ADVERTISEMENT

ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ನೇಪಾಳ ಮೂಲದ ದಂಪತಿ ಕೊಲೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2014, 19:41 IST
Last Updated 17 ಸೆಪ್ಟೆಂಬರ್ 2014, 19:41 IST

ಬೆಂಗಳೂರು: ಎಚ್‌ಎಸ್‌ಆರ್‌ ಲೇಔಟ್‌-ನಲ್ಲಿ ನೇಪಾಳ ಮೂಲದ ದಂಪತಿ-ಯನ್ನು ಕೊಲೆ ಮಾಡಿದ್ದ ನಾಲ್ಕು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ನಗರದ 14ನೇ ತ್ವರಿತ ನ್ಯಾಯಾಲಯ ಬುಧವಾರ ಆದೇಶಿಸಿದೆ.

ಡಾರ್ಜಿಲಿಂಗ್ ಮೂಲದ ಸಂತೋಷ್ ಚೆಟ್ರಿ (30), ಪ್ರದೀಪ್ ಚೆಟ್ರಿ (21), ಪ್ರೀತಂ ತಮಂಗ್ (24) ಹಾಗೂ ಅಸ್ಸಾಂನ ವಿವೇಕ್ ಅಲಿ-ಯಾಸ್ ವಿಕಾಸ್ (22) ಶಿಕ್ಷೆಗೆ ಒಳಗಾದ-ವರು. ಇವರು, 2010ರ ಫೆ.8ರಂದು ಶ್ರೀನಿವಾಗಿಲು ರಸ್ತೆಯ ಅಮ್ರಿತ್ ರಾಯ್ (34) ಹಾಗೂ ಅವರ ಪತ್ನಿ ಜಾನಕಿ (28) ಎಂಬುವ-ರನ್ನು ಕೊಲೆ ಮಾಡಿದ್ದರು.

ಆರೋಪ ಸಾಬೀತಾದ ಕಾರಣದಿಂದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ₨ 8 ಸಾವಿರ ದಂಡ ವಿಧಿಸಿ ನ್ಯಾಯಾಧೀಶ ಅನಂತ ಶಿವಾಜಿ ನೆಲವಾಡೆ ಆದೇಶ ಹೊರಡಿಸಿದರು.

ಅಮ್ರಿತ್ ಹಾಗೂ ಅಪರಾಧಿ ಸಂತೋಷ್ ಮೊದಲು ಒಂದೇ ಕಂಪೆನಿ-ಯಲ್ಲಿ ಉದ್ಯೋಗಿಗಳಾಗಿದ್ದರು. ನಂತರ ಅಲ್ಲಿ ಕೆಲಸ ಬಿಟ್ಟ ಅಮ್ರಿತ್, ಬೇರೆ ಕಂಪೆನಿ ಸೇರಿ ಹೆಚ್ಚು ವೇತನ ಪಡೆಯುತ್ತಿ-ದ್ದರು. ಈ ಬೆಳವಣಿಗೆಯನ್ನು ಸಹಿಸದ ಸಂತೋಷ್, ಅವರನ್ನು ಕೊಲೆ ಮಾಡಿ ಹಣ–ಚಿನ್ನಾಭರಣ ದೋಚಲು ಸಂಚು ರೂಪಿಸಿದ್ದ. ಕೃತ್ಯಕ್ಕೆ ಸ್ನೇಹಿತರ ನೆರವು ಸಿಕ್ಕಿತ್ತು.

2010ರ ಫೆ.8ರಂದು ನಾಲ್ಕೂ ಮಂದಿ ಅಮ್ರಿತ್‌ ಮನೆಗೆ ಊಟಕ್ಕೆ ತೆರಳಿದ್ದರು. ಊಟ ಮುಗಿದ ಬಳಿಕ ತಮ್ಮ ಮನೆಗಳಿಗೆ ಡ್ರಾಪ್‌ ನೀಡುವಂತೆ ಕೋರಿದ್ದರು. ಅದರಂತೆ ಅಮ್ರಿತ್, ತಮ್ಮ ಕಾರಿನಲ್ಲಿ ಆರೋಪಿಗಳನ್ನು ಕರೆದು-ಕೊಂಡು ಹೊರಟರು. ಆದರೆ, ಅಗರ ಸಮೀಪ ಹೋಗುವಾಗ ಕತ್ತು ಸೀಳಿ ಅವರನ್ನು ಭೀಕರವಾಗಿ ಕೊಲೆ ಮಾಡಿದ್ದರು. ನಂತರ ಶವವನ್ನು ಅಗರ-ಜಕ್ಕಸಂದ್ರ ರಸ್ತೆಯ ಸರ್ಜಾಪುರ ಕೆರೆಗೆ ಎಸೆದು ಪರಾರಿಯಾಗಿದ್ದರು.

ಅಲ್ಲಿಂದ ಹಣ ದೋಚಲು ಅಮ್ರಿತ್‌ ಮನೆಗೆ ಹಿಂದಿರುಗಿದ್ದ ಅವರು, ‘ಸಂಚಾರ ಪೊಲೀಸರು ಕಾರನ್ನು ಹಿಡಿದಿ-ದ್ದಾರೆ. ಅಮ್ರಿತ್‌ ತನ್ನ ಚಾಲನಾ ಪರವಾನಗಿಯನ್ನು (ಡಿಎಲ್‌) ಮನೆಯಲ್ಲೇ ಬಿಟ್ಟಿದ್ದಾನೆ. ಅದನ್ನು ತೆಗೆದುಕೊಂಡು ಹೋಗಲು ಬಂದಿದ್ದೇವೆ’ ಎಂದು ಜಾನಕಿ ಅವರಿಗೆ ಹೇಳಿದ್ದರು.

ಅವರ ಮಾತನ್ನು ನಂಬಿದ ಜಾನಕಿ, ಅಲ್ಮೆರಾದಲ್ಲಿ ಡಿಎಲ್ ಹುಡುಕುತ್ತಿ-ದ್ದರು. ಆಗ ಹಿಂದಿನಿಂದ ಹೋಗಿ ಚಾಕು-ವಿ-ನಿಂದ 12 ಬಾರಿ ಇರಿದು ಕೊಲೆ ಮಾಡಿದ್ದ ಆರೋಪಿಗಳು, ಅಲ್ಮೆರಾ-ದಲ್ಲಿದ್ದ ಹಣ ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.

ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಎಚ್‌ಎಸ್‌ಆರ್‌ ಲೇಔಟ್ ಪೊಲೀಸರು, ಸ್ಥಳೀಯರಿಂದ ಮಾಹಿತಿ ಪಡೆದು 2010ರ ಫೆ.25ರಂದು ಆರೋಪಿಗಳನ್ನು ಬಂಧಿಸಿದ್ದರು. ಅವರ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.