ADVERTISEMENT

ನಿಯಮ ಉಲ್ಲಂಘಿಸಿದರೆ ದಂಡ ಪಾವತಿ ಬದಲು ‘ವಿಡಿಯೊ ವೀಕ್ಷಣೆ’

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 20:30 IST
Last Updated 17 ನವೆಂಬರ್ 2017, 20:30 IST
ಕೋರಮಂಗಲದ ಫೋರಂ ಮಾಲ್‌ ಆವರಣದ ಬಳಿ ಸಂಚಾರ ಶಿಸ್ತಿನ ವಿಡಿಯೊ ವೀಕ್ಷಿಸುತ್ತಿರುವ ನಿಯಮ ಉಲ್ಲಂಗಿಸಿದ ವಾಹನ ಸವಾರರು. ಸಂಚಾರ ಪೊಲೀಸರು ಇದ್ದಾರೆ
ಕೋರಮಂಗಲದ ಫೋರಂ ಮಾಲ್‌ ಆವರಣದ ಬಳಿ ಸಂಚಾರ ಶಿಸ್ತಿನ ವಿಡಿಯೊ ವೀಕ್ಷಿಸುತ್ತಿರುವ ನಿಯಮ ಉಲ್ಲಂಗಿಸಿದ ವಾಹನ ಸವಾರರು. ಸಂಚಾರ ಪೊಲೀಸರು ಇದ್ದಾರೆ   

ಬೆಂಗಳೂರು: ನಗರ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸುವರು ಇನ್ನು ಮುಂದೆ ದಂಡ ಪಾವತಿಸುವ ಬದಲಿಗೆ ಸಂಚಾರ ಶಿಸ್ತಿನ ವಿಡಿಯೊ ವೀಕ್ಷಿಸಬೇಕು....!

ಹೌದು, ಬೆಂಗಳೂರು ಸಂಚಾರ ವಿಭಾಗದ ಪೊಲೀಸರು ವಿನೂತನ ಯೋಜನೆಯನ್ನು ಜಾರಿಗೆ ತಂದಿದ್ದು, ನಿಯಮ ಉಲ್ಲಂಘನೆಗೆ ಕಡಿವಾಣ ಹಾಕಲು 25 ನಿಮಿಷದ ಸಂಚಾರ ಶಿಸ್ತಿನ ವಿಡಿಯೊ ಮೋರೆ ಹೋಗಿದ್ದಾರೆ.

‌ಈ ವಿನೂತನ ಯೋಜನೆಯನ್ನು ಈಗಾಗಲೇ ಕೋರಮಂಗಲದ ಫೋರಂ ಮಾಲ್ ಆವರಣದಲ್ಲಿ ಶುಕ್ರವಾರದಿಂದ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ಇದಕ್ಕೆ ವ್ಯಕ್ತವಾಗುವ ಪ್ರತಿಕ್ರಿಯೆ ಆಧರಿಸಿ ಮುಂದಿನ ದಿನಗಳಲ್ಲಿ ನಗರದಾದ್ಯಂತ ಯೋಜನೆಯನ್ನು ವಿಸ್ತರಿಸಲಾಗುತ್ತದೆ.

ADVERTISEMENT

ಸಾರ್ವಜನಿಕ ಹಾಗೂ ಖಾಸಗಿ ಸ್ಥಳಗಳಲ್ಲಿ ಜಾಗದ ಲಭ್ಯತೆ ಆಧಾರದ ಮೇಲೆ ವಿಡಿಯೊ ಪ್ರದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ದಂಡ ಸಂಗ್ರಹಕ್ಕಿಂತ ಜನರಲ್ಲಿ ಸಂಚಾರ ನಿಯಮ ಪಾಲನೆ ಕುರಿತು ಅರಿವು ಮೂಡಿಸುವುದು ಮುಖ್ಯ. ಹೀಗಾಗಿ, ಈ ಕ್ರಮ ಅನುಸರಿಸಿದ್ದೇವೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ) ಆರ್.ಹಿತೇಂದ್ರ ಅವರು ಹೇಳಿದರು.

ಯೋಜನೆ ವಿವರ: ನಗರದ ಪ್ರಮುಖ ಜಂಕ್ಷನ್ ಹಾಗೂ ರಸ್ತೆಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸಿವವರನ್ನು ಸಂಚಾರ ಪೊಲೀಸರು ಸ್ಥಳದಲ್ಲೇ ವಶಕ್ಕೆ ಪಡೆದು ಅವರಿಗೆ ವಿಡಿಯೊ ತೋರಿಸಲಾಗುತ್ತದೆ. ವಿಡಿಯೊವನ್ನು ಸಂಪೂರ್ಣವಾಗಿ ವೀಕ್ಷಿಸುವ ವರೆಗೆ ನಿಯಮ ಉಲ್ಲಂಘಿಸಿದವರನ್ನು ಸ್ಥಳದಿಂದ ಕಳುಹಿಸುವುದಿಲ್ಲ.

ಚಾಲನೆ ವೇಳೆ ಮೊಬೈಲ್ ಬಳಕೆ, ಪಾನಮತ್ತರಾಗಿ ಚಾಲನೆ, ಸಿಗ್ನಲ್ ಜಂಪ್ ಹಾಗೂ ಸಂಚಾರ ನಿಯಮ ಉಲ್ಲಂಘನೆಯಿಂದ ಉಂಟಾದ ಅಪಘಾತದ ದೃಶ್ಯಗಳು ವಿಡಿಯೊದಲ್ಲಿ ಇರಲಿವೆ. ವಿಡಿಯೊ ವೀಕ್ಷಣೆ ಬಳಿಕ ಕಾನೂನು ಪಾಲನೆ ಬಗ್ಗೆ ಪಾಠ ಹೇಳಲಾಗುತ್ತದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.