾಗಿ ಅಭಿಪ್ರಾಯಪಟ್ಟಿದೆ.

ನಂದಿನಿ ಬಡಾವಣೆ ನಿರ್ಮಾಣದ ಉದ್ದೇಶ­ದಿಂದ 1,505.26 ಎಕರೆ ಭೂಸ್ವಾಧೀನಕ್ಕಾಗಿ ಬಿಡಿಎ 1977ರ ನವೆಂಬರ್‌ 16ರಂದು ಪ್ರಾಥ­ಮಿಕ ಅಧಿಸೂಚನೆ ಹೊರಡಿಸಿತ್ತು. ಆದರೆ, 1979­ರಲ್ಲಿ 786.10 ಎಕರೆ ಜಮೀನನ್ನು ಮಾತ್ರ ಸ್ವಾಧೀನ ಮಾಡಿಕೊಳ್ಳಲು ಅಂತಿಮ ಅಧಿಸೂಚನೆ ಹೊರ­ಡಿ­ಸಿತು ಎಂದು ವರದಿಯಲ್ಲಿ ವಿವರಿಸಲಾಗಿದೆ.

ಪ್ರಾಥಮಿಕ ಹಾಗೂ ಅಂತಿಮ ಅಧಿಸೂಚನೆಗಳ ನಡುವೆ 846 ಎಕರೆ ಭೂಮಿಯನ್ನು ಸ್ವಾಧೀನ­ದಿಂದ ಕೈಬಿಡಲಾಗಿದೆ. ಶೇ 60ರಷ್ಟು ಭೂಮಿ­ಯನ್ನು ಸ್ವಾಧೀನ ಮಾಡದೆ ಕೈಬಿಟ್ಟಿರುವುದನ್ನು ನೋಡಿದಾಗ ಬಿಡಿಎ ತನಗೆ ಬೇಕಾದ ಪ್ರದೇಶವನ್ನು ನಿರ್ಧರಿಸುವಲ್ಲಿ ಲೋಪ ಎಸಗಿರುವುದು ಎದ್ದು ಕಾಣುತ್ತದೆ. ಅಂತಿಮ ಅಧಿಸೂಚನೆ ಬಳಿಕವೂ 126.24 ಎಕರೆ ಭೂಮಿಯನ್ನು ‘ನಿರ್ಮಿತ ಪ್ರದೇಶ’ ಎಂದು ಸ್ವಾಧೀನದಿಂದ ಕೈಬಿಡಲಾಗಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಅಂತಿಮವಾಗಿ ಬಿಡಿಎ 659.26 ಎಕರೆ ಭೂಮಿ­ಯಲ್ಲಿ 6,551 ನಿವೇಶನ ನಿರ್ಮಿಸಿತು. ಅದರಲ್ಲಿ 873 ನಿವೇಶನಗಳನ್ನು ಮಾತ್ರ ಹಂಚಿಕೆ ಮಾಡಿತು. ಭೂ ಮಾಲೀಕರಿಂದ ಕಂದಾಯ ನಿವೇಶನ ಪಡೆದವರು ಉಳಿದ 5,678 ನಿವೇಶನಗಳಲ್ಲಿ ಮನೆ ಕಟ್ಟಿದರು. ಈ ಬಡಾವಣೆಯನ್ನು 22 ವರ್ಷ­ಗಳ ವಿಳಂಬದ ಬಳಿಕ 2001ರಲ್ಲಿ ಬಿಬಿಎಂಪಿಗೆ ಹಸ್ತಾಂತರ ಮಾಡಲಾಗಿದೆ. ಬಿಬಿ­ಎಂಪಿ 2005­ರಲ್ಲಿ ಹಸ್ತಾಂತರ ದೃಢೀಕರಣ ಮಾಡಿದೆ. ಇದು ಸಕಾರಣವಿಲ್ಲದ ವಿಳಂಬ ಎಂದು ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.

ಬಿಬಿಎಂಪಿಯಿಂದ ಅಭಿವೃದ್ಧಿ ಶುಲ್ಕ ಪಡೆಯ­ಲಾ­ಗಿ­ದ್ದು, ಖಾತೆಯನ್ನೂ ಮಾಡಲಾಗಿದೆ. ವಸ್ತು ಸ್ಥಿತಿ­ಯನ್ನು ಗಮನಿಸಿದಾಗ ಬಿಡಿಎಯಿಂದ ಸ್ವಾಧೀನ ಪ್ರಕ್ರಿ­ಯೆ­ಯನ್ನು ಅನುತ್ಪಾದಕವಾಗಿ ಜಾರಿಗೊಳಿಸಿ­ರು­­ವುದು ಮನದಟ್ಟಾಗಿದೆ. ಬಿಡಿಎ ಇಲ್ಲವೆ ಬಿಬಿಎಂ­ಪಿಯು ಅನಧಿಕೃತ ನಿರ್ಮಾಣವನ್ನು 37 ವರ್ಷಗಳ ವಿಳಂ­ಬದ ನಂತರ ತೆರವುಗೊಳಿಸುವುದು ಸಾಧು­ವಲ್ಲ. ಅಲ್ಲದೆ ಕಾನೂನು ರೀತ್ಯ ಕ್ರಮ ಜರುಗಿಸು­ವುದು ಕಷ್ಟಸಾಧ್ಯ ಎಂದು ವರದಿಯಲ್ಲಿ ವಿವರಿ­ಸಲಾಗಿದೆ.

ಬಡಾವಣೆ ನಿವಾಸಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಿದ್ದಲ್ಲದೆ ಅಲ್ಲಿನ ನಿವಾಸಿಗಳಿಂದ ಅಭಿವೃದ್ಧಿ ಶುಲ್ಕ ಹಾಗೂ ತೆರಿಗೆ ಕಟ್ಟಿಸಿಕೊಳ್ಳುತ್ತಿ­ದ್ದರೂ ಅವರಿಗೆ ಶಾಶ್ವತ ಪರಿಹಾರ ದೊರಕಿಸಿ­ಕೊಡಲು ಬಿಡಿಎ ಹಾಗೂ ಬಿಬಿಎಂಪಿ ವಿಫಲವಾ­ಗಿವೆ ಎಂದು ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ. ಈ ಸಮಸ್ಯೆಗೆ ಕಾರಣರಾದ ಅಧಿಕಾರಿಗಳನ್ನು ಗುರುತಿಸಿ ಕಾನೂನು ಕ್ರಮ ಜರುಗಿಸಬೇಕು ಎಂದೂ ತಿಳಿಸಿದೆ.

ನಿಯಮಾವಳಿಗೆ ಅನುಗುಣವಾಗಿ ಇಲ್ಲವೆ ಶಾಸನಬದ್ಧ ಪಾವತಿಗಳನ್ನು ದೃಢೀಕರಿಸಿಕೊಳ್ಳುವ ನಿರ್ಬಂಧನೆಗೆ ಒಳಪಟ್ಟು ಬಡಾವಣೆಯನ್ನು ಸಕ್ರಮ­ಗೊಳಿಸ­ಬೇಕು ಮತ್ತು ಈ ಸಂಬಂಧ ಬಿಡಿಎ ಮಂಡಳಿ ವಿಶೇಷ ಸಭೆ ಕರೆದು ನಿರ್ಣಯ ಕೈಗೊಳ್ಳ­ಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

ಅರ್ಜಿಗಳ ಸಮಿತಿಗೆ ಮನವಿ ಪತ್ರ ಸಲ್ಲಿಸಿದ್ದ ಬಡಾ­ವಣೆ ನಿವಾಸಿಗಳು, ‘ಅಲ್ಲಿ ಮನೆಗಳನ್ನೂ ನಿರ್ಮಿಸಿಕೊಂಡು 30ಕ್ಕೂ ಅಧಿಕ ವರ್ಷವಾಗಿದ್ದು ನಮ್ಮ ಸ್ವತ್ತುಗಳನ್ನು ಸಕ್ರಮಗೊಳಿಸಬೇಕು’ ಎಂದು ವಿನಂತಿ ಮಾಡಿದ್ದರು.

ನಗರದ ವರ್ತುಲ ರಸ್ತೆಯು ನಂದಿನಿ ಬಡಾವಣೆ ಮಧ್ಯಭಾಗದಲ್ಲಿ ಹಾದು ಹೋಗಿದೆ. ಈ ರಸ್ತೆಯ ನಿರ್ಮಾ­ಣದ ಸಮಯದಲ್ಲಿ ಭೂಸ್ವಾಧೀನ ಮಾಡಿ­ಕೊಳ್ಳುವಾಗ ಕಂದಾಯ ನಿವೇಶನಗಳ ಮಾಲೀಕ­ರಿಗೆ ಬಿಡಿಎ ಬದಲಿ ನಿವೇಶನ ನೀಡಿ, ಅವರ ಮಾಲೀ­ಕತ್ವ­ವನ್ನೂ ಒಪ್ಪಿಕೊಂಡಿದೆ. ಹೀಗಾಗಿ ನಮ್ಮ ಸ್ವತ್ತು­ಗಳ ಮಾಲೀಕತ್ವವನ್ನೂ ಕಾನೂನುಬದ್ಧ ಮಾಡ­ಬೇಕು ಎಂದು ಮನೆ ಕಟ್ಟಿಕೊಂಡ ನಿವೇಶನಗಳ ಮಾಲೀ­ಕರು ಮನವಿ ಮಾಡಿದ್ದರು. ಆ ಅರ್ಜಿ­ಯನ್ನು ಶಾಸಕ ಎಸ್‌.ಸುರೇಶಕುಮಾರ್‌ ಸಮಿತಿಗೆ ಶಿಫಾರಸು ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.