ADVERTISEMENT

ನಗರದಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆ

8 ಕಡೆ ನೆಲಕ್ಕುರುಳಿದ ಮರಗಳು

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2017, 20:22 IST
Last Updated 29 ಏಪ್ರಿಲ್ 2017, 20:22 IST
ರಾಜರಾಜೇಶ್ವರಿ ನಗರ ಬಳಿಯ  ಬಿ.ಎಚ್‌.ಇ.ಎಲ್‌ ಬಡಾವಣೆಯ ಕೆಂಚೇನಹಳ್ಳಿಯಲ್ಲಿ ನೆಲಕ್ಕುರುಳಿದ್ದ ಮರ.
ರಾಜರಾಜೇಶ್ವರಿ ನಗರ ಬಳಿಯ ಬಿ.ಎಚ್‌.ಇ.ಎಲ್‌ ಬಡಾವಣೆಯ ಕೆಂಚೇನಹಳ್ಳಿಯಲ್ಲಿ ನೆಲಕ್ಕುರುಳಿದ್ದ ಮರ.   

ಬೆಂಗಳೂರು: ನಗರದಲ್ಲಿ ಶನಿವಾರ ಗುಡುಗು ಸಹಿತ ಆಲಿಕಲ್ಲು ಮಳೆ ಸುರಿಯಿತು. ಈ ವೇಳೆ ಬೀಸಿದ ಗಾಳಿಯಿಂದ 8 ಕಡೆಗಳಲ್ಲಿ ಮರಗಳು ನೆಲಕ್ಕುರುಳಿದ್ದು, ಐದು ಕಡೆ ಕೊಂಬೆಗಳು ಬಿದ್ದಿವೆ.

ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣವಿತ್ತು. ಸಂಜೆ ವೇಳೆಯಲ್ಲಿ ಗಂಟೆಗಳವರೆಗೆ ಜೋರಾದ ಮಳೆಯಾಯಿತು. ಬಸವನಗುಡಿ, ಬನಶಂಕರಿ, ಹನುಮಂತನಗರ, ಜಯನಗರ ಹಾಗೂ ಸುತ್ತಮುತ್ತ ಆಲಿಕಲ್ಲುಸಹಿತ ಮಳೆಯಾಯಿತು.

ಈ ವೇಳೆ ರಸ್ತೆ ಬದಿಯ ಅಂಗಡಿಗಳಲ್ಲಿ ಆಶ್ರಯ ಪಡೆದಿದ್ದ ಬೈಕ್‌ ಸವಾರರು, ಆಲಿಕಲ್ಲು ಸಂಗ್ರಹಿಸುತ್ತಿದ್ದ ದೃಶ್ಯ ಕಂಡುಬಂತು. ಕೆಲವರು ಆಲಿಕಲ್ಲು ಬೀಳುವ ದೃಶ್ಯವನ್ನು ಫೇಸ್‌ಬುಕ್‌ನಲ್ಲೂ ಹಂಚಿಕೊಂಡರು.

ನಾಯಂಡಹಳ್ಳಿ, ರಾಜಾಜಿನಗರ, ವಿಜಯನಗರ, ಮಡಿವಾಳ, ಎಲೆಕ್ಟ್ರಾನಿಕ್ ಸಿಟಿ, ಎಚ್‌.ಎಸ್‌.ಆರ್‌ ಬಡಾವಣೆ, ಯಶವಂತಪುರ, ಪೀಣ್ಯ, ಶಿವಾಜಿನಗರ, ಎಂ.ಜಿ.ರಸ್ತೆ, ಇಂದಿರಾನಗರ, ಕೋರಮಂಗಲ, ಸರ್ಜಾಪುರ ಹಾಗೂ ಸುತ್ತಮುತ್ತ ಮಳೆಯಾಗಿದೆ.

ಜ್ಞಾನಭಾರತಿ, ಸಿಐಡಿ ಕ್ವಾಟರ್ಸ್‌, ವಡೇರಹಳ್ಳಿ, ಬೆಮೆಲ್‌ ಬಡಾವಣೆ, ಬಿ.ಎಚ್‌.ಇ.ಎಲ್‌ ಬಡಾವಣೆ, ವಿದ್ಯಾಪೀಠ ವೃತ್ತದಲ್ಲಿ ಮರಗಳು ನೆಲಕ್ಕುರುಳಿವೆ.

ಸಂಚಾರ ದಟ್ಟಣೆ: ಮಳೆಯಿಂದಾಗಿ ನಗರದ ಜೆ.ಸಿ.ರಸ್ತೆ, ಹಡ್ಸನ್ ವೃತ್ತ, ಲಾಲ್‌ಬಾಗ್, ಗೂಡ್ಸ್ ಶೆಡ್ ರಸ್ತೆ, ಮೈಸೂರು ರಸ್ತೆ, ಮೇಖ್ರಿ ವೃತ್ತ, ಹೆಬ್ಬಾಳ ಹಾಗೂ ಸುತ್ತಮುತ್ತ ಸಂಚಾರ ದಟ್ಟಣೆ ಉಂಟಾಯಿತು.

ಬೈಕ್‌ ಸವಾರರು ರಸ್ತೆಯ ಬದಿಯ ಮರ ಹಾಗೂ ಅಂಗಡಿಗಳಲ್ಲಿ ಆಶ್ರಯ ಪಡೆದಿದ್ದರು. ಉಳಿದ ವಾಹನಗಳ ಓಡಾಟ ಸಾಮಾನ್ಯವಾಗಿತ್ತು. ಮಳೆ ನಿಂತ ಬಳಿಕ ಎಲ್ಲ ವಾಹನಗಳು ರಸ್ತೆಗೆ ಇಳಿದಿದ್ದರಿಂದ ದಟ್ಟಣೆ ಕಂಡುಬಂತು.

ಸೋಂಪುರದಲ್ಲಿ ತಂಪೆರೆದ ಮಳೆ (ದಾಬಸ್‌ಪೇಟೆ): ನೆಲಮಂಗಲ ತಾಲ್ಲೂಕಿನ ಸೋಂಪುರದಲ್ಲಿ ಶನಿವಾರ ಸುರಿದ ಮಳೆಯಿಂದಾಗಿ ಭೂಮಿಗೆ ತಂಪೆರೆಯಿತು.

ಮಳೆಗಾಗಿ ಆಕಾಶ ನೋಡುತ್ತಿದ್ದ ರೈತರ ಮೊಗದಲ್ಲಿ ಸಂತಸದ ಛಾಯೆ ಮೂಡುವಂತಾಗಿದೆ. ಶನಿವಾರ ಮಧ್ಯಾಹ್ನ 3ಕ್ಕೆ ಆರಂಭವಾದ ಮಳೆ 4.30ರವರೆಗೆ ಸುರಿಯಿತು. ಧಾರಾಕಾರ ಮಳೆಯಿಂದಾಗಿ ಹೊಲಗಳಲ್ಲಿ ನೀರು ಸಂಗ್ರಹಗೊಂಡಿತು.

‘ಬಿಸಿಲಿನ ತಾಪದಿಂದಾಗಿ ಕೆರೆ–ಕುಂಟೆಗಳು ಬರಿದಾಗಿದ್ದವು. ಬೆಳೆಗಳು ಒಣಗುತ್ತಿದ್ದವು. ಜನ–ಜಾನುವಾರುಗಳಿಗೆ ನೀರಿನ ತತ್ವಾರ ಎದುರಾಗಿತ್ತು. ಮಳೆಯಿಂದಾಗಿ ತುಸು ಜೀವ ಬಂದಂತಾಗಿದೆ’ ಎಂದು ರೈತ ಸಿದ್ದಪ್ಪ ಸಂತಸ ವ್ಯಕ್ತಪಡಿಸಿದರು.

‘ಭರಣಿ ಮಳೆ ಹೊಯ್ದರೆ ಧರಣಿ ತುಂಬ ಬೆಳೆ ಎಂದು ಹಿರಿಯರು ಹೇಳುತ್ತಾರೆ. ಈಗ ಭರಣಿ ಮಳೆ ಬಿದ್ದಿರುವುದರಿಂದ ಒಳ್ಳೆಯ ಬೆಳೆ ಬರಲಿದೆ’ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಕೆಂಗೇರಿಯಲ್ಲಿ ಭಾರಿ ಮಳೆ
ಕೆಂಗೇರಿ ಹೋಬಳಿಯ ವ್ಯಾಪ್ತಿಯಲ್ಲಿ ಶನಿವಾರ ಆಲಿಕಲ್ಲುಸಹಿತ ಧಾರಾಕಾರ ಮಳೆ ಸುರಿಯಿತು. ಕೆಂಗೇರಿ ಉಪನಗರ, ಉತ್ತರಹಳ್ಳಿ, ಮೈಸೂರು ರಸ್ತೆ, ನಾಗದೇವನಹಳ್ಳಿಯಲ್ಲಿ ಸಂಜೆ 4ರಿಂದ 5.30 ರವರೆಗೆ ಮಳೆ ಬಿತ್ತು.

ADVERTISEMENT

ರಾಜರಾಜೇಶ್ವರಿನಗರದ ಮಣಿಪಾಲ ಆಸ್ಪತ್ರೆ, ಕೆಂಗೇರಿಯ ಆಂಜನೇಯ ದೇವಸ್ಥಾನದ ಬಳಿ ಮರಗಳು ಉರುಳಿವೆ. ಆರ್‌.ವಿ. ಕಾಲೇಜು, ನಾಗದೇವನಹಳ್ಳಿ, ಬಿ.ಜಿ.ಎಸ್‌ ಆಸ್ಪತ್ರೆ ಬಳಿ ಮರದ ಕೊಂಬೆಗಳು ಬಿದ್ದಿದ್ದು, ಅದರಿಂದ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು.

‘ಮನೆಯ ಹೆಂಚುಗಳು ಒಡೆದು ಹೋಗುವಂತೆ ಆಲಿಕಲ್ಲು ಮಳೆ ಬಿತ್ತು. ತಾಪಮಾನದ ಏರಿಕೆಯಿಂದ ಮನೆಯಲ್ಲಿ ಇರಲು ಸಾಧ್ಯವಾಗುತ್ತಿರಲಿಲ್ಲ. ಮಳೆಯಿಂದಾಗಿ ಈಗ ವಾತಾವರಣ ತಂಪಾಗಿದೆ’ ಎಂದು ಸ್ಥಳೀಯ ನಿವಾಸಿ ಮೀನಾ ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.