ADVERTISEMENT

ನಾಗಲಕ್ಷ್ಮೀ ಕಳುಹಿಸಿದ್ದ ಇ–ಮೇಲ್‌

ನಾಗಲಕ್ಷ್ಮೀ ಕಳುಹಿಸಿದ್ದ ಇ–ಮೇಲ್‌್

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2017, 19:51 IST
Last Updated 2 ಮಾರ್ಚ್ 2017, 19:51 IST
ಬೆಂಗಳೂರು: ರಾಜರಾಜೇಶ್ವರಿನಗರ ಸಮೀಪದ ಐಡಿಯಲ್‌ ಹೋಮ್‌ ಲೇಔಟ್‌ನಲ್ಲಿ ಫೆ.28ರಂದು ಆತ್ಮಹತ್ಯೆ ಮಾಡಿಕೊಂಡ ನಾಗಲಕ್ಷ್ಮಿ (30), ಆತ್ಮಹತ್ಯೆಗೂ ಮುನ್ನ ತಂದೆಗೆ ಕಳುಹಿಸಿದ್ದ ಇ–ಮೇಲ್‌ ಗುರುವಾರ ಪೊಲೀಸರಿಗೆ ಸಿಕ್ಕಿದೆ.
 
‘ನಿಶ್ಚಿತಾರ್ಥ ಬಳಿಕ ಯುವಕ ಮದುವೆಗೆ ನಿರಾಕರಿಸಿದ್ದರಿಂದ ನಾಗಲಕ್ಷ್ಮೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಆತ್ಮಹತ್ಯೆ ಬಗ್ಗೆ ಬರೆದಿರುವ ಇ–ಮೇಲ್‌ ದೊರಕಿದ್ದು, ಅದನ್ನು ಪರಿಶೀಲಿಸುತ್ತಿದ್ದೇವೆ’ ಎಂದು ರಾಜರಾಜೇಶ್ವರಿನಗರ ಪೊಲೀಸರು ತಿಳಿಸಿದರು.
 
‘ನಾನು ಮದುವೆಗೆ ದಿನ ಎಣಿಸುತ್ತ, ಹಲವು ಕನಸುಗಳನ್ನು ಕಂಡಿದ್ದೆ. ಒಬ್ಬನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ಮತ್ತೊಬ್ಬನೊಂದಿಗೆ ಮದುವೆ ಮಾಡಿಕೊಳ್ಳಲು ಮನಸ್ಸಿಲ್ಲ. ಮದುವೆ ರದ್ದಾಗಿದ್ದರಿಂದ ಬದುಕು  ಬೇಸರವಾಗಿದೆ. ಪ್ರತಿದಿನ ನರಳುವುದಕ್ಕಿಂತ ಆತ್ಮಹತ್ಯೆಯೇ ಮೇಲೂ ಅಂತ ಈ ನಿರ್ಧಾರಕ್ಕೆ ಬಂದಿದ್ದೇನೆ’ ಎಂದು ನಾಗಲಕ್ಷ್ಮೀ  ಇ–ಮೇಲ್‌ನಲ್ಲಿ ಬರೆದಿರುವುದಾಗಿ ಗೊತ್ತಾಗಿದೆ. 
 
‘ಮದುವೆ ಮುಂದೂಡಿಕೆಗೆ ಕಾರ್ತಿಕ್‌ ಸೂಕ್ತ ಕಾರಣ ನೀಡುತ್ತಿರಲಿಲ್ಲ. ದಿನಾಂಕ ಗೊತ್ತುಪಡಿಸುವಂತೆ ಕೇಳಿದರೆ ಸಿಡಿಮಿಡಿಕೊಂಡು ಮಾನಸಿಕವಾಗಿ ಹಿಂಸಿಸುತ್ತಿದ್ದ. 2016ರ ಮೇ 22ರಂದು ಮದುವೆ ಗೊತ್ತುಪಡಿಸಲಾಗಿತ್ತು. ಆದರೆ, ಮೇ 14ರಂದು ಮನೆಗೆ ಬಂದಿದ್ದ ಕಾರ್ತಿಕ್ ಅವರ ತಾಯಿ, ‘ಪತಿಯ ಆರೋಗ್ಯ ಸರಿಯಿಲ್ಲ. ಹೀಗಾಗಿ ಮದುವೆ ಮುಂದೂಡುತ್ತಿದ್ದೇವೆ’ ಎಂದು ಹೇಳಿ ಹೋಗಿದ್ದರು. ಅಂದಿನಿಂದಲೇ   ಕಾರ್ತಿಕ್‌ ಹಾಗೂ ಅವರ ಮನೆಯವರನ್ನು ನಮ್ಮೊಂದಿಗೆ ಸರಿಯಾಗಿ ನಡೆದುಕೊಳ್ಳಲೇ ಇಲ್ಲ’ ಎಂದು ಬರೆದಿರುವುದಾಗಿ   ಪೊಲೀಸರು ಹೇಳಿದರು.
 
ಬಂಧನ: ಪ್ರಕರಣ ಸಂಬಂಧ ಕಾರ್ತಿಕ್‌ ತಾಯಿ ಗೀತಾ ಅವರನ್ನು ರಾಜರಾಜೇಶ್ವರಿನಗರ ಪೊಲೀಸರು ಗುರುವಾರ ಬಂಧಿಸಿದ್ದಾರೆ.  ಸದ್ಯ ಕಾರ್ತಿಕ್‌ ತಲೆಮರೆಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.