ADVERTISEMENT

ನಿವೇಶನ ಮಾರಾಟ: ಭಾರಿ ಅಕ್ರಮ ಪತ್ತೆ

199 ಎಕರೆ ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2017, 19:37 IST
Last Updated 20 ನವೆಂಬರ್ 2017, 19:37 IST
ಜಾಗವನ್ನು ವಿ.ಶಂಕರ್ ಪರಿಶೀಲಿಸಿದರು. ಬಿ.ಆರ್‌. ಹರೀಶ್‌ ನಾಯಕ್‌ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಇದ್ದಾರೆ.
ಜಾಗವನ್ನು ವಿ.ಶಂಕರ್ ಪರಿಶೀಲಿಸಿದರು. ಬಿ.ಆರ್‌. ಹರೀಶ್‌ ನಾಯಕ್‌ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಇದ್ದಾರೆ.   

ಬೆಂಗಳೂರು: ಬನ್ನೇರುಘಟ್ಟ ರಸ್ತೆಯ ಪಿಲ್ಲಗಾನಹಳ್ಳಿಯ ನೂರಾರು ಕೋಟಿ ರೂಪಾಯಿ ಬೆಲೆಬಾಳುವ ನಿವೇಶನಗಳ ಅಕ್ರಮ ನಿರ್ಮಾಣವನ್ನು ನಗರ ಜಿಲ್ಲಾಡಳಿತ ಸೋಮವಾರ ಪತ್ತೆ ಹಚ್ಚಿದೆ. ಈ ಅತಿಕ್ರಮಣವನ್ನು ನಿರ್ದಾಕ್ಷಿಣ್ಯವಾಗಿ ತೆರವು ಮಾಡುವಂತೆ ಜಿಲ್ಲಾಧಿಕಾರಿ ವಿ.ಶಂಕರ್ ನಿರ್ದೇಶನ ನೀಡಿದರು.

ಸರ್ವೆ ನಂಬರ್‌ 1ರ ಗೋಮಾಳದಲ್ಲಿ ಒಟ್ಟು ವಿಸ್ತೀರ್ಣ 199.07 ಎಕರೆ. ಇಲ್ಲಿ ಹಲವು ವ್ಯಕ್ತಿಗಳು ಅಕ್ರಮವಾಗಿ ಮನೆಗಳ ನಿರ್ಮಾಣ ಮಾಡುತ್ತಿದ್ದಾರೆ ಎಂಬ ಮಾಹಿತಿ ಅನ್ವಯ ವಿ.ಶಂಕರ್, ದಕ್ಷಿಣ ಉಪವಿಭಾಗಾಧಿಕಾರಿಬಿ.ಆರ್‌ಹರೀಶ್‌ ನಾಯಕ್‌, ತಹಶೀಲ್ದಾರ್ ಎಚ್.ಟಿ.ಮಂಜಪ್ಪ ಮತ್ತು ಕಾರ್ಯಪಡೆಯ ಅಧಿಕಾರಿಗಳು ತಪಾಸಣೆ ನಡೆಸಿದರು.

‘ಇಲ್ಲಿ ಸಾವಿರಕ್ಕೂ ಅಧಿಕ ಮನೆಗಳು ನಿರ್ಮಾಣವಾಗಿವೆ. ಈಗ ಅನೇಕ ಮಂದಿ ಅಕ್ರಮವಾಗಿ ನಿವೇಶನಗಳನ್ನು ಸಿದ್ಧಪಡಿಸಿದ್ದಾರೆ. 2012ಕ್ಕೂ ಹಿಂದೆ ನಿರ್ಮಾಣಗೊಂಡಿರುವ ಮನೆಗಳನ್ನು 94 ಸಿ, 94 ಸಿಸಿ (ಅಕ್ರಮ–ಸಕ್ರಮ) ಅಡಿ ಸಕ್ರಮಗೊಳಿಸಲಾಗುತ್ತದೆ. ಇದಕ್ಕೆ ಡಿಸೆಂಬರ್‌ ಅಂತ್ಯದವರೆಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ. ಅರ್ಜಿ ಸಲ್ಲಿಸಿದವರು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು’ ಎಂದು ವಿ.ಶಂಕರ್‌ ತಿಳಿಸಿದರು.

ADVERTISEMENT

‘ಸುಮಾರು 60 ಎಕರೆಯಲ್ಲಿ ಇಂತಹ ಮನೆಗಳು ನಿರ್ಮಾಣವಾಗಿವೆ ಎಂದು ಅಂದಾಜಿಸಲಾಗಿದೆ. 100 ಎಕರೆಯಷ್ಟು ಖಾಲಿ ಜಾಗ ಸಿಗುತ್ತದೆ’ ಎಂದರು.

ಬಿ.ಆರ್‌. ಹರೀಶ್‍ ನಾಯಕ್ ಮಾತನಾಡಿ, ‘ಕೆಲವು ವ್ಯಕ್ತಿಗಳು ಸಂಘ ಸಂಸ್ಥೆಗಳು ಹಾಗೂ ಸಮಾಜಸೇವಾ ಸಂಘಟನೆ ಹೆಸರಿನಲ್ಲಿ ಪ್ರತಿ ನಿವೇಶನಕ್ಕೆ₹2 ಲಕ್ಷದಿಂದ ₹6 ಲಕ್ಷದವರೆಗೆ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಲಭಿಸಿತು. ಈ ಜಾಗ ಸರ್ಕಾರದಿಂದ ಮಂಜೂರಾಗಿದೆ ಎಂದು ಹಲವು ವ್ಯಕ್ತಿಗಳು ವಾದಿಸಿದರು. ಭೂಮಾಪನಾ ಇಲಾಖೆಯ ದಾಖಲೆಗಳಲ್ಲಿ ಮಂಜೂರುದಾರರ ಹೆಸರು ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಎಚ್.ಟಿ.ಮಂಜಪ್ಪ ಮಾತನಾಡಿ, ‘ಈ ಜಾಗದಲ್ಲಿ ಬಹಳಷ್ಟು ಹಿಂದೆಯೇ ಬಡಾವಣೆಗಳು ನಿರ್ಮಾಣಗೊಂಡಿವೆ. ಇವುಗಳಲ್ಲಿ ಬಡವರು ವಾಸ ಮಾಡುತ್ತಿ
ದ್ದಾರೆ. ಮೂಲ ಸೌಕರ್ಯ ಕೊರತೆ ಇದೆ. ಮನೆಗಳು ಸರ್ಕಾರದಿಂದ ಸಕ್ರಮ ಆಗಿಲ್ಲ. ಸುಮಾರು ಮೂರೂವರೆ ಸಾವಿರ ಅರ್ಜಿಗಳು ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ಸಲ್ಲಿಕೆ ಆಗಿದ್ದು ಪರಿಶೀಲನೆ ಹಂತದಲ್ಲಿವೆ. ರಾತ್ರೋರಾತ್ರಿ ನಿರ್ಮಾಣಗೊಂಡಿವೆ ಎನ್ನಲಾದ ಶೆಡ್‌ಗಳು 150ರಷ್ಟಿವೆ’ ಎಂದರು.

‘ನಾವು ಆರ್ಥಿಕವಾಗಿ ಹಿಂದುಳಿದವರಾಗಿದ್ದು ಹತ್ತು ವರ್ಷಗಳಿಂದ ಇಲ್ಲಿ ವಾಸವಿದ್ದೇವೆ. ಮನೆ ತೆರವು ಮಾಡಬಾರದು’ ಎಂದು ಕೆಲವು ನಿವಾಸಿಗಳು ಮನವಿ ಮಾಡಿದರು.

‘ಈ ಜಾಗದಲ್ಲಿ ಮುನಿರಾಜು, ಚಂದು, ಖುರೇಶಿ, ಮಾರಣ್ಣ, ಚಾಂದ್ ಪಾಷ ಎನ್ನುವವರು ಅಕ್ರಮವಾಗಿ ನಿವೇಶನಗಳನ್ನು ನಿರ್ಮಿಸಿದ್ದಾರೆ. ನಕಲಿ ದಾಖಲೆ ಸಹಾಯದಿಂದ ಅಮಾಯಕರಿಗೆ ಮಾರಾಟ ಮಾಡುತ್ತಿದ್ದಾರೆ’ ಎಂದು ದೂರಿದರು.

ನಿರ್ದಿಷ್ಟ ಪ್ರಕರಣ ಅಥವಾ ವ್ಯಕ್ತಿಗಳ ಬಗ್ಗೆ ದೂರು ಸಲ್ಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.