ADVERTISEMENT

ನಾಲ್ಕು ಕಡೆ ತಲೆ ಎತ್ತಲಿವೆ ನಾಯಿದೊಡ್ಡಿಗಳು

ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಕೇಂದ್ರಗಳ ನಿರ್ಮಾಣ ಕಾರ್ಯಕ್ಕೆ ಬಿಬಿಎಂಪಿ ಚಾಲನೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2017, 20:16 IST
Last Updated 20 ಜನವರಿ 2017, 20:16 IST
ನಗರದಲ್ಲಿನ ಬೀದಿ ನಾಯಿಗಳು
ನಗರದಲ್ಲಿನ ಬೀದಿ ನಾಯಿಗಳು   

ಬೆಂಗಳೂರು: ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದರಿಂದ ಎಚ್ಚೆತ್ತುಕೊಂಡಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಗರದ ನಾಲ್ಕು ಕಡೆಗಳಲ್ಲಿ ನಾಯಿಗಳ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಕೇಂದ್ರಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದೆ. ಯಲಹಂಕ ವಲಯದ ಮೇಡಿ ಅಗ್ರಹಾರ, ದಕ್ಷಿಣ ವಲಯದ ಚಾಮರಾಜಪೇಟೆ ಹಾಗೂ ದಾಸರಹಳ್ಳಿ ವಲಯದ ಶೆಟ್ಟಿಹಳ್ಳಿಯಲ್ಲಿ ನಾಯಿದೊಡ್ಡಿಗಳು ತಲೆ ಎತ್ತಲಿವೆ.

ಆರ್‌.ಆರ್‌.ನಗರ ವಲಯದ ಸುಮನಹಳ್ಳಿಯಲ್ಲಿ ನಾಯಿದೊಡ್ಡಿಯ ನಿರ್ಮಾಣಕ್ಕಾಗಿ ಗುರುತಿಸಿದ್ದ ಜಾಗ ರಾಜಕಾಲುವೆ ಮೇಲಿರುವ ಕಾರಣ ಬೇರೆಡೆ ನಿವೇಶನ ಹುಡುಕಲು ತೀರ್ಮಾನಿಸಲಾಗಿದೆ. ಈಜಿಪುರದಲ್ಲಿ ಸ್ಥಾಪಿಸಲಾಗಿರುವ ಕೇಂದ್ರವನ್ನೂ ಸೇರಿಸಿದರೆ ನಗರದ ನಾಯಿದೊಡ್ಡಿಗಳ ಸಂಖ್ಯೆ ಐದಕ್ಕೆ ಏರಲಿದೆ.

‘ಆಡಳಿತಾತ್ಮಕ ಕಾರಣಗಳಿಂದಾಗಿ ಚಿಕಿತ್ಸಾ ಕೇಂದ್ರಗಳ ನಿರ್ಮಾಣ ಕಾಮಗಾರಿ ವಿಳಂಬವಾಗಿತ್ತು. ನಮ್ಮ ಎಂಜಿನಿಯರಿಂಗ್‌ ವಿಭಾಗದಿಂದಲೇ ಕಾಮಗಾರಿ ನಡೆಸಲು ನಿರ್ಧರಿಸಲಾಗಿದೆ. ಈಗಾಗಲೇ ₹ 2.5 ಕೋಟಿ ಮೊತ್ತವನ್ನೂ ಬಿಡುಗಡೆ ಮಾಡಲಾಗಿದೆ’ ಎಂದು ಬಿಬಿಎಂಪಿ ಪಶುಪಾಲನೆ ವಿಭಾಗದ ಜಂಟಿ ನಿರ್ದೇಶಕ ಡಾ. ಆನಂದ್‌ ಹೇಳುತ್ತಾರೆ.

‘ಪ್ರತಿ ಕೇಂದ್ರದಲ್ಲಿ ತಲಾ 150 ನಾಯಿಗಳ ಆರೈಕೆಗೆ ಅಗತ್ಯವಾದ ಸೌಕರ್ಯ ಒದಗಿಸುತ್ತೇವೆ. ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮುನ್ನ ಒಂದು ದಿನ ಹಾಗೂ ಶಸ್ತ್ರಚಿಕಿತ್ಸೆ ಬಳಿಕ ಮೂರು ದಿನ ಪ್ರತಿ ನಾಯಿಯನ್ನು ಆರೈಕೆ ಮಾಡಬೇಕಾದ ಕಾರಣ, ಒಂದೊಂದು ಕೇಂದ್ರದಲ್ಲಿ ನಿತ್ಯ 30 ನಾಯಿಗಳಿಗಷ್ಟೇ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯ’ ಎಂದು ವಿವರಿಸುತ್ತಾರೆ.

‘ಜನನ ನಿಯಂತ್ರಣ ಚಿಕಿತ್ಸೆಗೆ ಅಗತ್ಯ ಮೂಲಸೌಕರ್ಯವನ್ನು ಪಾಲಿಕೆಯೇ ಕಲ್ಪಿಸಿದರೂ ನಾಯಿ ಹಿಡಿದು, ಶಸ್ತ್ರಚಿಕಿತ್ಸೆ ನಡೆಸುವ ಹೊಣೆಯನ್ನು ಟೆಂಡರ್‌ ಕರೆದು ಖಾಸಗಿಯವರಿಗೆ ವಹಿಸಲಾಗುತ್ತದೆ. ನಾಯಿ ಹಿಡಿಯುವವರು, ಶಸ್ತ್ರಚಿಕಿತ್ಸೆ ಮಾಡುವ ವೈದ್ಯರು ಹಾಗೂ ಆರೈಕೆ ಮಾಡುವ ಸಿಬ್ಬಂದಿ ಬಿಬಿಎಂಪಿಯಲ್ಲಿ ಇಲ್ಲ’ ಎಂದು ಮಾಹಿತಿ ನೀಡುತ್ತಾರೆ.

‘ನಗರದಲ್ಲಿ ಇದುವರೆಗೆ ಎಷ್ಟು ನಾಯಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎನ್ನುವ ನಿಖರ ವಿವರ ಗೊತ್ತಿಲ್ಲ. 2011ರ ನಂತರದ ಮಾಹಿತಿಯನ್ನು ಕ್ರೋಡೀಕರಣ ಮಾಡಬೇಕಿದೆ. ಸಂತಾನಶಕ್ತಿಹರಣ ಮಾಡಿದ ಸಂಸ್ಥೆಗಳಿಗೆ ಹೆಚ್ಚಿನ ಬಾಕಿ ಉಳಿಸಿಕೊಂಡಿಲ್ಲ. ಕ್ಯೂಪಾ ಸಂಸ್ಥೆಗೆ ₹ 18 ಲಕ್ಷ ನೀಡಬೇಕಿದೆ’ ಎಂದು  ಹೇಳುತ್ತಾರೆ.

ಹೊಸ ಮಾರ್ಗಸೂಚಿ
ಕರ್ನಾಟಕ ಪೌರನಿಗಮಗಳ ಕಾಯ್ದೆಯ (ಕೆಎಂಸಿ) ಸೆಕ್ಷನ್‌ 344ರ ಪ್ರಕಾರ, ಯಾವುದೇ ವ್ಯಕ್ತಿ, ಪಶು ಹಾಗೂ ಪಕ್ಷಿಗಳನ್ನು ಸಾಕಲು ಬಿಬಿಎಂಪಿ ಆಯುಕ್ತರು ಇಲ್ಲವೆ ಅವರು ಸೂಚಿಸಿದ ಅಧಿಕಾರಿಯಿಂದ ಅನುಮತಿ ಪಡೆಯುವುದು ಕಡ್ಡಾಯ. ಕಾಯ್ದೆಯ ಈ ಬಲವನ್ನೇ ಬಳಸಿಕೊಂಡ ಬಿಬಿಎಂಪಿ ನಾಯಿ ಸಾಕಲು ಹೊಸ ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ. ಪ್ರಸ್ತಾವವನ್ನು ರಾಜ್ಯ ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿದ್ದು, ಒಪ್ಪಿಗೆಗಾಗಿ ಕಾಯುತ್ತಿದೆ.

ಪ್ರಸ್ತಾವಕ್ಕೆ ಒಪ್ಪಿಗೆ ಸಿಕ್ಕರೆ ಪ್ರತಿ ಫ್ಲ್ಯಾಟ್‌ ಮಾಲೀಕರು ಒಂದು ನಾಯಿಯನ್ನು ಮಾತ್ರ ಸಾಕಲು ಸಾಧ್ಯ. ಆ ನಾಯಿಗೆ ಕಾಲರ್‌, ಬ್ಯಾಡ್ಜ್‌ ತೊಡಿಸಿರಬೇಕು ಹಾಗೂ ಕಾಲರ್‌ನಲ್ಲಿ ಮೈಕ್ರೊಚಿಪ್‌ ಅಳವಡಿಸಿರಬೇಕು. ಗ್ರೇಟ್‌ ಡೇನ್‌, ಇಂಗ್ಲಿಷ್‌ ಮ್ಯಾಸ್ಟಿಫ್ಸ್‌, ಗೋಲ್ಡನ್‌ ರಿಟ್ರೀವರ್‌, ರಾಟ್‌ವೈಲರ್ಸ್‌, ಸೇಂಟ್‌ ಬರ್ನಾರ್ಡ್‌ ಮತ್ತು ಜರ್ಮನ್‌ ಶೆಫರ್ಡ್ಸ್‌ನಂತಹ ದೈತ್ಯಗಾತ್ರದ ನಾಯಿಗಳನ್ನು ಸಾಕುವಂತಿಲ್ಲ. ಮಧ್ಯಮಗಾತ್ರ ಹೊಂದಿದ ತಳಿಗಳ ನಾಯಿಗಳನ್ನಷ್ಟೇ ಸಾಕಲು ಹೊಸ ಮಾರ್ಗಸೂಚಿ ಅವಕಾಶ ಕಲ್ಪಿಸುತ್ತದೆ.

ನಾಯಿ ಸಾಕಲು ಕಡ್ಡಾಯವಾಗಿ ಲೈಸನ್ಸ್‌ ಪಡೆದಿರಬೇಕು, ಸಾಕು ನಾಯಿ ಒಂದುವೇಳೆ ಮರಿಗಳನ್ನು ಹಾಕಿದರೆ ಅವುಗಳಿಗೂ ಪ್ರತ್ಯೇಕವಾಗಿ ಲೈಸನ್ಸ್‌ ಪಡೆಯಬೇಕು.ಲೈಸನ್ಸ್‌ ಪಡೆಯದೇ ಇದ್ದರೆ ₹1,000 ದಂಡ ತೆರಬೇಕು. ಅಲ್ಲದೆ, ಲೈಸನ್ಸ್‌ ಪಡೆಯುವವರೆಗೂ ಪ್ರತಿದಿನ ₹ 200ರಂತೆ ದಂಡ ಕಟ್ಟಬೇಕು. ‘ಅಪಾರ್ಟ್‌ಮೆಂಟ್‌ ಹೊರತಾದ ಸ್ವಂತ ಮನೆಯಾದರೆ ಮೂರು ನಾಯಿಗಳನ್ನು ಹೊಂದಬಹುದು’ ಎಂದು ಮಾರ್ಗಸೂಚಿ ಹೇಳುತ್ತದೆ.

‘ನಗರದಲ್ಲಿ ನಾಯಿ ಮರಿಗಳನ್ನು ಮಾರಾಟ ಮಾಡುವ 15ಕ್ಕೂ ಅಧಿಕ ಅನಧಿಕೃತ ಕೇಂದ್ರಗಳಿವೆ. ಮೊದಲು ಅವುಗಳ ಮೇಲೆ ನಿರ್ಬಂಧ ಹೇರದೆ ನಮ್ಮ ಮೇಲೆ  ಗದಾಪ್ರಹಾರ ನಡೆಸಲು ಬಿಬಿಎಂಪಿ ಹೊರಟಿದೆ’ ಎಂದು ಶ್ವಾನಪ್ರಿಯರು ಹೊಸ ಮಾರ್ಗಸೂಚಿಗೆ ಆಕ್ರೋಶ ವ್ಯಕ್ತಪಡಿಸುತ್ತಾರೆ. ಆದರೆ, ಪ್ರಾಣಿದಯಾ ಸಂಘಗಳು ಬಿಬಿಎಂಪಿಯ ಹೊಸ ಪ್ರಸ್ತಾವಕ್ಕೆ ಬೆಂಬಲ ಸೂಚಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT