ADVERTISEMENT

ನಿಮ್ಹಾನ್ಸ್‌ನಲ್ಲಿ ಅತ್ಯಾಧುನಿಕ ಸಾಧನ

ನರರೋಗ ಸಮಸ್ಯೆಗಳ ನಿಖರ ಪತ್ತೆ; ಇಂತಹ ಸಾಧನ ಹೊಂದಿದ ಎರಡನೇ ಸಂಸ್ಥೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2015, 20:08 IST
Last Updated 1 ಆಗಸ್ಟ್ 2015, 20:08 IST

ಬೆಂಗಳೂರು: ನರರೋಗ ಸಮಸ್ಯೆಗಳನ್ನು ನಿಖರವಾಗಿ ಪತ್ತೆ ಮಾಡುವಂತಹ ‘ಮ್ಯಾಗ್ನೆಟಿಕ್‌ ಎಲೆಕ್ಟ್ರೋಎನ್‌ಸೆಪ್ಲೊಗ್ರಾಂ’  ಎಂಬ ಅತ್ಯಾಧುನಿಕ ಸಾಧನವನ್ನು ನಿಮ್ಹಾನ್ಸ್‌ನಲ್ಲಿ ಅಳವಡಿಸಲಾಗಿದೆ.

ದೇಶದಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಎಐಐಎಂಎಸ್‌) ನಂತರ ಇಂತಹ ಸಾಧನ ಹೊಂದಿದ ಎರಡನೇ ಸಂಸ್ಥೆ ಎಂಬ ಹೆಗ್ಗಳಿಕೆಗೆ ನಿಮ್ಹಾನ್ಸ್ ಪಾತ್ರವಾಗಿದೆ.

ಸಂಸ್ಥೆಯ ನರ ವಿಜ್ಞಾನ ವಿಭಾಗದಲ್ಲಿ ಕೆಲ ತಿಂಗಳಿಂದ ಕಾರ್ಯನಿರ್ವಹಿಸುತ್ತಿರುವ ‘ಮ್ಯಾಗ್ನೆಟೊಎನ್‌ಸೆಪ್ಲೊಗ್ರಾಫಿ ಸೆಂಟರ್‌’ನಲ್ಲಿ  ಈ ಸಾಧನ ಅಳವಡಿಸಲಾಗಿದೆ.

ಈ ಕೇಂದ್ರವನ್ನು ಕಳೆದ ವಾರ ನಗರಕ್ಕೆ ಭೇಟಿ ನೀಡಿದ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಉದ್ಘಾಟಿಸಬೇಕಿತ್ತು. ಆದರೆ, ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಅವರ ನಿಧನದಿಂದಾಗಿ ಆ ಕಾರ್ಯಕ್ರಮ ರದ್ದುಗೊಂಡಿತು.

‘ಚಿಕಿತ್ಸೆಗೆ ಸರಿಯಾದ ಸ್ಪಂದಿಸದ ಮೂರ್ಛೆ ರೋಗ ಪೀಡಿತರಲ್ಲಿನ ಸಮಸ್ಯೆಗಳನ್ನು ಈ ಸಾಧನದಿಂದ ನಿಖರವಾಗಿ ಪತ್ತೆ ಮಾಡಬಹುದು’ ಎಂದು ನಿಮ್ಹಾನ್ಸ್‌ ಹಂಗಾಮಿ ನಿರ್ದೇಶಕ ಡಾ. ಉಮಾ ಮಹೇಶ್ವರ್‌ ರಾವ್‌ ತಿಳಿಸಿದರು.

‘ಸಂಸ್ಥೆಯು ಸರ್ಕಾರದ ನೆರವಿನೊಂದಿಗೆ ₨25 ಕೋಟಿ ವೆಚ್ಚದಲ್ಲಿ ಈ ಸಾಧನ ತರಿಸಿಕೊಂಡಿದೆ. ಒಬ್ಬ ರೋಗಿಯನ್ನು ಪರೀಕ್ಷಿಸಲು ನಾಲ್ಕು ಗಂಟೆ ಅವಧಿ ಹಿಡಿಯುತ್ತದೆ. ದಿನಕ್ಕೆ ಸರಾಸರಿ ಇಬ್ಬರಿಂದ ಮೂವರು ರೋಗಿಗಳನ್ನು ಪರೀಕ್ಷಿಸಬಹುದು’ ಎಂದೂ ಹೇಳಿದರು.

ಎಂಆರ್‌ಐ ಸ್ಕ್ಯಾನಿಂಗ್‌ಗೆ ಹೋಲಿಸಿದರೆ ಈ ಸಾಧನವು ಬಹಳ ಅತ್ಯಾಧುನಿಕವಾಗಿದೆ. ಬಡತನ ರೇಖೆಗಿಂತ ಕೆಳಗಿರುವವರಿಗೆ ಉಚಿತ ಚಿಕಿತ್ಸೆ ನೀಡಲು ಸಂಸ್ಥೆ ನಿರ್ಧರಿಸಿದೆ.

‘ಸುಗಮ ಕೆಲಸಕ್ಕೆ ಗಮನ’
ಬೆಂಗಳೂರು: ‘ನಿಮ್ಹಾನ್ಸ್‌ನಲ್ಲಿ ಎಲ್ಲ ಕಾರ್ಯಗಳನ್ನು ಸುಗಮವಾಗಿ ಮುಂದುವರೆಸಿಕೊಂಡು ಹೋಗಲು ಹೆಚ್ಚು ಗಮನ ಹರಿಸುವೆ’

ಇದು ನಿಮ್ಹಾನ್ಸ್‌ ಹಂಗಾಮಿ ನಿರ್ದೇಶಕ ಡಾ. ಉಮಾ ಮಹೇಶ್ವರ್‌ ರಾವ್‌ ಅವರ ಮಾತು. ‘ಶುಕ್ರವಾರ ನಿವೃತ್ತರಾದ ಹಂಗಾಮಿ ನಿರ್ದೇಶಕ ಡಾ. ನಿತ್ಯಾನಂದ ಪ್ರಧಾನ್‌ ಅವರು ಅವರ ಅಧಿಕಾರದ ಅವಧಿಯಲ್ಲಿ ಹೊರಡಿಸಿರುವ ಆದೇಶಗಳಿಗೆ ಸಂಬಂಧಿಸಿ ಪರ ಅಥವಾ ವಿರುದ್ಧವಾಗಿ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಪ್ರಧಾನ್‌ ವಿರುದ್ಧ ಕೆಲ ಸಿಬ್ಬಂದಿಯು ಇತ್ತೀಚಿಗೆ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿಗೆ ಬರೆದಿರುವ ಪತ್ರಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಸಿಬ್ಬಂದಿಯಾಗಲಿ ಅಥವಾ ಜಂಟಿ ಕಾರ್ಯದರ್ಶಿಯವರಾಗಲಿ ನನ್ನನ್ನು ಸಂಪರ್ಕಿಸಿಲ್ಲ’ ಎಂದೂ ತಿಳಿಸಿದರು.

ಪ್ರಧಾನ್‌ ಅವರು ನಿರ್ದೇಶಕರಾಗಿದ್ದ ಅವಧಿಯಲ್ಲಿ ಮೂರು ವಿಭಾಗಗಳ ನಿರ್ದೇಶಕರನ್ನು ಕೆಲಸದಿಂದ ಬಿಡುಗಡೆ ಮಾಡಿರುವುದು ಸೇರಿದಂತೆ ಕೆಲ ವಿವಾದಾಸ್ಪದ ತೀರ್ಮಾನಗಳನ್ನು ತೆಗೆದುಕೊಂಡಿದ್ದರು. ಇದರಿಂದ ಸಂಸ್ಥೆಯ ಸಿಬ್ಬಂದಿ ಅವರ ವಿರುದ್ಧ ಇತ್ತೀಚಿಗೆ ಪ್ರತಿಭಟನೆ ನಡೆಸಿ, ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT