ADVERTISEMENT

ನವೆಂಬರ್‌ 1ಕ್ಕೆ ಮೆಟ್ರೊ ಮೊದಲ ಹಂತ ಪೂರ್ಣ

ಸುರಂಗ ಮಾರ್ಗ ಸಿ.ಎಂ ಸಿದ್ದರಾಮಯ್ಯರಿಂದ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2016, 19:41 IST
Last Updated 29 ಏಪ್ರಿಲ್ 2016, 19:41 IST
ಮೆಟ್ರೊ ಸುರಂಗ ಮಾರ್ಗ ಸಂಚಾರ ಉದ್ಘಾಟನೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಆರ್‌. ರೋಷನ್ ಬೇಗ್, ಕೇಂದ್ರ ಸಚಿವರಾದ ವೆಂಕಯ್ಯ ನಾಯ್ಡು, ಅನಂತ್ ಕುಮಾರ್, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ, ಬಿಬಿಎಂಪಿ ಮೇಯರ್ ಬಿ.ಎನ್‌. ಮಂಜುನಾಥ್ ರೆಡ್ಡಿ ಅವರು ವಿಧಾನಸೌಧದ ಡಾ.ಬಿ.ಆರ್. ಅಂಬೇಡ್ಕರ್ ನಿಲ್ದಾಣದಿಂದ ಮಾಗಡಿ ರಸ್ತೆಯ ನಿಲ್ದಾಣದವರೆಗೆ ಪ್ರಯಾಣಿಸಿದರು.  -ಪ್ರಜಾವಾಣಿ ಚಿತ್ರ
ಮೆಟ್ರೊ ಸುರಂಗ ಮಾರ್ಗ ಸಂಚಾರ ಉದ್ಘಾಟನೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಆರ್‌. ರೋಷನ್ ಬೇಗ್, ಕೇಂದ್ರ ಸಚಿವರಾದ ವೆಂಕಯ್ಯ ನಾಯ್ಡು, ಅನಂತ್ ಕುಮಾರ್, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ, ಬಿಬಿಎಂಪಿ ಮೇಯರ್ ಬಿ.ಎನ್‌. ಮಂಜುನಾಥ್ ರೆಡ್ಡಿ ಅವರು ವಿಧಾನಸೌಧದ ಡಾ.ಬಿ.ಆರ್. ಅಂಬೇಡ್ಕರ್ ನಿಲ್ದಾಣದಿಂದ ಮಾಗಡಿ ರಸ್ತೆಯ ನಿಲ್ದಾಣದವರೆಗೆ ಪ್ರಯಾಣಿಸಿದರು. -ಪ್ರಜಾವಾಣಿ ಚಿತ್ರ   

ಬೆಂಗಳೂರು: 2016ರ ನವೆಂಬರ್‌ 1ರಂದು ರಾಜ್ಯೋತ್ಸವದ ಕೊಡುಗೆಯಾಗಿ  ನಮ್ಮ ಮೆಟ್ರೊ ಮೊದಲ ಹಂತವನ್ನು ಪೂರ್ಣಗೊಳಿಸಿ ಸಾರ್ವಜನಿಕ ಪ್ರಯಾಣಕ್ಕೆ ಮುಕ್ತಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಕಬ್ಬನ್‌ ಪಾರ್ಕ್‌ನಿಂದ ಸಿಟಿ ರೈಲ್ವೆ ನಿಲ್ದಾಣದವರೆಗಿನ ಸುರಂಗ ಮಾರ್ಗವನ್ನು ಶುಕ್ರವಾರ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

72 ಕಿಲೋಮೀಟರ್‌ಗಳ 2ನೇ ಹಂತದ ನಮ್ಮ ಮೆಟ್ರೊ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, ಅದಕ್ಕೆ ಒಟ್ಟು ₹26,405 ಕೋಟಿ ಖರ್ಚಾಗಲಿದೆ. ರಾಜ್ಯ ಸರ್ಕಾರ ಈಗಾಗಲೇ ₹ 9 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಿದೆ. ಇನ್ನೂ ₹8 ಸಾವಿರ ಕೋಟಿ ಬಿಡುಗಡೆ ಮಾಡಲಾಗುವುದು ಎಂದರು.

ಮೂರನೇ ಹಂತದ ಮೆಟ್ರೊ ನಿರ್ಮಾಣಕ್ಕೆ ಈಗಾಗಲೇ ಸರ್ವೆ ಕಾರ್ಯ ಆರಂಭವಾಗಿದೆ. ರೈಟ್ಸ್‌ ಕಂಪೆನಿ ಸರ್ವೆ ನಡೆಸುತ್ತಿದೆ. 2020ರ ವೇಳೆಗೆ ಮೂರನೇ ಹಂತವೂ ಪೂರ್ಣವಾಗಲಿದೆ ಎಂದರು

ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಮಾತನಾಡಿ, ‘2020ರ ವೇಳೆಗೆ ಮೂರನೇ ಹಂತವನ್ನು ಪೂರ್ಣಗೊಳಿಸುವ ಸಂಬಂಧ ರಾಜ್ಯ ಸರ್ಕಾರ ಯೋಜನೆ ಸಿದ್ಧಪಡಿಸಿದರೆ ಕೇಂದ್ರ ಸರ್ಕಾರ ಸಂಪೂರ್ಣ ನೆರವು ನೀಡಲಿದೆ’ ಎಂದರು.

ಉಪನಗರ ರೈಲ್ವೆ ಯೋಜನೆ ನಿರ್ಮಾಣ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ. ಈ ಸಂಬಂಧ ವೈಯಕ್ತಿಕವಾಗಿ ಆಸಕ್ತಿ ವಹಿಸಿ ರೈಲ್ವೆ ಸಚಿವ ಸುರೇಶ್‌ ಪ್ರಭು ಅವರೊಂದಿಗೆ ಚರ್ಚಿಸಿ ರೈಲ್ವೆ ಯೋಜನೆ ತ್ವರಿತಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಸೌರ ವಿದ್ಯುತ್‌, ನೀರು: ಮೆಟ್ರೊ ನಿಲ್ದಾಣಗಳಲ್ಲಿ ಸೌರ ವಿದ್ಯುತ್‌ ಉತ್ಪಾದನೆ ಮತ್ತು ಮಳೆ ನೀರು ಸಂಗ್ರಹಕ್ಕೆ ಆದ್ಯತೆ ನೀಡಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು. 

ಮೆಟ್ರೊ ರೈಲು ಒಂದರಿಂದಲೇ ನಗರದ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲ.  ಸಾರ್ವಜನಿಕರು ಕಾರು ಪೂಲಿಂಗ್, ಸೈಕ್ಲಿಂಗ್‌ ಮತ್ತು  ನಡಿಗೆಗೆ  ಆದ್ಯತೆ ನೀಡಬೇಕು ಎಂದು ಅವರು ಸಲಹೆ ನೀಡಿದರು.

‘ನವೆಂಬರ್‌ 1ರ ವೇಳೆಗೆ ಮೆಟ್ರೊ ಮೊದಲ ಹಂತ ಪೂರ್ಣಗೊಳಿಸುವ ಭರವಸೆಯನ್ನು ಮೆಟ್ರೊ ಅಧಿಕಾರಿಗಳು ನೀಡಿದ್ದಾರೆ. ಮೊದಲ ಹಂತದ ಒಟ್ಟು ಉದ್ದ 42 ಕಿ.ಮೀ., ಈ ಪೈಕಿ  35 ಕಿ.ಮೀ. ಉದ್ದದ ಮಾರ್ಗದಲ್ಲಿ ರೈಲು ಸಂಚಾರ ಪ್ರಾರಂಭವಾಗಿದೆ’ ಎಂದರು.

ತ್ಯಾಜ್ಯ ವಿಲೇವಾರಿ ಕುರಿತು ಗುರುವಾರ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಲಾಗಿದೆ. ಎಲ್ಲರೂ ಸಹಮತ ವ್ಯಕ್ತಪಡಿಸಿದ್ದಾರೆ. ಕೆಲವು ಪತ್ರಿಕೆಗಳಲ್ಲಿ ವರದಿಯಾದಂತೆ ಯಾವ ಶಾಸಕರೂ ವಿರೋಧ ವ್ಯಕ್ತಪಡಿಸಿಲ್ಲ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌  ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.