ADVERTISEMENT

ನಗರ ದಕ್ಷಿಣ: ಉತ್ತಮ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2015, 20:34 IST
Last Updated 18 ಏಪ್ರಿಲ್ 2015, 20:34 IST

ಬೆಂಗಳೂರು: ಮೇಕೆದಾಟು ಯೋಜನೆಯನ್ನು ತಕ್ಷಣ ಕೈಗೆತ್ತಿಕೊಳ್ಳಬೇಕು ಎಂದು ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಬಂದ್‌ಗೆ ಬೆಂಗಳೂರು ದಕ್ಷಿಣ ಭಾಗದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಶ್ರೀನಿವಾಸನಗರ, ಕತ್ರಿಗುಪ್ಪೆ, ಬ್ಯಾಂಕ್‌ ಕಾಲೋನಿ, ಶ್ರೀನಗರ, ಚಾಮರಾಜಪೇಟೆ, ವಿಜಯನಗರ ಸೇರಿದಂತೆ ಇತರ ಕಡೆಗಳಲ್ಲಿ ಬಿಎಂಟಿಸಿ ಬಸ್‌ ಸಂಚಾರ ಸ್ಥಗಿತಗೊಂಡಿದ್ದರಿಂದ ಸಾರ್ವಜನಿಕರು ದ್ವಿಚಕ್ರ ವಾಹನಗಳು, ಕಾರುಗಳು, ಖಾಸಗಿ ವಾಹನಗಳಲ್ಲಿ ಓಡಾಟ ನಡೆಸುತ್ತಿದ್ದ ದೃಶ್ಯ ಕಂಡುಬಂದಿತು.

ಕಚೇರಿಗಳಿಗೆ ರಜೆ ಘೋಷಿಸಿದ್ದರಿಂದ ಮಕ್ಕಳೊಂದಿಗೆ ಯುವಕರು ಮೈದಾನಗಳಲ್ಲಿ ಕ್ರಿಕೆಟ್‌ ಆಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.  ವಯಸ್ಕರು ರಸ್ತೆ ಬದಿಗಳಲ್ಲಿ ತಮ್ಮ ಸ್ನೇಹಿತರೊಂದಿಗೆ ಹರಟೆ  ಹೊಡೆಯುತ್ತಿದ್ದರು.

ಇನ್ನು ರಿಕ್ಷಾ ಚಾಲಕರು, ಕೂಲಿಕಾರ್ಮಿಕರು ಬಂದ್‌ನಿಂದಾಗಿ ಒಂದು ದಿನದ ಸಂಬಳ ಕಳೆದುಕೊಂಡ ಬಗ್ಗೆ ಅಳಲು ತೋಡಿಕೊಂಡರೆ, ‘ಬಂದ್‌ ನಡೆಸಿ ಸರ್ಕಾರಕ್ಕೆ ಕೋಟಿ ನಷ್ಟ ಮಾಡುವ ಅವಶ್ಯಕತೆ ಇರಲಿಲ್ಲ.  ಮೇಕೆದಾಟು ಯೋಜನೆ ಶೀಘ್ರ ಆರಂಭವಾಗುವಂತೆ ಸರ್ಕಾರ ರಾಜಕೀಯ ಇಚ್ಛಾ ಶಕ್ತಿ ತೋರಿಸಬೇಕೇ ಹೊರತೂ ಬಂದ್‌ ಉತ್ತರವಲ್ಲ’ ಎಂದು ಶ್ರೀನಿವಾಸನಗರದ ಪ್ರಕಾಶ್‌ ಎಂಬುವರು ತಿಳಿಸಿದ್ದಾರೆ.  

ಕೆಲ ಪ್ರದೇಶಗಳಲ್ಲಿ ಹಾಲಿನ ಅಂಗಡಿಗಳು, ಆಸ್ಪತ್ರೆಗಳು ತೆರೆದಿದ್ದವು. ಅಂಗಡಿ ಮುಗ್ಗಟ್ಟುಗಳು ಸಂಪೂರ್ಣವಾಗಿ ಮುಚ್ಚಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.