ADVERTISEMENT

ನಗರದ ಸುತ್ತ ವರ್ತುಲ ಸುರಂಗ ಮಾರ್ಗ

20 ದಿನಗಳಲ್ಲಿ ಅಮೆರಿಕ ಕಂಪೆನಿಯಿಂದ ಪ್ರಾತ್ಯಕ್ಷಿಕೆ: ಬೆಂಗಳೂರು ಅಭಿವೃದ್ಧಿ ಸಚಿವ ಜಾರ್ಜ್‌

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2015, 19:30 IST
Last Updated 1 ಡಿಸೆಂಬರ್ 2015, 19:30 IST

ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಕುಗ್ಗಿಸುವುದಕ್ಕಾಗಿ ಸರ್ಕಾರಿ– ಖಾಸಗಿ ಸಹಭಾಗಿತ್ವದಲ್ಲಿ  ವರ್ತುಲ ಸುರಂಗ ಮಾರ್ಗ ನಿರ್ಮಿಸಲು ನಗರಾಭಿವೃದ್ಧಿ ಇಲಾಖೆ ಯೋಚಿಸುತ್ತಿದೆ.

ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌, ‘ಅಮೆರಿಕದ ಕಂಪೆನಿಯೊಂದು ಈ ಮಾರ್ಗದ ಪ್ರಸ್ತಾವನೆ ಸಲ್ಲಿಸಿದೆ. ಈ ಯೋಜನೆಯಿಂದ ಆಗುವ ಲಾಭಗಳ ಬಗ್ಗೆ  ಅಧ್ಯಯನ ನಡೆಸಿದೆ’ ಎಂದರು.

‘ಇಂತಹ ಯೋಜನೆಯನ್ನು ಮಲೇಷ್ಯಾದಲ್ಲಿ ಅನುಷ್ಠಾನ ಮಾಡಿದ ಅನುಭವ ಈ ಕಂಪೆನಿಗಿದೆ. 15–20 ದಿನಗಳಲ್ಲಿ ಅದರ ಪ್ರತಿನಿಧಿಗಳು ಯೋಜನೆ ರೂಪುರೇಷೆಯ ಪ್ರಾತ್ಯಕ್ಷಿಕೆ ನೀಡಲಿದ್ದಾರೆ’ ಎಂದ ಅವರು,  ಕಂಪೆನಿ ಹೆಸರು ಬಹಿರಂಗಕ್ಕೆ ನಿರಾಕರಿಸಿದರು.

‘ಯೋಜನೆ ಅಡಿಯಲ್ಲಿ ನಗರದ ಸುತ್ತ ಸುರಂಗ ಮಾರ್ಗ ನಿರ್ಮಿಸಲಾಗುವುದು. ಮಧ್ಯದಲ್ಲಿ ‘+’ ಆಕಾರದಲ್ಲಿ ರಸ್ತೆ ನಿರ್ಮಾಣವಾಗಲಿದೆ. ಇದರಿಂದಾಗಿ ನಗರದ ಸುತ್ತ ವಾಹನಗಳ ಸಂಚಾರ ಸುಗಮವಾಗಲಿದೆ’ ಎಂದರು.

ಮಾನೊ ರೈಲು: ಮೆಟ್ರೊ ರೈಲಿಗೆ ಮಾನೊ ರೈಲುಗಳ  ಮೂಲಕ ಸಂಪರ್ಕ ಕಲ್‍ಪಿಸುವ ಯೋಜನೆಯ ಪ್ರಸ್ತಾವನೆಯೂ ಇಲಾಖೆ ಮುಂದಿದೆ. ಇದು ಪ್ರಾಥಮಿಕ ಹಂತದಲ್ಲಿದೆ ಎಂದು ಉತ್ತರಿಸಿದರು.

ಹಿಂದಿನ ಆಡಳಿತದ ನಿರ್ಲಕ್ಷ್ಯ: ರಸ್ತೆ ಗುಂಡಿ  ಮುಚ್ಚುವ ಕಾಮಗಾರಿ ಪರಿಶೀಲನೆಗೆ  ರಾತ್ರಿ ನಗರ ಸಂಚಾರ ಕೈಗೊಳ್ಳುತ್ತಿರುವ  ಬಗ್ಗೆ ಪ್ರಸ್ತಾಪಿಸಿದ ಅವರು, ‘2008ರಲ್ಲಿ ನಗರದ ರಸ್ತೆಗಳನ್ನು ಪೂರ್ಣ ಪ್ರಮಾಣದಲ್ಲಿ ದುರಸ್ತಿ ಮಾಡಲಾಗಿತ್ತು. ಆ ಬಳಿಕ 2012–13, 2013–14 ಮತ್ತು 2014–15ನೇ ಸಾಲಿನಲ್ಲಿ ದುರಸ್ತಿಗಾಗಿ ಸ್ವಲ್ಪ ಹಣ ಬಿಡುಗಡೆ ಮಾಡಲಾಗಿತ್ತು’ ಎಂದರು.

‘ಹಿಂದಿನ ಸರ್ಕಾರ ಮತ್ತು ಬಿಬಿಎಂಪಿ ಆಡಳಿತ ಪಕ್ಷ ರಸ್ತೆಗಳನ್ನು ನಿರ್ಲಕ್ಷಿಸಿದ್ದವು. ಮುಖ್ಯಮಂತ್ರಿಗಳು ನಗರ ಪ್ರದಕ್ಷಿಣೆ ಮಾಡಿದ ಸಂದರ್ಭದಲ್ಲಿ ರಸ್ತೆ ದುರಸ್ತಿ ನಿರ್ಧಾರ ಕೈಗೊಂಡಿದ್ದರು. ನಂತರ ಬಿಬಿಎಂಪಿ ಚುನಾವಣೆ ಮತ್ತು ಮಳೆಯ ಕಾರಣಕ್ಕೆ ದುರಸ್ತಿ ಕಾರ್ಯ ವಿಳಂಬವಾಗಿತ್ತು’ ಎಂದು ಹೇಳಿದರು.

‘ನಗರದ ರಸ್ತೆಗಳ ದುರಸ್ತಿ ಕಾಮಗಾರಿಯನ್ನು ₹1,200 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ. ಮೊನ್ನೆ ನಡೆದ ಸಚಿವ ಸಂಪುಟ ಸಭೆಯು ₹797 ಕೋಟಿ ವೆಚ್ಚದಲ್ಲಿ ಪ್ರಮುಖ ರಸ್ತೆಗಳು ಮತ್ತು ವಾರ್ಡ್‌ ರಸ್ತೆಗಳನ್ನು ದುರಸ್ತಿ ಮಾಡುವ ನಿರ್ಧಾರ ಕೈಗೊಂಡಿದೆ. ಲೋಕೋಪಯೋಗಿ ಇಲಾಖೆ ಕರೆದಿರುವ ಟೆಂಡರ್‌ ಪ್ರಕ್ರಿಯೆಯೂ ಅಂತಿಮ ಹಂತದಲ್ಲಿದೆ’ ಎಂದರು.

‘ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವುದಕ್ಕೆ ನಮ್ಮ ಮೊದಲ ಆದ್ಯತೆ. ನಂತರ ದುರಸ್ತಿ ಕಾರ್ಯ ಆರಂಭಿಸಲಾಗುವುದು’ ಎಂದರು.

ಕಪ್ಪು ಪಟ್ಟಿಗೆ: ಗುತ್ತಿಗೆದಾರರು ಗುಣಮಟ್ಟದ ರಸ್ತೆ ನಿರ್ಮಾಣ ಮಾಡಬೇಕು. ಒಂದು ವೇಳೆ, ರಸ್ತೆ ಕಳಪೆ ಮಟ್ಟದ್ದು ಎಂದು ಕಂಡು ಬಂದರೆ ಎಂಜಿನಿಯರ್‌ಗಳು ಮತ್ತು ಗುತ್ತಿಗೆದಾರರ ವಿರುದ್ಧ  ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರತ್ಯೇಕ ಟೌನ್‌ಶಿಪ್‌: ‘ಚಾಲಕರು, ಕೂಲಿ ಕಾರ್ಮಿಕರು, ಮನೆ ಕೆಲಸದವರು ಸೇರಿದಂತೆ ಕಡಿಮೆ ಆದಾಯ ಹೊಂದಿರುವವರಿಗೆ ಇಲಾಖೆ ವತಿಯಿಂದ ಮನೆಗಳನ್ನು ನಿರ್ಮಿಸಿಕೊಡುವ ಬಗ್ಗೆ ಚಿಂತನೆ ನಡೆಸಲಾಗಿದೆ’ ಎಂದು ಹೇಳಿದರು.

‘ನಗರದ ಹೊರವಲಯದಲ್ಲಿ ಟೌನ್‌ ಶಿಪ್‌ ಮಾದರಿಯಲ್ಲಿ ಮನೆಗಳನ್ನು ನಿರ್ಮಾಣ ಮಾಡಲು ಜಾಗದ ಹುಡುಕಾಟ ನಡೆದಿದೆ. ಎರಡು ಮೂರು ಕಡೆಗಳಲ್ಲಿ ಲಭ್ಯವಿರುವ ಜಮೀನಿನಲ್ಲಿ ಪ್ರಾಯೋಗಿಕವಾಗಿ ಯೋಜನೆ ಆರಂಭಿಸುವ ಯೋಚನೆ ಇದೆ. ಮನೆ ಬೇಕಾದವರಿಗೆ ಆರಂಭದಲ್ಲಿ ಹಣಕಾಸು ಸಂಸ್ಥೆಗಳ ಮೂಲಕ ಸಾಲ ಒದಗಿಸಿ, ನಂತರ ನಿರ್ದಿಷ್ಟ ಅವಧಿಗೆ ಕಂತುಗಳಲ್ಲಿ ಮನೆ ಮಾಲೀಕರು ಸಾಲ ತೀರಿಸುವ ವ್ಯವಸ್ಥೆಯನ್ನು ಈ ಯೋಜನೆಯಲ್ಲಿ ಅಳವಡಿಸುವ ಯೋಚನೆ ಇದೆ’ ಎಂದರು.

ವೈಟ್‌ಫೀಲ್ಡ್‌ ಬೇಡಿಕೆಗೆ ಸ್ಪಂದನೆ
ರಸ್ತೆ, ಚರಂಡಿ ಸೇರಿದಂತೆ ಇತರ ಮೂಲಸೌಕರ್ಯ ಒದಗಿಸುವಂತೆ ಆಗ್ರಹಿಸಿ ವೈಟ್‌ಫೀಲ್ಡ್‌ನಲ್ಲಿ ಐಟಿ ಉದ್ಯೋಗಿಗಳು ಮತ್ತು ನಾಗರಿಕರು ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಜಾರ್ಜ್‌, ‘ನೀರಿನ ಕೊಳವೆ ಹಾಕುವುದಕ್ಕಾಗಿ ಜಲ ಮಂಡಳಿಯು ರಸ್ತೆ ಆಗೆದಿದ್ದರಿಂದ ಅಲ್ಲಿ ಸಮಸ್ಯೆಯಾಗಿದೆ. ಈಗಾಗಲೇ ಅದನ್ನು ಸರಿಪಡಿಸಲು ಗುತ್ತಿಗೆ ನೀಡಲಾಗಿದೆ’ ಎಂದರು.

‘ನಾನು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಐಟಿ ಉದ್ಯೋಗಿಗಳ, ನಾಗರಿಕರ ಬೇಡಿಕೆಗೆ ಅನುಗುಣವಾಗಿ ಕಾಮಗಾರಿಗಳು ನಡೆಯುತ್ತಿವೆ. ವೈಟ್‌ಫೀಲ್ಡ್‌ ಪ್ರದೇಶದಲ್ಲಿ ಸಂಪರ್ಕ ರಸ್ತೆಗಳು ಸರಿಯಾಗಿ ಇಲ್ಲದೇ ಇರುವುದರಿಂದ ಈ ಸಮಸ್ಯೆ ಉಂಟಾಗಿದೆ.

ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಕಂಪೆನಿಗಳಿಗೆ ಜಮೀನು ಹಂಚಿಕೆ ಮಾಡುವಾಗ ರಸ್ತೆಗಳ ಬಗ್ಗೆ ಯೋಚನೆ ಮಾಡಿಲ್ಲ. ಈಗ ಸ್ಥಳೀಯ ಸಂಘಟನೆಗಳು ಕೆಲವು ಕಂಪೆನಿಗಳ ಜೊತೆ ಮಾತನಾಡಿ, ಅವುಗಳಿಗೆ ಸೇರಿದ  ಜಾಗದಲ್ಲಿ ರಸ್ತೆ ನಿರ್ಮಿಸಲು ಮನವೊಲಿಸಿವೆ’ ಎಂದು ಮಾಹಿತಿ ನೀಡಿದರು.

‘ವೈಟ್‌ಫೀಲ್ಡ್‌ನಲ್ಲಿ ಮೆಟ್ರೊ ಎರಡನೇ ಹಂತದ ಕಾಮಗಾರಿ ಪೂರ್ಣಗೊಂಡ ಬಳಿಕ ಮತ್ತು ಉದ್ದೇಶಿತ ಮೇಲ್ಸೇತುವೆ ನಿರ್ಮಾಣವಾದರೆ ಆ ಭಾಗದ ಜನರ ಸಮಸ್ಯೆ ನೀಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT