ADVERTISEMENT

ನರೋನಾ ಸಹಚರರ ಬಂಧನ

ಉದ್ಯಮಿಗಳಿಗೆ ಕಮಿಷನ್‌ ಆಮಿಷ ಒಡ್ಡಿದ ಆರೋಪ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2016, 19:43 IST
Last Updated 3 ಡಿಸೆಂಬರ್ 2016, 19:43 IST

ಬೆಂಗಳೂರು: ನೋಟುಗಳ ಬದಲಾವಣೆಗೆ ಕರೆದು ರಿಯಲ್‌ ಎಸ್ಟೇಟ್ ಉದ್ಯಮಿಗಳಿಂದ ₹ 83 ಲಕ್ಷ ಕದ್ದೊಯ್ದಿದ್ದ ಪ್ರಕರಣದಲ್ಲಿ ನಿವೃತ್ತ ಡಿವೈಎಸ್ಪಿ ಬಾಬು ನರೋನ ಅವರ ಮತ್ತಿಬ್ಬರು ಸಹಚರರಾದ ವೀರೇಂದ್ರ ಪಾಟೀಲ್ ಹಾಗೂ ಹೇಮಂತ್‌ ಜೆ.ಪಿ.ನಗರ ಪೊಲೀಸರ ಬಲೆಗೆ ಬಿದ್ದಿದ್ದಾರೆ.

‘ಎಲೆಕ್ಟ್ರಾನಿಕ್‌ ಸಿಟಿ ಸಮೀಪದ ಸಿಂಗಸಂದ್ರ ನಿವಾಸಿಯಾದ ವೀರೇಂದ್ರ, ಮನೆ ಸಮೀಪದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಾನೆ. ಆ ದಿನ ಹಣ ದೋಚಿದ್ದ ಗ್ಯಾಂಗ್‌ನಲ್ಲಿ ಈತ ಕೂಡ ಇದ್ದ. ಕೃತ್ಯಕ್ಕೆ ನೆರವಾಗಿದ್ದಕ್ಕೆ ಈತನಿಗೆ ತಂಡದ ಮುಖ್ಯಸ್ಥರು ₹ 3 ಲಕ್ಷ ಕೊಟ್ಟಿದ್ದರು, ಹೇಮಂತ್‌ ಸಹ ಕೃತ್ಯದಲ್ಲಿ ಭಾಗಿಯಾಗಿದ್ದ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಎಸ್‌.ಡಿ.ಶರಣಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಅಕ್ಷಯ್‌ಗೆ ಶೋಧ: ಎಂಟು ಮಂದಿಯ ಗ್ಯಾಂಗ್‌ನಿಂದ ಕೃತ್ಯ ನಡೆದಿರುವುದು ಖಚಿತವಾಗಿದೆ. ಈ ಪೈಕಿ ನರೋನಾ, ಲೋಹಿತ್, ವೀರೇಂದ್ರ, ಹೇಮಂತ್‌ನನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ಅಕ್ಷಯ್ ಸಿಕ್ಕರೆ, ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯಬಹುದು ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ವೀರೇಂದ್ರ ಹಾಗೂ ಅಕ್ಷಯ್ ಆಪ್ತ ಸ್ನೇಹಿತರು. ರಿಯಲ್‌ ಎಸ್ಟೇಟ್ ಉದ್ಯಮಿಗಳಾದ ಶಿವರಾಂ ಮತ್ತು ಸತೀಶ್ (ಹಣ ಕಳೆದುಕೊಂಡವರು) ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದ ಇವರಿಬ್ಬರು, ‘ನಮ್ಮ ಬಳಿ ₹ 1 ಕೋಟಿ ಮೌಲ್ಯದ ಹಳೇ ನೋಟುಗಳಿವೆ. ₹ 80 ಲಕ್ಷ ಮೌಲ್ಯದ ಹೊಸ ನೋಟುಗಳನ್ನು ಕೊಟ್ಟರೆ, ಅಷ್ಟೂ ಹಣವನ್ನು ನಿಮಗೆ ಕೊಡುತ್ತೇವೆ. ಇದರಿಂದ ನಿಮಗೆ ಶೇ 20ರಷ್ಟು ಕಮಿಷನ್ ಸಿಗುತ್ತದೆ’ ಎಂದಿದ್ದರು. ಅದಕ್ಕೆ ಒಪ್ಪಿಕೊಂಡ ಅವರು, ಹಣ ಹೊಂದಿಸಿ ಜೆ.ಪಿ.ನಗರ 22ನೇ ಅಡ್ಡರಸ್ತೆಯ ಮನೆಯಲ್ಲಿ ಇಟ್ಟಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಂತರ ನರೋನಾ ಹಾಗೂ ಲೋಹಿತ್, ಸಹಚರರ ಜತೆ ಕೃತ್ಯಕ್ಕೆ ಇಳಿದಿದ್ದರು. ನ.23ರಂದು ಸಿಸಿಬಿ ಅಧಿಕಾರಿಗಳ ಸೋಗಿನಲ್ಲಿ ಆ ಮನೆ ಮೇಲೆ ದಾಳಿ ನಡೆಸಿದ್ದ ಇವರು, ದಾಖಲೆ ಇಲ್ಲದ ಕಾರಣಕ್ಕೆ ಹಣ ಜಪ್ತಿ ಮಾಡುತ್ತಿರುವುದಾಗಿ
₹ 83 ಲಕ್ಷ ಹೊತ್ತೊಯ್ದಿದ್ದರು.

ಚಿನ್ನವೂ ಲೂಟಿ
‘ಹಣದ ಬ್ಯಾಗ್ ತೆಗೆದುಕೊಂಡು ನರೋನ ಕಾರಿನಲ್ಲಿ ಪರಾರಿಯಾಗಿದ್ದರು. ಆ ನಂತರ ಲೋಹಿತ್ ಹಾಗೂ ಸಹಚರರು, ವಿಚಾರಣೆ ನೆಪದಲ್ಲಿ ದೂರುದಾರರನ್ನು ಅವರದ್ದೇ ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದರು. ಅಲ್ಲಿ ಅವರನ್ನು ಥಳಿಸಿ ಚಿನ್ನದ ಸರ, ಉಂಗುರಗಳನ್ನು ಬಿಚ್ಚಿಕೊಂಡು ಪರಾರಿಯಾಗಿದ್ದರು’ ಎಂಬ ಸಂಗತಿ ಲೋಹಿತ್‌ನ ವಿಚಾರಣೆಯಿಂದ ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.