ADVERTISEMENT

ನಿಷ್ಕ್ರಿಯಗೊಂಡ ಐಸೆಕ್‌ ಆಡಳಿತ ಮಂಡಳಿ

ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ ಅಧ್ಯಕ್ಷರಿಂದ ತಡೆಯಾಜ್ಞೆ

​ಪ್ರಜಾವಾಣಿ ವಾರ್ತೆ
Published 2 ಮೇ 2015, 19:35 IST
Last Updated 2 ಮೇ 2015, 19:35 IST

ಬೆಂಗಳೂರು: ಸಂಸ್ಥೆ ಅಧ್ಯಕ್ಷರೇ ತಂದಿರುವ ತಡೆಯಾಜ್ಞೆ ಕಾರಣ, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯ (ಐಸೆಕ್‌) ಆಡಳಿತ ಮಂಡಳಿ ಈಗ ನಿಷ್ಕ್ರಿಯವಾಗಿದೆ. ಸಂಸ್ಥೆಯಲ್ಲಿ ಹಣಕಾಸಿನ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದ ನಂತರ, ಸಂಸ್ಥೆಯ ಅಧ್ಯಕ್ಷ ಪ್ರೊ.ಜಿ. ತಿಮ್ಮಯ್ಯ ಅವರು ಅಧೀನ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ.

ಸಂಸ್ಥೆಯ ಹಿಂದಿನ ನಿರ್ದೇಶಕ ಪ್ರೊ. ಬಿನಯ್ ಕುಮಾರ್ ಪಟ್ಟನಾಯಕ್  ಅವರು ನಿಯಮ ಉಲ್ಲಂಘಿಸಿ ಟೆಂಡರ್‌ ಅನುಮೋದನೆ ನೀಡಿದ್ದಾರೆ ಎಂದು ಆಡಳಿ ಮಂಡಳಿ ಸದಸ್ಯ ಡಾ.ಟಿ.ಎನ್. ಭಟ್ ಅವರು ಉಪ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು.

ಉಪ ಲೋಕಾಯುಕ್ತರ ಎದುರು ವಿಚಾರಣೆಗೆ ಹಾಜರಾದ ಪಟ್ಟನಾಯಕ್ ಅವರು ಫೆಬ್ರುವರಿಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ವಿಚಾರಣೆ ಭಾಗವಾಗಿ ಪ್ರೊ. ತಿಮ್ಮಯ್ಯ ಅವರೂ ಉಪ ಲೋಕಾಯುಕ್ತರ ಎದುರು ಹಾಜರಾದರು. ಐಸೆಕ್‌ನ ವ್ಯವಹಾರಗಳ ಕುರಿತು ತನಿಖೆ ನಡೆಸುವ ಅಧಿಕಾರ ಲೋಕಾಯುಕ್ತಕ್ಕೆ ಇಲ್ಲ ಎಂದು ಪ್ರೊ. ತಿಮ್ಮಯ್ಯ ಅವರು ನಂತರ ಅರ್ಜಿ ಸಲ್ಲಿಸಿದರು.

ಕೋರ್ಟ್‌ ತಡೆ: ಹಣಕಾಸಿನ ಅವ್ಯವಹಾರ ಕುರಿತ ಲೋಕಾಯುಕ್ತ ತನಿಖೆಗೆ ಹೈಕೋರ್ಟ್‌ ತಡೆ ನೀಡಿತು. ಈ ಸಂಸ್ಥೆಗೆ ಶೇಕಡ 60ಕ್ಕಿಂತ ಹೆಚ್ಚಿನ ಅನುದಾನ ರಾಜ್ಯ ಸರ್ಕಾರದಿಂದ ಬರುತ್ತಿದೆ.

‘ಪಟ್ಟನಾಯಕ್ ಅವರನ್ನು ಐಸೆಕ್‌ ನಿರ್ದೇಶಕರನ್ನಾಗಿ 2013ರ ಜುಲೈನಲ್ಲಿ ಅಂದಿನ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ನೇಮಕ ಮಾಡಿದ್ದರು. ಹಾಗಾಗಿ ಪಟ್ಟನಾಯಕ್ ಅವರು ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೇ ರವಾನಿಸಬೇಕಿತ್ತು’ ಎಂದು ಡಾ. ಭಟ್ ಹೇಳುತ್ತಾರೆ.

ಆದರೆ, ತಿಮ್ಮಯ್ಯ ಅವರು ರಾಜೀನಾಮೆಯನ್ನು ತಾವೇ ಅಂಗೀಕರಿಸಿದರು. ಹಾಗೆ ಮಾಡುವ ಅಧಿಕಾರ ಅವರಿಗಿಲ್ಲ ಎಂಬುದು ಭಟ್ ಅವರ ವಾದ.

ಐಸೆಕ್‌ನ ಆಡಳಿತವನ್ನು ಕಳೆದ ಮೂರು ತಿಂಗಳಿಂದ ಉಸ್ತುವಾರಿ ನಿರ್ದೇಶಕ ಪ್ರೊ.ಎಂ.ಆರ್. ನಾರಾಯಣ ಅವರು ನೋಡಿಕೊಳ್ಳುತ್ತಿದ್ದಾರೆ. ಆದರೆ ಹಣಕಾಸಿಗೆ ಸಂಬಂಧಿಸಿದ ನಿರ್ಧಾರ ಕೈಗೊಳ್ಳುವ ಅಧಿಕಾರ ಅವರಿಗೆ ಇಲ್ಲ.

ಆಡಳಿತ ಮಂಡಳಿ ಸಭೆ ಕರೆಯಲು ಅದರ ಸದಸ್ಯರು ಒತ್ತಾಯ ಮಂಡಿಸಿದಾಗ, ಅಧ್ಯಕ್ಷ ಪ್ರೊ. ತಿಮ್ಮಯ್ಯ ಅವರು ಅಧೀನ ನ್ಯಾಯಾಲಯದ ಮೊರೆ ಹೋದರು. ಸಭೆ ಕರೆಯುವಂತೆ ಅಧ್ಯಕ್ಷರನ್ನು ಒತ್ತಾಯ ಮಾಡುವಂತಿಲ್ಲ ಎಂದು ನ್ಯಾಯಾಲಯ ಮಧ್ಯಾಂತರ ತಡೆಯಾಜ್ಞೆ ನೀಡಿತು. ಆಡಳಿತ ಮಂಡಳಿ ಕೆಲಸ ಮಾಡುತ್ತಿಲ್ಲವಾದ ಕಾರಣ, ಪೂರ್ಣಾವಧಿ ನಿರ್ದೇಶಕರನ್ನು ಆಯ್ಕೆ ಮಾಡಲು ಶೋಧನಾ ಸಮಿತಿ ರಚಿಸುವ ಕೆಲಸ ವಿಳಂಬ ಆಗಿದೆ ಎಂದು ಡಾ. ಭಟ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪೂರ್ಣಾವಧಿ ನಿರ್ದೇಶಕರು ಇಲ್ಲದಿರುವುದು ಸಂಸ್ಥೆಯ ಚಟುವಟಿಕೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ’ ಎಂದು ಐಸೆಕ್‌ನ ಮಾಜಿ ನಿರ್ದೇಶಕ ಪ್ರೊ. ಗೋಪಾಲ ಕಡೆಕೋಡಿ ಅವರು ಹೇಳಿದರು. ಈ ಸಂಬಂಧ ಪ್ರತಿಕ್ರಿಯೆ ನೀಡಲು ಪ್ರೊ. ತಿಮ್ಮಯ್ಯ ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.