ADVERTISEMENT

ನಿಯಮ ಉಲ್ಲಂಘಿಸಿ ಹಣ ವಾಪಸ್‌ ಪಡೆದ ಆರೋಪ

ಶಾಸಕ ಎಸ್‌.ಸುರೇಶ್‌ಕುಮಾರ್‌ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 19:32 IST
Last Updated 3 ಸೆಪ್ಟೆಂಬರ್ 2015, 19:32 IST

ಬೆಂಗಳೂರು: ‘ಕಾನೂನು ಬಾಹಿರವಾಗಿ ಜಿ ಕೆಟಗೆರಿ ನಿವೇಶನ ಪಡೆದು ಹಿಂದಿರುಗಿಸಿದ ಶಾಸಕ ಎಸ್‌. ಸುರೇಶ್‌ಕುಮಾರ್‌ ಅವರಿಗೆ ಬಿಡಿಎ ಅಧಿಕಾರಿಗಳು ನಿಯಮ ಉಲ್ಲಂಘಿಸಿ ಹಣ ಮರುಪಾವತಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿ ನಿವೃತ್ತ ವಿಂಗ್ ಕಮಾಂಡರ್ ಜಿ.ಬಿ.ಅತ್ರಿ ಅವರು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಅವರಿಗೆ ದೂರು ಸಲ್ಲಿಸಿದ್ದಾರೆ.

‘ಸುರೇಶ್‌ ಕುಮಾರ್ 2009 ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿ ಬಿಡಿಎದಿಂದ ಜಿ ಕೆಟಗೆರಿ ನಿವೇಶನ ಪಡೆದಿದ್ದರು. ಆ ಪ್ರಮಾಣಪತ್ರದಲ್ಲಿ ಅವರು ನಾನು ಸುಳ್ಳು ಮಾಹಿತಿ ನೀಡಿದ್ದಲ್ಲಿ ನನಗೆ ಯಾವುದೇ ಪರಿಹಾರ ನೀಡದೇ ಬಿಡಿಎ ನಿವೇಶನ ಹಿಂದಕ್ಕೆ ಪಡೆಯಬಹುದು ಎಂದು ಘೋಷಿಸಿದ್ದರು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ಆಗ ನಗರಾಭಿವೃದ್ಧಿ ಸಚಿವರಾಗಿದ್ದ ಸುರೇಶ್‌ಕುಮಾರ್‌, ಬಿಡಿಎ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಮೂರು ಕಡೆಗಳಲ್ಲಿ ನಿವೇಶನ ಬದಲಾಯಿಸಿದ್ದರು. ಅಂತಿಮವಾಗಿ ರಾಜಮಹಲ್‌ ವಿಲಾಸ್‌ ಎರಡನೇ ಹಂತದಲ್ಲಿ ನಿವೇಶನ ಪಡೆದುಕೊಂಡ ಅವರು, ಸಾರ್ವಜನಿಕ ಟೀಕೆಗಳು ಕೇಳಿಬಂದ ಕಾರಣ ಅದನ್ನು 2012ರ ಸೆಪ್ಟೆಂಬರ್‌ 3 ರಂದು ಬಿಡಿಎಗೆ ಹಿಂದಿರುಗಿಸಿದ್ದರು’ ಎಂದು ಹೇಳಿದ್ದಾರೆ.

‘ನಿವೇಶನವನ್ನು ಹಿಂದಿರುಗಿಸಿದ ತಕ್ಷಣವೇ ಸುರೇಶ್‌ಕುಮಾರ್‌ ಅವರು ಬಿಡಿಎ ಅಧಿಕಾರಿಗಳ ಮೇಲೆ ಒತ್ತಡ ಹಾಕಿ 2012ರ ಅಕ್ಟೋಬರ್‌ 1 ರಂದು ನಿವೇಶನಕ್ಕೆ ತಾವು ಪಾವತಿಸಿದ್ದ ₨10.30 ಲಕ್ಷ ಹಣವನ್ನು ಕಾನೂನುಬಾಹಿರವಾಗಿ ಹಿಂದಕ್ಕೆ ಪಡೆದಿದ್ದಾರೆ’ ಎಂದು ಅತ್ರಿ ದೂರಿನಲ್ಲಿ ಆರೋಪಿಸಿದ್ದಾರೆ.

‘ಸುರೇಶ್‌ಕುಮಾರ್‌ ಅವರಿಂದ ಹಣವನ್ನು ವಾಪಸ್‌ ವಸೂಲಿ ಮಾಡುವ ಜತೆಗೆ ಈ ಪ್ರಕರಣದಲ್ಲಿ ತಪ್ಪಿತಸ್ಥರಾದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಹಂಚಿಕೆ ರದ್ದುಪಡಿಸಲು ಅತ್ರಿ ಆಗ್ರಹ
‘2009ರಲ್ಲಿ ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ 61 ರಾಜಕಾರ ಣಿಗಳು ಜಿ–ಕೆಟಗೆರಿ ನಿವೇಶನ ಪಡೆದಿದ್ದಾರೆ. ಲೋಕಾಯಕ್ತ ಇಲ್ಲವೇ ಚುನಾವಣಾ ಆಯೋಗಕ್ಕೆ ನಿವೇಶನ ಪಡೆದವರು ಸಲ್ಲಿಸಿರುವ ಪ್ರಮಾಣ ಪತ್ರ ಪರಿಶೀಲಿಸಿ ಕಾನೂನು ಬಾಹಿರವಾಗಿ ಪಡೆದ ನಿವೇಶನವನ್ನು ಹಿಂದಕ್ಕೆ ಪಡೆಯಬೇಕು’ ಎಂದು ಆಗ್ರಹಿಸಿ ಅತ್ರಿ ಅವರು ನಗರಾಭಿವೃದ್ಧಿ ಇಲಾ ಖೆಯ ಹೆಚ್ಚುವರಿ ಮುಖ್ಯಕಾರ್ಯ ದರ್ಶಿ ಅವರಿಗೆ ಮತ್ತೊಂದು ದೂರು ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT