ADVERTISEMENT

ನಿಮಗೇಕೆ ಹೆಚ್ಚುವರಿ ವೆಚ್ಚದ ಉಸಾಬರಿ

ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಸಂಯಮ ಕಳೆದುಕೊಂಡ ಸಚಿವ ಜಾರ್ಜ್‌

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2016, 19:32 IST
Last Updated 20 ಅಕ್ಟೋಬರ್ 2016, 19:32 IST
ಕೆ.ಜೆ. ಜಾರ್ಜ್‌
ಕೆ.ಜೆ. ಜಾರ್ಜ್‌   

ಬೆಂಗಳೂರು: ‘ಉದ್ದೇಶಿತ ಉಕ್ಕಿನ ಸೇತುವೆಗೆ ₹400 ಕೋಟಿ ವೆಚ್ಚ ಹೆಚ್ಚಿರುವ ಬಗ್ಗೆ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯುತ್ತೇವೊ, ಬಿಡುತ್ತೇವೊ ಅದರ ಉಸಾಬರಿ ನಿಮಗೇಕೆ... ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಏಕೆ ಮಾಡುತ್ತೀರಿ?’

ಬಸವೇಶ್ವರ ವೃತ್ತದಿಂದ ಹೆಬ್ಬಾಳದ  ಎಸ್ಟೀಮ್‌ ಮಾಲ್‌ವರೆಗೆ ನಿರ್ಮಿಸಲು ಉದ್ದೇಶಿಸಿರುವ ಉಕ್ಕಿನ ಸೇತುವೆ ಕುರಿತು ಮಾಧ್ಯಮ ಪ್ರತಿನಿಧಿಗಳಿಂದ ಎದುರಾದ ಪ್ರಶ್ನೆಗಳಿಗೆ  ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌  ಅವರು ಸಂಯಮ ಕಳೆದುಕೊಂಡು ಉತ್ತರಿಸಿದ ಪರಿ ಇದು.

ಕೆಪಿಸಿಸಿ ಕಚೇರಿಗೆ ಗುರುವಾರ ಭೇಟಿ ನೀಡಿ ಮನವಿಗಳನ್ನು ಸ್ವೀಕರಿಸಿದ ಅವರು, ನಂತರ ಮಾಧ್ಯಮ ಪ್ರತಿನಿಧಿಗಳ ಮುಂದೆ ಬಂದರು. ಆ ಸಂದರ್ಭದಲ್ಲಿ ನಡೆದ ಸಂಭಾಷಣೆ ವಿವರ ಹೀಗಿದೆ..

*ಮಾಧ್ಯಮ: ಉದ್ದೇಶಿತ 6.7 ಕಿ.ಮೀ. ಉದ್ದದ  ಉಕ್ಕಿನ ಸೇತುವೆಯನ್ನು ಎಸ್ಟೀಮ್‌ ಮಾಲ್‌ನಿಂದ ಕೊಡಿಗೆಹಳ್ಳಿ ಮೇಲ್ಸೇತುವೆವರೆಗೆ (1.6 ಕಿ.ಮೀ ಉದ್ದ) ವಿಸ್ತರಿಸಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆಯೆ?
ಜಾರ್ಜ್‌– ಅಗತ್ಯ ಬಿದ್ದರೆ ಅನುಮೋದನೆ ಪಡೆಯುತ್ತೇವೆ.

*ಮಾಧ್ಯಮ: ನೀವು ಹಿಂದೆ ಕ್ಯಾಬಿನೆಟ್‌ ಅನುಮೋದನೆ ಪಡೆಯಲಾಗಿದೆ ಎಂದಿದ್ದಿರಿ. ಆದರೆ, ಸಿ.ಎಂ ಪಡೆದಿಲ್ಲ ಎಂದಿದ್ದಾರೆ. ಏಕೆ ಈ ಗೊಂದಲ?
ಜಾರ್ಜ್‌– ನೀವು ಮೊಸರಲ್ಲಿ ಕಲ್ಲು ಹುಡುಕುವುದು ಏಕೆ?  ಸಣ್ಣ ವಿಷಯವನ್ನು ವೈಭವೀಕರಿಸುತ್ತಿದ್ದೀರಿ. ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಪಾರದರ್ಶಕತೆ ಕಾಯ್ದೆ (ಕೆಟಿಟಿಪಿ) ಪ್ರಕಾರ ಯೋಜನಾ ವೆಚ್ಚದಲ್ಲಿ ಶೇ 30ರಷ್ಟು ಹೆಚ್ಚಳ ಮಾಡಲು ಅವಕಾಶ ಇದೆ. ಯೋಜನೆಗೆ ಅಗತ್ಯವಿರುವಷ್ಟು ಹಣ ಒದಗಿಸಲು ಸಿದ್ಧ. ಅನುಮೋದನೆ ಪಡೆಯುವುದೂ ಗೊತ್ತು.

*ಮಾಧ್ಯಮ: ಉಕ್ಕಿನ ಸೇತುವೆಯನ್ನು ಎಸ್ಟೀಮ್‌ ಮಾಲ್‌ನಿಂದ 1.6 ಕಿ.ಮೀ. ದೂರ ವಿಸ್ತರಿಸಲು ನಿರ್ಧರಿಸಿದ ನಂತರ ಯೋಜನಾ ವೆಚ್ಚದಲ್ಲಿ ಹೆಚ್ಚಳ ಆಗಿದ್ದೆಷ್ಟು?
ಜಾರ್ಜ್‌– ಈ ವಿಷಯದಲ್ಲಿ ನಿಮಗೆ ಏಕೆ ಆಸಕ್ತಿ?

*ಮಾಧ್ಯಮ: ಸಾರ್ವಜನಿಕ ತೆರಿಗೆ ಹಣ ಬಳಸುತ್ತಿದ್ದೀರಿ. ಅದನ್ನು ಪ್ರಶ್ನಿಸುವುದು ತಪ್ಪಾ?
ಜಾರ್ಜ್‌– ತಪ್ಪಲ್ಲ. ಸಲಹೆಗಳಿಗೆ ಮುಕ್ತ ಅವಕಾಶ ಇದೆ. ಸದ್ಯ ₹1,791 ಕೋಟಿ ಯೋಜನಾ ವೆಚ್ಚ ಇದೆ. ಆದರೆ, ಯೋಜನೆ ವಿಸ್ತರಣೆ ನಂತರ ಆಗುವ ವೆಚ್ಚದ ಬಗ್ಗೆ ಪೂರ್ಣ ಯೋಜನಾ ವರದಿ (ಡಿಪಿಆರ್‌) ನೀಡುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ. ವರದಿ ಬಂದ ನಂತರ ವಿವರ ಸಿಗಲಿದೆ.

*ಮಾಧ್ಯಮ: ಟೋಲ್‌ ದರ ನಿಗದಿ ಮಾಡುವ ಉದ್ದೇಶ ಸರ್ಕಾರಕ್ಕೆ ಇದೆಯೆ?
ಜಾರ್ಜ್‌– ಹೌದು. ಆದರೆ, ಸೇತುವೆ ಕೆಳಗಿನ ರಸ್ತೆ ಟೋಲ್‌ ಮುಕ್ತವಾಗಿ ಇರಲಿದೆ.

*ಮಾಧ್ಯಮ: ಟೋಲ್‌ ದರ ಎಷ್ಟು ನಿಗದಿಯಾಗಬಹುದು?
ಜಾರ್ಜ್‌– ಈ ಪ್ರಶ್ನೆ ಈಗಲೇ ಅಗತ್ಯ ಇಲ್ಲ. ಅಷ್ಟಕ್ಕೂ ನೀವು ಉಕ್ಕಿನ ಸೇತುವೆ ಬಳಸುವುದಿಲ್ಲ ಎಂದ ಮೇಲೆ ನಿಮಗೆ ಏಕೆ ಆ ಬಗ್ಗೆ (ಟೋಲ್‌) ಚಿಂತೆ?

*ಮಾಧ್ಯಮ: ಉಕ್ಕಿನ ಸೇತುವೆ ಬದಲು ಪರ್ಯಾಯ ವ್ಯವಸ್ಥೆಗಳ ಕುರಿತು ಸರ್ಕಾರ ಮೊದಲು  ಆಲೋಚಿಸಿತ್ತೆ?
ಜಾರ್ಜ್‌– ಕಿರಿದಾದ ರಸ್ತೆಯಲ್ಲಿ ಪರ್ಯಾಯ ವ್ಯವಸ್ಥೆಗಳನ್ನು ಮಾಡಲು ಸಾಧ್ಯವಿಲ್ಲ. ಕಾವೇರಿ ಚಿತ್ರಮಂದಿರ ಬಳಿ ಮ್ಯಾಜಿಕ್‌ ಬಾಕ್ಸ್‌ ನಿರ್ಮಿಸಿ ಏನು ತೊಂದರೆಯಾಗಿದೆ ಎಂಬುದನ್ನು ನೋಡಿದ್ದೇವೆ. ಬೆಂಗಳೂರು ಅಂತರರಾಷ್ಟ್ರೀಯ ನಗರ. ಇಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಯೋಜನೆಗಳು ಅಗತ್ಯ.

*ಮಾಧ್ಯಮ: ಕೊರಿಯನ್‌  ಕಂಪೆನಿಯೊಂದು ಟನಲ್ ರಸ್ತೆ ನಿರ್ಮಿಸಬಹುದು ಎಂದು ಹೇಳಿರುವುದಾಗಿ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ ಹೇಳಿದ್ದಾರಲ್ಲ?
ಜಾರ್ಜ್‌– ಟನಲ್‌ ರಸ್ತೆ ನಿರ್ಮಾಣಕ್ಕೆ ಹೆಚ್ಚು ಖರ್ಚಾಗುತ್ತದೆ. ಉಕ್ಕಿನ ಸೇತುವೆಯ ಮೂರು ಪಟ್ಟು ಹಣ ಅದಕ್ಕೆ ಬೇಕು. ಯೋಜನೆಯಿಂದ ಸರ್ಕಾರಕ್ಕೆ ಒಳ್ಳೆ ಹೆಸರು ಬರುತ್ತದೆ ಎಂಬ ಕಾರಣಕ್ಕೆ ಕುಮಾರಸ್ವಾಮಿ ವಿರೋಧಿಸುತ್ತಿದ್ದಾರೆ.

*ಮಾಧ್ಯಮ: ಸಾರ್ವಜನಿಕರ ವಿರೋಧದ ಮಧ್ಯೆಯೂ ಯೋಜನೆ ಜಾರಿಮಾಡಲು ಸರ್ಕಾರ ಇಷ್ಟು ಉತ್ಸುಕ ವಾಗಿರುವುದೇಕೆ?
ಜಾರ್ಜ್‌– ಜನರ ವಿರೋಧವಿದೆ  ಎಂದು ಏಕೆ ಹೇಳುತ್ತೀರಿ. ಬೆಂಗಳೂರಿನಲ್ಲಿ 1.20 ಕೋಟಿ ಜನರಿದ್ದಾರೆ. ಸುಮಾರು 2,500 ಜನರು ಮಾತ್ರ ಅಭಿಪ್ರಾಯ ತಿಳಿಸಿದ್ದಾರೆ. ಇದು ಯೋಜನೆಗೆ ಬೆಂಗಳೂರಿನ ಜನರ ವಿರೋಧ ಇದೆ ಎಂಬುದರ ಸೂಚಕವೆ?

ಗಾಲ್ಫ್ ಕ್ಲಬ್‌ ನ ಸ್ವಲ್ಪ ಭಾಗ ಸ್ವಾಧೀನ
ಯೋಜನೆಗಾಗಿ ಗಾಲ್ಫ್‌ಕ್ಲಬ್‌ನ ಸ್ವಲ್ಪ ಜಮೀನು ಸ್ವಾಧೀನಪಡಿಸಿಕೊಳ್ಳುವುದು ಅಗತ್ಯ ಇದೆ. ಸೇತುವೆ ನಿರ್ಮಾಣಕ್ಕಾಗಿ ನೂರಾರು ಮರ ಗಳನ್ನು ಕಡಿಯಬೇಕಿರುವುದು ಅನಿವಾರ್ಯ. ಪರ್ಯಾಯವಾಗಿ ಬೇರೆ ಕಡೆ ಗಿಡ ನೆಡಲಾಗುವುದು ಎಂದು ಸಚಿವರು ತಿಳಿಸಿದರು.

*
ಬಿಜೆಪಿ ಸರ್ಕಾರದ ಅವಧಿಯಲ್ಲೂ ಸೇತುವೆಗಳ ನಿರ್ಮಾಣ ಆಗಿವೆ. ಆಗ ವಿರೋಧಿಸದೇ ಇದ್ದ ಸುರೇಶ್‌ಕುಮಾರ್‌ ಈಗ ಏಕೆ ವಿರೋಧಿಸುತ್ತಿದ್ದಾರೆ?
–ಕೆ.ಜೆ. ಜಾರ್ಜ್‌,
ಬೆಂಗಳೂರು ಅಭಿವೃದ್ಧಿ ಸಚಿವ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.