ADVERTISEMENT

ನಿಮಿಷದ ಗಾಳಿಗೆ ಎರಡು ಜೀವ ಬಲಿ

ಮರಗಳು ಉರುಳಿ ಮಲ್ಲೇಶ್ವರ, ವಿವೇಕನಗರದಲ್ಲಿ ದುರ್ಘಟನೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2016, 22:30 IST
Last Updated 27 ಜೂನ್ 2016, 22:30 IST
ವಿವೇಕನಗರದಲ್ಲಿ ಬಾಲಕ ಜೀವನ್ (ಒಳಚಿತ್ರ) ಆಟವಾಡುತ್ತಿದ್ದ ಮನೆಯ ಕಾಂಪೌಂಡ್ ಮೇಲೆ ಮರ ಬಿದ್ದಿರುವುದು.
ವಿವೇಕನಗರದಲ್ಲಿ ಬಾಲಕ ಜೀವನ್ (ಒಳಚಿತ್ರ) ಆಟವಾಡುತ್ತಿದ್ದ ಮನೆಯ ಕಾಂಪೌಂಡ್ ಮೇಲೆ ಮರ ಬಿದ್ದಿರುವುದು.   

ಬೆಂಗಳೂರು: ನಗರದಲ್ಲಿ ಸೋಮವಾರ ಮಧ್ಯಾಹ್ನ ಗಂಟೆಗೆ 59 ಕಿ.ಮೀ ವೇಗದಲ್ಲಿ ಬೀಸಿದ ಗಾಳಿಯಿಂದ ವಿವೇಕನಗರ ಹಾಗೂ ಮಲ್ಲೇಶ್ವರದಲ್ಲಿ ಮರಗಳು ಉರುಳಿ ಬಿದ್ದು ಮೂರೂವರೆ ವರ್ಷದ ಬಾಲಕ ಸೇರಿ ಇಬ್ಬರು ಮೃತಪಟ್ಟರು.

ವಿವೇಕನಗರ 7ನೇ ಅಡ್ಡರಸ್ತೆಯಲ್ಲಿ ಮಧ್ಯಾಹ್ನ 1.30ರ ಸುಮಾರಿಗೆ ಮನೆ ಮುಂದೆ ಆಟವಾಡುತ್ತಿದ್ದ ಜೀವನ್‌ ಎಂಬ ಬಾಲಕನ ತಲೆ ಮೇಲೆ ಮರದ ಕೊಂಬೆ ಬಿದ್ದಿತು. ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದರಿಂದ ಆತ, ಚಿಕಿತ್ಸೆಗೆ ಸ್ಪಂದಿಸದೆ ಮಧ್ಯಾಹ್ನ  3.30ಕ್ಕೆ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ.

ಕುಮಾರ್ ಮತ್ತು ರಂಗಮ್ಮ ದಂಪತಿಯ ಮಗನಾದ ಜೀವನ್‌, ಮನೆ ಸಮೀಪದ ನರ್ಸರಿಯಲ್ಲಿ ಎಲ್‌ಕೆಜಿ ಓದುತ್ತಿದ್ದ. ಮಧ್ಯಾಹ್ನ 12.30ಕ್ಕೆ ನರ್ಸರಿಯಿಂದ ಮನೆಗೆ ಮರಳಿದ ಆತ, ಸ್ಥಳೀಯ ಮಕ್ಕಳ ಜತೆ ಕಾಂಪೌಂಡ್‌ನಲ್ಲಿ ಆಟವಾಡುತ್ತಿದ್ದ. ಅವರ ಮನೆಯಿಂದ ಸುಮಾರು 25 ಮೀಟರ್ ದೂರದಲ್ಲಿರುವ ಆ ಮರವು, ಬುಡಮೇಲಾಗಿ ಉರುಳಿತು. ಆಗ ಕೊಂಬೆಗಳು ಮನೆಯ ಕಾಂಪೌಂಡ್ ಮೇಲೆ ಬಿದ್ದವು.

ಒಂದು ಕೊಂಬೆಯು ತಲೆಗೆ ಬಡಿದಿದ್ದರಿಂದ ಜೀವನ್ ಗಂಭೀರ ಗಾಯಗೊಂಡ. ಕೂಡಲೇ ಪೋಷಕರು ಸ್ಥಳೀಯರ ನೆರವಿನಿಂದ ಮಗನನ್ನು ನಿಮ್ಹಾನ್ಸ್‌ಗೆ ಕರೆದೊಯ್ದರು. ಆದರೆ, ಆತ ಬದುಕುಳಿಯಲಿಲ್ಲ.

‘ಅದು ಸುಮಾರು 30 ವರ್ಷದ ಹಳೆಯ ಮರ. ಅದನ್ನು ತೆರವುಗೊಳಿಸುವಂತೆ ಕಳೆದ ಮಳೆಗಾಲದಲ್ಲೇ ಬಿಬಿಎಂಪಿಗೆ ಸ್ಥಳೀಯ ನಿವಾಸಿಗಳು ಪತ್ರ ಬರೆದಿದ್ದೆವು. ಆದರೆ, ಪಾಲಿಕೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಲಿಲ್ಲ. ಅವರ ನಿರ್ಲಕ್ಷ್ಯಕ್ಕೆ ಈಗ ಮಗು ಬಲಿಯಾಗಬೇಕಾಯಿತು’ ಎಂದು ವಿವೇಕನಗರ ನಿವಾಸಿ ಗಂಗರಾಜು ಆಕ್ರೋಶ ವ್ಯಕ್ತಪಡಿಸಿದರು.

ಕುಮಾರ್ ಅವರು ಕುಡಿಯುವ ನೀರಿನ ಕ್ಯಾನ್‌ಗಳನ್ನು ಮಾರಾಟ ಮಾಡುತ್ತಾರೆ. ಜತೆಗೆ ನಾಲ್ಕು ಹಸುಗಳನ್ನು ಇಟ್ಟುಕೊಂಡಿರುವ ಅವರು ಹಾಲು ವ್ಯಾಪಾರ ಸಹ ಮಾಡುತ್ತಾರೆ. ದಂಪತಿಗೆ ಆರು ವರ್ಷದ ಅನುರಾಧ ಎಂಬ ಮಗಳಿದ್ದು, ಜೀವನ್ ದ್ವಿತೀಯ ಪುತ್ರನಾಗಿದ್ದ ಎಂದು ವಿವೇಕನಗರ ಪೊಲೀಸರು ತಿಳಿಸಿದರು.

ಇನ್ನೊಂದು ಸಾವು: ಇದೇ ಸಮಯದಲ್ಲಿ ಮಲ್ಲೇಶ್ವರ 18ನೇ ರಸ್ತೆಯಲ್ಲೊಂದು ಬೃಹತ್ ಮರ ಧರೆಗುರುಳಿತು. ಬೈಕ್‌ನಲ್ಲಿ ಸಾಗುತ್ತಿದ್ದ ಫೈರೋಜ್ ಪಾಷಾ (50) ಎಂಬುವರ ತಲೆ ಮೇಲೆಯೇ ಕೊಂಬೆ ಬಿದ್ದಿದ್ದರಿಂದ ಅವರು ಸ್ಥಳದಲ್ಲೇ ಮೃತಪಟ್ಟರು. ರಸ್ತೆ ಬದಿ ನಿಂತಿದ್ದ ಕಾರು ಸಹ ಜಖಂಗೊಂಡು, ಅದರಲ್ಲಿದ್ದ ಯಲಹಂಕದ ಸ್ವಾಮಿ ಎಂಬುವರೂ ಗಂಭೀರವಾಗಿ ಗಾಯಗೊಂಡರು. ಸದ್ಯ ಅವರು ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಾಗವಾರ ನಿವಾಸಿಯಾದ ಫೈರೋಜ್, ಶಾಲೆಗಳಿಗೆ ಬಿಸಿಯೂಟ ಪೂರೈಸುವ ಗುತ್ತಿಗೆದಾರರಾಗಿದ್ದರು. ಬಾಕಿ ಇದ್ದ ಬಿಲ್ ಸಂಗ್ರಹಿಸಿಕೊಳ್ಳಲು ಅವರು ಮಲ್ಲೇಶ್ವರದ ಬಿಇಒ ಕಚೇರಿಗೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿತು. ಕೊಂಬೆ ಬಿದ್ದಾಗ ಹೆಲ್ಮೆಟ್ ಚೂರು–ಚೂರಾಗಿ ತಲೆಗೆ ತೀವ್ರ ಪೆಟ್ಟಾಯಿತು. ಸ್ಥಳೀಯರು ನೆರವಿಗೆ ಧಾವಿಸಿದರಾದರೂ, ಅಷ್ಟರಲ್ಲಾಗಲೇ ಫೈರೋಜ್ ಅವರ ಪ್ರಾಣ ಹೋಗಿತ್ತು.

‘ಮರ ಬೀಳುವುದಕ್ಕೂ ಒಂದು ನಿಮಿಷದ ಮುಂಚೆ ಆ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಶಾಲಾ ವಾಹನ, ಬಿಎಂಟಿಸಿ ಬಸ್ ಸೇರಿದಂತೆ ಹಲವು ವಾಹನಗಳು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದ್ದವು. ಆಗ ಏನಾದರೂ ಮರ ಬಿದ್ದಿದ್ದರೆ  ಹೆಚ್ಚಿನ ಅನಾಹುತ ಸಂಭವಿಸುತ್ತಿತ್ತು’ ಎಂದು ಘಟನೆಯ ಪ್ರತ್ಯಕ್ಷದರ್ಶಿ ಸುಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ವಿಷಯ ತಿಳಿದು ಏಳೆಂಟು ನಿಮಿಷದಲ್ಲೇ ಸ್ಥಳಕ್ಕೆ ಬಂದ ಬಿಬಿಎಂಪಿ ಪ್ರಹರಿ ಸಿಬ್ಬಂದಿ, ಕೊಂಬೆಗಳನ್ನು ಕತ್ತರಿಸಿ ಮರ ತೆರವುಗೊಳಿಸಿದರು. ಸ್ವಲ್ಪ ಸಮಯದಲ್ಲೇ ಸಂಚಾರ ಸಹಜ ಸ್ಥಿತಿಗೆ ಮರಳಿತು. ಫೈರೋಜ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಎಂದು ಮಲ್ಲೇಶ್ವರ ಪೊಲೀಸರು ಮಾಹಿತಿ ನೀಡಿದರು.

31 ಮರಗಳು ಧರೆಗೆ
ಗಾಳಿಯಿಂದಾಗಿ ಕೋರಮಂಗಲ ಹಾಗೂ ಜಯನಗರದಲ್ಲಿ ಎಂಟು ಮರಗಳು ಧರೆಗುರುಳಿದವು. ಇನ್ನುಳಿದಂತೆ ವಿವೇಕನಗರ, ಮಲ್ಲೇಶ್ವರ, ಲಗ್ಗೆರೆ ಹೊರ ವರ್ತುಲ ರಸ್ತೆ, ಇಂದಿರಾನಗರದ ಸಿಎಂಎಚ್ ರಸ್ತೆ, ಮಹಾಲಕ್ಷ್ಮಿಲೇಔಟ್, ಬೈರಸಂದ್ರ, ಕೊಟ್ಟಿಗೇಪಾಳ್ಯ, ರಾಜರಾಜೇಶ್ವರಿನಗರ, ಕೆಂಪೇಗೌಡನಗರ ಸಮೀಪದ ಗವಿಪುರ, ಜೀವನ್‌ಭಿಮಾನಗರ, ಕ್ವೀನ್ಸ್‌ ರಸ್ತೆ, ರಿಚ್ಮಂಡ್ ವೃತ್ತ ಸೇರಿದಂತೆ ವಿವಿಧೆಡೆ 31 ಮರಗಳು ನೆಲಕ್ಕುರುಳಿದವು.

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಮರ ಬಿದ್ದು ಮಿನ್ಸ್ಕ್‌ ಸ್ಕ್ವೇರ್–ಮಹಾತ್ಮ ಗಾಂಧಿ ವೃತ್ತದ ನಡುವಿನ ರಸ್ತೆಯಲ್ಲಿ ವಾಹನಗಳ ಓಡಾಟ ಕೆಲ ಕಾಲ ಬಂದ್ ಆಯಿತು. ನಂತರ ಪೊಲೀಸರು ವಾಹನ ಸವಾರರಿಗೆ ಪರ್ಯಾಯ ಮಾರ್ಗ ಕಲ್ಪಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಹೈಕೋರ್ಟ್‌ ಆದೇಶ  ಧಿಕ್ಕರಿಸಿದ ಪಾಲಿಕೆ
ಮರಗಳ ಸಮಗ್ರ ಸಮೀಕ್ಷೆ ನಡೆಸಿ ವರದಿ ನೀಡುವಂತೆ 2014ರ ಮಾರ್ಚ್‌ನಲ್ಲೇ ಹೈಕೋರ್ಟ್‌ ಸೂಚನೆ ನೀಡಿದ್ದರೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇದುವರೆಗೆ ಸಮೀಕ್ಷಾ ಕಾರ್ಯ ಆರಂಭಿಸಿಲ್ಲ.

ಲಕ್ಷ ಪರಿಹಾರ: ಮರಗಳು ಬಿದ್ದು ಮೃತಪಟ್ಟ ಬೈಕ್‌ ಸವಾರ ಹಾಗೂ ಬಾಲಕನ ಕುಟುಂಬಗಳಿಗೆ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ತಲಾ ₹ 1 ಲಕ್ಷ ಪರಿಹಾರ ಘೋಷಿಸಿದ್ದಾರೆ.

ಪರಿಹಾರ ಘೋಷಣೆ: ಮರಗಳು ಬಿದ್ದು ಮೃತಪಟ್ಟ ಬೈಕ್‌ ಸವಾರ ಹಾಗೂ ಬಾಲಕನ ಕುಟುಂಬಗಳಿಗೆ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ತಲಾ ₹ 1 ಲಕ್ಷ ಪರಿಹಾರ ಘೋಷಿಸಿದ್ದಾರೆ. ಈ ಸಂಬಂಧ ‘ಪ್ರಜಾವಾಣಿ’ ಜತೆ ಮಾತನಾಡಿದ ಅವರು ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನೂ ಬಿಬಿಎಂಪಿಯಿಂದ ಭರಿಸಲಾಗುವುದು ಎಂದು ತಿಳಿಸಿದರು.

ನಗರದಲ್ಲಿ ಹಿಂದಿನ ಪ್ರಕರಣಗಳು..
* 2015, ಡಿ.10: ವಿಜಯನಗರದ ಎಂ.ಸಿ.ಲೇಔಟ್‌ ಅಂಚೆ ಕಚೇರಿ ಬಳಿ ಬೈಕ್ ಮೇಲೆ ಹಳೆಯ ಮರ ಬಿದ್ದು ಸಿವಿಲ್ ಎಂಜಿನಿಯರ್ ಮಂಜುನಾಥ್ (35) ಎಂಬುವರು ಮೃತಪಟ್ಟಿದ್ದರು.

* 2015, ಜೂನ್ 10: ಆಡುಗೋಡಿಯ ಸಿಎಆರ್ ವಸತಿ ಸಮುಚ್ಚಯದಲ್ಲಿ ಗುಲ್‌ಮೊಹರ್ ಮರ ಮೈಮೇಲೆ ಬಿದ್ದು ಪುಟ್ಟಗಂಗಪ್ಪ (80) ಎಂಬವರು ಸಾವನ್ನಪ್ಪಿದ್ದರು.

ADVERTISEMENT

* 2015, ಮೇ 29: ಹೊಸೂರು ರಸ್ತೆಯ ಆನೆಪಾಳ್ಯ ಬಸ್‌ ತಂಗುದಾಣದ ಮೇಲೆ ಬೃಹತ್ ಗಾತ್ರದ ಮರ ಉರುಳಿ ಮಾಧವರೆಡ್ಡಿ (50) ಎಂಬುವರು ಮೃತಪಟ್ಟು, ಐದು ಮಂದಿ ಗಾಯಗೊಂಡಿದ್ದರು.

* 2015, ಸೆ.18: ಗರುಡಾಮಾಲ್ ಸಮೀಪದ ಡಿಸೋಜಾ ವೃತ್ತದಲ್ಲಿ ಹಳೆಯ ಮರವೊಂದು ಬುಡಮೇಲಾಗಿ ಬಿದ್ದು, ಯಲ್ಲಯ್ಯ (35) ಎಂಬ ಕೂಲಿ ಕಾರ್ಮಿಕ ಪ್ರಾಣ ಬಿಟ್ಟಿದ್ದರು.

* 2013ರ ಮೇ 8: ಬಸವೇಶ್ವರ ನಗರ ಸಮೀಪದ ಮೋದಿ ಆಸ್ಪತ್ರೆ ರಸ್ತೆಯಲ್ಲಿ ಚಲಿಸುತ್ತಿದ್ದ ಆಟೊ ಮೇಲೆ ಮರ ಬಿದ್ದು ಗೀತಾ (52) ಎಂಬುವವರು ಮೃತಪಟ್ಟಿದ್ದರು.

* 2012, ಜೂನ್‌ 06: ಸಂಪಿಗೆಹಳ್ಳಿ ಸಮೀಪದ ಟೆಲಿಕಾಂ  ಲೇಔಟ್‌ನಲ್ಲಿ ತೆಂಗಿನ ಮರ ಬಿದ್ದು ವೀರಣ್ಣ (50) ಎಂಬುವರು ಪ್ರಾಣ ಕಳೆದುಕೊಂಡಿದ್ದರು.

* 2012, ಮೇ 1: ಸಂಜಯನಗರದ ನಾಗಶೆಟ್ಟಿಹಳ್ಳಿಯಲ್ಲಿ ಅರಳಿ ಮರ ಬಿದ್ದು, ರವಿ (45) ಎಂಬುವರು ಸಾವನ್ನಪ್ಪಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.