ADVERTISEMENT

ನಾಗ ವಿರುದ್ಧ ಮತ್ತೊಂದು ಎಫ್‌ಐಆರ್‌

ನೋಟು ಬದಲಾವಣೆಗೆ ಕರೆಸಿ ₹5 ಕೋಟಿ ಕಿತ್ತುಕೊಂಡ ಆರೋಪ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 20:06 IST
Last Updated 23 ಏಪ್ರಿಲ್ 2017, 20:06 IST
ನಾಗರಾಜ್‌
ನಾಗರಾಜ್‌   

ಬೆಂಗಳೂರು: ‘ರೌಡಿಶೀಟರ್ ವಿ.ನಾಗರಾಜ್ ಅಲಿಯಾಸ್ ನಾಗ ಹಾಗೂ ಆತನ ಮಕ್ಕಳು ₹5 ಕೋಟಿ ದೋಚಿದ್ದಾರೆ’ ಎಂದು ಆರೋಪಿಸಿ ಅರುಣ್‌ ಎಂಬುವರು ಶ್ರೀರಾಂಪುರ ಠಾಣೆಗೆ ಭಾನುವಾರ ದೂರು ಕೊಟ್ಟಿದ್ದಾರೆ.

ನಾಗ ಮತ್ತು ಆತನ ಮಕ್ಕಳಾದ ಶಾಸ್ತ್ರಿ, ಗಾಂಧಿ ಸೇರಿ ಐವರ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

‘ನಾಗವಾರದಲ್ಲಿ ಗ್ಯಾರೇಜ್‌ ನಡೆಸುತ್ತಿರುವ ಅರುಣ್‌, ₹5 ಕೋಟಿ ಮೊತ್ತದ ರದ್ದಾದ ನೋಟುಗಳನ್ನು ಬದಲಾವಣೆ ಮಾಡಿಕೊಡುವಂತೆ ನಾಗನಿಗೆ ಹೇಳಿದ್ದರು. ಅದಕ್ಕೆ ಕಮಿಷನ್‌ ಕೇಳಿದ್ದ ಆತ, ಹಣವನ್ನು ಶ್ರೀರಾಂಪುರದ ಮನೆಗೆ ತರುವಂತೆ ಹೇಳಿದ್ದ. ಅದನ್ನು ನಂಬಿ ಅವರು ₹500, ₹1,000 ಮುಖಬೆಲೆಯ ರದ್ದಾದ ನೋಟುಗಳನ್ನು ಜ. 7ರಂದು  ಆತನ ಮನೆಗೆ ತೆಗೆದುಕೊಂಡು ಹೋಗಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ಹಣವನ್ನು ಯಂತ್ರದ ಸಹಾಯದಿಂದ ಎಣಿಕೆ ಮಾಡಿದ ಆತ ಹಾಗೂ ಆತನ ಮಕ್ಕಳು, ಮರು ಹೊಂದಿಸಿ ಚೀಲದಲ್ಲಿ ತುಂಬಿ ಇಟ್ಟಿದ್ದರು. ಅದಾದ ಕೆಲ ಹೊತ್ತಿನ ಬಳಿಕ  ಜಗಳ ತೆಗೆದ ಆತ, ಹಣವನ್ನು ಇಲ್ಲಿಯೇ ಬಿಟ್ಟು ವಾಪಸ್‌ ಹೋಗುವಂತೆ ಬೆದರಿಸಿದ್ದ. ಕಂಗಾಲಾದ ಅರುಣ್‌, ಹಣವನ್ನು ವಾಪಸ್‌ ಕೊಡುವಂತೆ ಹೇಳಿದ್ದರು. ಆ ವೇಳೆ ನಾಗ ಹಾಗೂ ಆತನ ಮಕ್ಕಳು, ಹಲ್ಲೆ ನಡೆಸಿ ವಿಷಯ ಯಾರಿಗೂ ಹೇಳದಂತೆ ಜೀವ ಬೆದರಿಕೆ ಹಾಕಿದ್ದರು’.

‘ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ದ ಅರುಣ್‌, ಕೆಲದಿನಗಳವರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಭಯಗೊಂಡಿದ್ದ ಅವರು ನಾಗನ ವಿರುದ್ಧ ಯಾವುದೇ ದೂರು ದಾಖಲಿಸಿರಲಿಲ್ಲ. ಆದರೆ, ಇತ್ತೀಚೆಗೆ ಪೊಲೀಸರು ನಾಗನ ಮನೆ ಮೇಲೆ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರಿಂದ ಅರುಣ್‌ ಠಾಣೆಗೆ ಬಂದು ದೂರು ಕೊಟ್ಟಿದ್ದಾರೆ’ ’ ಎಂದು ಪೊಲೀಸರು ವಿವರಿಸಿದರು.

ಹಣದ ಮೂಲದ ತನಿಖೆ: ‘₹5 ಕೋಟಿ ಹಣವನ್ನು ಅರುಣ್‌ ಅವರು ಎಲ್ಲಿಂದ ತಂದಿದ್ದರು ಎಂಬ ಬಗ್ಗೆಯೂ ಮಾಹಿತಿ ಕಲೆಹಾಕುತ್ತಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

‘25 ವರ್ಷಗಳ ಹಿಂದೆಯೇ ಗ್ಯಾರೇಜ್‌ ಇಟ್ಟುಕೊಂಡಿರುವ ಅವರು ಪ್ರತಿ ತಿಂಗಳು ಹಣ ಕೂಡಿ ಇಡುತ್ತಿದ್ದರು. ಅದೇ ಹಣವನ್ನು ಆತನ ಬಳಿ ತೆಗೆದುಕೊಂಡು ಹೋಗಿರುವುದಾಗಿ ಹೇಳುತ್ತಿದ್ದಾರೆ. ಜತೆಗೆ ಹಣಕ್ಕೆ ದಾಖಲೆಗಳನ್ನು ನೀಡುವಂತೆಯೂ ಅವರನ್ನು ಕೇಳಿದ್ದೇವೆ’ ಎಂದು ಹೇಳಿದರು.

ಕೆ.ಜಿ. ಚಿನ್ನ ಮಾರಾಟ: ‘ಹಿರಿಯರು ಸಂಗ್ರಹಿಸಿಟ್ಟಿದ್ದ 1 ಕೆ.ಜಿ ಚಿನ್ನಾಭರಣ ಇತ್ತು. ಕಳೆದ ವರ್ಷವಷ್ಟೇ ಅದನ್ನು ಮಾರಾಟ ಮಾಡಿದ್ದೆ. ಅದರಿಂದ ಬಂದ ಹಣವನ್ನು ಸಹ ಕೂಡಿಟ್ಟಿದ್ದೆ. ₹5 ಕೋಟಿಯಲ್ಲಿ ಆ ಹಣವೂ ಸೇರಿದೆ’ ಎಂದು ಅರುಣ್‌ ಪೊಲೀಸರಿಗೆ ಹೇಳಿದ್ದಾರೆ.

ಸ್ವಯಂಪ್ರೇರಿತ ದೂರು ದಾಖಲಿಸಲು ಚಿಂತನೆ

ವಿಡಿಯೊ ಬಿಡುಗಡೆ ಮಾಡುವ ಮೂಲಕ ಪೊಲೀಸ್‌ ಇಲಾಖೆಯ ವಿರುದ್ಧವೇ ಆರೋಪ ಮಾಡಿರುವ ನಾಗನ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲು ಪೊಲೀಸರು ಮುಂದಾಗಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ಅಧಿಕಾರಿಯೊಬ್ಬರು, ‘ಪೊಲೀಸರು ಕಾನೂನು ಪ್ರಕಾರ ಕೆಲಸ ಮಾಡುತ್ತಿದ್ದಾರೆ.

ಹೆಣ್ಣೂರು ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದ ಉದ್ಯಮಿ ಅಪಹರಣ ಪ್ರಕರಣದ ತನಿಖಾಧಿಕಾರಿ ವಿರುದ್ಧವೇ ನಾಗ ಇಲ್ಲಸಲ್ಲದ ಆರೋಪ ಮಾಡಿದ್ದಾನೆ.  ಆತನ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲು ಕಾನೂನುತಜ್ಞರ ಸಲಹೆ ಪಡೆಯುತ್ತಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.