ADVERTISEMENT

ನೀತಿ ಸಂಹಿತೆ: ನಡೆಯದ ಬಿಬಿಎಂಪಿ ಕೌನ್ಸಿಲ್‌ ಕಲಾಪ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2015, 20:06 IST
Last Updated 30 ನವೆಂಬರ್ 2015, 20:06 IST

ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆ ಘೋಷಣೆ ಆಗಿದ್ದು ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕೌನ್ಸಿಲ್‌ ಸಭೆಯನ್ನು ಸೋಮವಾರ ಸಂತಾಪ ಸೂಚಕ ಗೊತ್ತುವಳಿ ಸ್ವೀಕಾರಕ್ಕಷ್ಟೇ ಸೀಮಿತಗೊಳಿಸಲಾಯಿತು.

ಶಾಸಕರಾದ ಗುರುಪಾದಪ್ಪ ನಾಗಮಾರಪಲ್ಲಿ, ಜಗದೀಶಕುಮಾರ್‌ ಮತ್ತು ಹಿರಿಯ ಐಎಎಸ್‌ ಅಧಿಕಾರಿ ಡಿ.ಸತ್ಯಮೂರ್ತಿ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ, ಮೌನಾಚರಣೆ ಮಾಡಲಾಯಿತು.

‘ಕಸ ವಿಂಗಡಣೆಗೆ ಜಾಗೃತಿ ಆಂದೋಲನ ಆರಂಭಿಸಲಾಗಿದೆ. ಪ್ರತಿ ವಾರ್ಡ್‌ನಲ್ಲೂ ಕಸ ಪ್ರತ್ಯೇಕಿಸಿ ಕೊಡುವಂತೆ ಅಲ್ಲಿನ ಸದಸ್ಯರು ನಾಗರಿಕರಲ್ಲಿ ಮನವಿ ಮಾಡಬೇಕು’ ಎಂದು ಹೇಳಿದ ಮೇಯರ್‌ ಬಿ.ಎನ್‌. ಮಂಜುನಾಥ್‌ ರೆಡ್ಡಿ, ಮರುಕ್ಷಣವೇ ಸಭೆಯನ್ನು ಮುಂದೂಡಿದರು. ಇಡೀ ಕಲಾಪ ಕೇವಲ 15 ನಿಮಿಷ ಮುಗಿಯಿತು.

ಬಿಬಿಎಂಪಿ ಸಭೆಯಲ್ಲೂ ಟಿಪ್ಪು ವಿವಾದ:  ಕಾಂಗ್ರೆಸ್‌ ಸದಸ್ಯ ಆರ್‌. ಸಂಪತ್‌ರಾಜ್‌, ಸಭೆ ಆರಂಭಕ್ಕೆ ಮುನ್ನ ಎದ್ದುನಿಂತು, ‘ಟಿಪ್ಪು ಸುಲ್ತಾನ್‌ ಅವರ ಜನ್ಮದಿನ ಆಚರಿಸಿದ್ದಕ್ಕೆ ಮುಖ್ಯಮಂತ್ರಿ ಹಾಗೂ ಮೇಯರ್‌ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ’ ಎಂದು ಹೇಳಿದ್ದು ವಾಗ್ವಾದಕ್ಕೆ ಕಾರಣವಾಯಿತು.

‘ವಿನಾಕಾರಣ ವಿವಾದ ಉಂಟು ಮಾಡಿದ್ದೀರಿ, ನಾಚಿಕೆ ಆಗಬೇಕು ನಿಮಗೆ’ ಎಂದು ಬಿಜೆಪಿಯ ಎನ್‌. ಶಾಂತಕುಮಾರಿ ಆಕ್ರೋಶ ವ್ಯಕ್ತಪಡಿಸಿದರು. ಅದಕ್ಕೆ ಶಾಸಕ ರವಿಸುಬ್ರಹ್ಮಣ್ಯ, ಪದ್ಮನಾಭ ರೆಡ್ಡಿ ಮತ್ತಿತರರು ಧ್ವನಿಗೂಡಿಸಿದರು.

ಮೇಯರ್‌ ಪೀಠದ ಮುಂದೆ ಬಂದ ಬಿಜೆಪಿಯ ಸಂಪತ್‌ ಕುಮಾರ್‌ ಧಿಕ್ಕಾರದ ಘೋಷಣೆಯನ್ನೂ ಕೂಗಿದರು. ಆಗ ಆಸನದಲ್ಲಿ ಕುಳಿತುಕೊಳ್ಳುವಂತೆ ಸಂಪತ್‌ ಕುಮಾರ್‌ ಅವರಿಗೆ ಮೇಯರ್‌ ಅವರು ಗದರಿಸಿ ಕಳುಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.