ADVERTISEMENT

ನಗರದ ಯೋಜನೆಗಳಿಗೆ ಕೇಂದ್ರಕ್ಕೆ ಅಹವಾಲು

ಬಿಬಿಎಂಪಿ ನಿಯೋಗಕ್ಕೆ ನೆರವಿನ ಭರವಸೆ ನೀಡಿದ ಕೇಂದ್ರ ಸಚಿವರು

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2015, 19:59 IST
Last Updated 26 ಫೆಬ್ರುವರಿ 2015, 19:59 IST

ಬೆಂಗಳೂರು: ನಗರದ ಮಹತ್ವದ ಮೂಲಸೌಕರ್ಯ ಯೋಜನೆಗಳಿಗೆ ಅಗತ್ಯ ಅನುದಾನ ನೀಡುವಂತೆ ಮೇಯರ್ ನೇತೃತ್ವದ ಬೃಹತ್ ಬೆಂಗ­ಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿಯೋಗ ನವದೆಹಲಿ­ಯಲ್ಲಿ ಕೇಂದ್ರದ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

‘ಕೇಂದ್ರ ಸರ್ಕಾರದಿಂದ ನಗರದ ಎಲ್ಲ ಮಹತ್ವದ ಯೋಜನೆಗಳಿಗೆ ನೆರವಿನ ಭರ­ವಸೆ ಸಿಕ್ಕಿದೆ’ ಎಂದು ಗುರುವಾರ ಪತ್ರಿಕಾ­ಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಹಾಗೂ ಮೇಯರ್‌ ಎನ್‌.­ಶಾಂತ­ಕುಮಾರಿ ತಿಳಿಸಿದರು.

‘ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಅದನ್ನು ನಿಯಂತ್ರಿಸಲು ಒಟ್ಟು 75 ಕಿ.ಮೀ. ಉದ್ದದ ಸಿಗ್ನಲ್‌ ಮುಕ್ತ ಕಾರಿಡಾರ್‌ ನಿರ್ಮಾಣಕ್ಕೆ ಉದ್ದೇ­ಶಿಸ­ಲಾಗಿದೆ. ಈ ಯೋಜನೆಗೆ ಒಟ್ಟು ರೂ. 18,409 ಕೋಟಿ ಅಗತ್ಯವಿದೆ. ಕೇಂದ್ರೀಯ ರೇಷ್ಮೆ ಮಂಡಳಿ­ಯಿಂದ ಹೆಬ್ಬಾಳ­ದವರೆಗೆ, ಕೆ.ಆರ್‌.­ಪುರದಿಂದ ಗೊರಗುಂಟೆ ಪಾಳ್ಯದವರೆಗೆ, ಜ್ಞಾನ­ಭಾರತಿ­ಯಿಂದ ವರ್ತೂರು ಕೋಡಿವರೆಗೆ ಸಿಗ್ನಲ್‌ ಮುಕ್ತ ಎತ್ತರಿಸಿದ ರಸ್ತೆ ನಿರ್ಮಾಣ ಮಾಡಲು ಉದ್ದೇಶಿಸ­ಲಾಗಿದೆ’ ಎಂದು ವಿವರಿಸಿದರು.

‘ಇನ್‌ಫ್ರಾ ಸಪೋರ್ಟ್‌ ಎಂಜಿನಿ­ಯ­ರಿಂಗ್‌ ಕನ್ಸಲ್ಟೆಂಟ್‌ ಸಂಸ್ಥೆ ಈಗಾಗಲೇ ಈ ಕಾರಿಡಾರ್‌ಗಳ ಪ್ರಾಥಮಿಕ ಯೋಜನಾ ವರದಿ ಸಿದ್ಧಪಡಿಸಿದ್ದು, ಐದು ವರ್ಷ­ಗಳಲ್ಲಿ ಹಂತ–ಹಂತವಾಗಿ ಅನು­ಷ್ಠಾನಕ್ಕೆ ತರಲು ಉದ್ದೇಶಿಸಲಾಗಿದೆ’ ಎಂದರು.

‘ಕೇಂದ್ರ ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯ ನಾಯ್ಡು, ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರಿಗೆ ವಿವರವಾದ ಯೋಜನಾ ವರದಿ ಸಲ್ಲಿಸಲಾಗಿದ್ದು, ರಾಜ್ಯ ಬಜೆಟ್‌ನಲ್ಲೂ ಈ ಯೋಜನೆ­ಗಳನ್ನು ಸೇರ್ಪಡೆ ಮಾಡುವಂತೆ ಅವರು ಸಲಹೆ ನೀಡಿ­ದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಈ ಸಂಬಂಧ ಮನವರಿಕೆ ಮಾಡಿಕೊಡುತ್ತೇವೆ’ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

‘ನಗರ ಪ್ರದೇಶದಲ್ಲಿ ಸಾರ್ವಜನಿಕ–ಖಾಸಗಿ ಸಹಭಾಗಿತ್ವದಲ್ಲಿ ಎತ್ತರಿಸಿದ ರಸ್ತೆ ನಿರ್ಮಾಣಕ್ಕೆ ಅವಕಾಶ ಮಾಡಿ­ಕೊಡಲು ಟೋಲ್‌ ಸಂಗ್ರಹ ನಿಯಮಾ­ವಳಿಗೆ ತಿದ್ದುಪಡಿ ತರಲು ಚಿಂತಿಸಲಾಗು­ತ್ತಿದೆ. ಈ ಸಂಬಂಧ ಶೀಘ್ರವೇ ನಿರ್ಣಯ ಕೈಗೊಳ್ಳಲಾಗುವುದು ಎನ್ನುವ ಭರವಸೆ ಗಡ್ಕರಿ ಅವರಿಂದ ಸಿಕ್ಕಿದೆ’ ಎಂದು ವಿವರಿಸಿದರು.

‘ಬಿಬಿಎಂಪಿಗೆ ಸಂಬಂಧಿಸಿದ ವಿವಿಧ ಯೋಜನೆಗಳಿಗಾಗಿ ರಕ್ಷಣಾ ಇಲಾಖೆಗೆ ಸೇರಿದ 46 ಎಕರೆ ಭೂಮಿಯನ್ನು ಹಸ್ತಾಂ­ತರಿಸುವಂತೆ ರಕ್ಷಣಾ ಸಚಿವ ಮನೋಹರ ಪರಿಕ್ಕರ್‌ ಅವರಿಗೆ ಮನವಿ ಮಾಡಲಾಗಿದೆ’ ಎಂದು ಹೇಳಿದರು.

‘ಬೈಯಪ್ಪನಹಳ್ಳಿ ರೈಲ್ವೆ ಮೇಲ್ಸೇತುವೆ ಕಾಮ­ಗಾರಿ ಶೇ 65ರಷ್ಟು ಮುಗಿದಿದ್ದು, ಸೇತು­ವೆಯ ಉಳಿದ ಭಾಗ ರಕ್ಷಣಾ ಭೂಮಿಯಲ್ಲಿ ನಿರ್ಮಾಣ ಆಗಬೇಕಿದೆ ಎನ್ನುವ ಸಂಗತಿಯನ್ನು ಸಚಿ­ವರ ಗಮ­ನಕ್ಕೆ ತರಲಾಯಿತು. ಹಾಗೆಯೇ ಈಜಿ­ಪುರ–ಸರ್ಜಾಪುರ ಮತ್ತು ಲಸ್ಕರ್‌–ಹೊಸೂರು ರಸ್ತೆ ವಿಸ್ತರಣೆಗೂ ಭೂಮಿಯ ಅಗತ್ಯವನ್ನು ಪ್ರತಿ­ಪಾದಿ­ಸ­ಲಾಯಿತು. ಪರ್ಯಾಯವಾಗಿ ಬೇರೆಡೆ ಭೂಮಿ ಕೊಟ್ಟರೆ ಈ ಮೂರೂ ಭಾಗದ ಪ್ರದೇಶ­ವನ್ನು ಬಿಟ್ಟುಕೊಡಲಾಗುವುದು ಎನ್ನುವ ಭರವಸೆ ಸಚಿವ­ರಿಂದ ದೊರೆತಿದೆ’ ಎಂದು ಮಾಹಿತಿ ನೀಡಿದರು.

‘ನಗರದಲ್ಲಿ ಬಾಕಿಯಿರುವ 22 ರೈಲ್ವೆ ಕೆಳ/ಮೇಲ್ಸೇತುವೆಗಳ ನಿರ್ಮಾಣ ಕಾರ್ಯ ತ್ವರಿತಗೊಳಿಸಲು ರೈಲ್ವೆ ಸಚಿವ ಸುರೇಶ್‌ ಪ್ರಭು ಅವರು ವಿಶೇಷ ಅಧಿಕಾರಿಯೊಬ್ಬರನ್ನು ನೇಮಿಸುವ ಭರವಸೆ ನೀಡಿದ್ದಾರೆ. ಹಾಗೆಯೇ ನಗರದಲ್ಲಿ ಭದ್ರತಾ ವ್ಯವಸ್ಥೆಗೆ ಸಿ.ಸಿ ಕ್ಯಾಮೆರಾ ಅಳವಡಿಸಲು ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ಮನವಿ ಮಾಡಲಾಗಿದೆ’ ಎಂದು ಹೇಳಿದರು.

ಕೇಂದ್ರ ಸಚಿವರಾದ ಅನಂತ­ಕುಮಾರ್‌, ಡಿ.ವಿ. ಸದಾನಂದಗೌಡ, ಸಂಸದರಾದ ಪಿ.ಸಿ. ಮೋಹನ್‌, ಡಿ.ಕೆ. ಸುರೇಶ್‌, ರಾಜ್ಯದ ಸಚಿವ­ರಾದ ಕೆ.ಜೆ.ಜಾರ್ಜ್‌, ಆರ್‌.­ರೋಷನ್‌ ಬೇಗ್‌, ಕೃಷ್ಣ ಬೈರೇಗೌಡ, ದಿನೇಶ್‌ ಗುಂಡೂ­ರಾವ್‌,
ಉಪ ಮೇಯರ್‌ ಕೆ.ರಂಗಣ್ಣ, ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮೀನಾರಾಯಣ  ಅವರು ನಿಯೋಗದಲ್ಲಿದ್ದರು.

113 ವಾರ್ಡ್‌ಗಳಲ್ಲಿ ಹೊಸದಾಗಿ ಟೆಂಡರ್‌
ಬಿಬಿಎಂಪಿ ಕಳೆದ ಮೂರು ತಿಂಗಳ ಬಾಕಿ ಉಳಿಸಿಕೊಂಡಿದ್ದರಿಂದ ಕಸ ವಿಲೇವಾರಿ ಮಾಡಲು ಗುತ್ತಿಗೆದಾರರು ನಿರಾಕರಿಸಿದ್ದು ಯಲಹಂಕ, ಆರ್‌.ಆರ್‌.ನಗರ ಹಾಗೂ ಜಯನಗರ ಪ್ರದೇಶದಲ್ಲಿ ಕಳೆದ ನಾಲ್ಕು ದಿನಗಳಿಂದ ಕಸ ವಿಲೇವಾರಿ ಆಗಿಲ್ಲ. ಇದರಿಂದ ಆ ಭಾಗದ ಜನ ಪರದಾಡುವಂತಾಗಿದೆ.

‘ಬಿವಿಜಿ ಇಂಡಿಯಾ ಸಂಸ್ಥೆ ಕಸ ವಿಲೇವಾರಿ ಮಾಡಲು ಸಂಪೂರ್ಣ ವಿಫಲ­ವಾಗಿದೆ. ಸಮರ್ಪಕವಾಗಿ ಕಸ ವಿಲೇವಾರಿ ಮಾಡುವ ಗುತ್ತಿಗೆದಾರರಿಗೆ ಮಾತ್ರ ಬಿಲ್‌ ಪಾವತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
‘ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಸಮರ್ಪಕವಾಗಿ ಕಸ ವಿಲೇವಾರಿ ಮಾಡದ ಗುತ್ತಿಗೆ­ದಾರರ ಗುತ್ತಿಗೆಯನ್ನು ಈಗಾಗಲೇ ರದ್ದುಗೊಳಿಸಲಾಗಿದೆ. 113 ವಾರ್ಡ್‌ಗಳಲ್ಲಿ ಹೊಸದಾಗಿ ಟೆಂಡರ್‌ ಕರೆಯಲಾಗಿದೆ’ ಎಂದು ಹೇಳಿದರು.

‘ಯಲಹಂಕ ವಲಯದಲ್ಲಿ ಬಿವಿಜಿ ಇಂಡಿಯಾ ಸಂಸ್ಥೆಗೆ ರೂ. 3 ಕೋಟಿ ದಂಡ ವಿಧಿಸ­ಲಾಗಿದೆ. ಆ ಸಂಸ್ಥೆಗೆ ವಹಿಸಿದ್ದ ಮೂರು ಪ್ಯಾಕೇಜ್‌ಗಳನ್ನು ರದ್ದುಗೊಳಿಸ­ಲಾ­ಗಿತ್ತು. ಎರಡು ಪ್ಯಾಕೇಜ್‌ಗಳ ರದ್ದತಿಗೆ ಕೋರ್ಟ್‌ನಿಂದ ಅದು ತಡೆಯಾಜ್ಞೆ ತಂದಿದೆ. ಇನ್ನೊಂದನ್ನು ಬಿಬಿಎಂಪಿಯಿಂದಲೇ ನಿರ್ವಹಣೆ ಮಾಡಲಾಗುತ್ತಿದೆ’ ಎಂದು ವಿವರಿಸಿದರು.

ಸಿಟಿ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರು
‘ಸಿಟಿ (ಮೆಜೆಸ್ಟಿಕ್‌) ರೈಲು ನಿಲ್ದಾಣಕ್ಕೆ ಸ್ವಾತಂತ್ರ್ಯಯೋಧ ಕ್ರಾಂತಿ­ವೀರ ಸಂಗೊಳ್ಳಿ ರಾಯಣ್ಣ ಅವರ ಹೆಸರು ನಾಮಕರಣ ಮಾಡಲು ರೈಲ್ವೆ ಸಚಿವ ಸುರೇಶ್‌ ಪ್ರಭು ಒಪ್ಪಿಗೆ ನೀಡಿದ್ದಾರೆ’ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

‘ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ಪ್ರಸ್ತಾವ ಮಂಡಿಸಿ, ಅನುಮತಿ ಪಡೆದು ಕಳುಹಿಸಿಕೊಟ್ಟರೆ ನಾಮಕರಣ ಪ್ರಕ್ರಿಯೆ ಪೂರೈಸಲು ಯಾವುದೇ ಅಭ್ಯಂತರ ಇಲ್ಲ ಎನ್ನುವುದು ಸಚಿವರ ಅಭಿಪ್ರಾಯವಾಗಿತ್ತು’ ಎಂದು ತಿಳಿಸಿದರು.

‘ಜೆ–ನರ್ಮ್‌ ಸ್ಥಾನದಲ್ಲಿ ಅಮೃತ್‌ ಎನ್ನುವ ಹೊಸ ಯೋಜನೆ ಆರಂಭಿಸಲಾಗುತ್ತಿದ್ದು, ಹಿಂದೆ ಆ ಯೋಜನೆಯಲ್ಲಿದ್ದ ನಗರದ ಮಹತ್ವದ ಯೋಜನೆಗಳಿಗೆ ಸಂಬಂಧಿಸಿದಂತೆ ಮರು ಪ್ರಸ್ತಾವ ಸಲ್ಲಿಸಲು ನಗರಾಭಿವೃದ್ಧಿ ಸಚಿವರು ಸೂಚಿಸಿದ್ದಾರೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.