ADVERTISEMENT

ನೀರು ಬಳಕೆ ಕಡಿಮೆ; ಪ್ರಯಾಣಾವಧಿ ಹೆಚ್ಚಳ

ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆ ಸಂಸ್ಥೆಯ (ಐಸೆಕ್‌) ಅಧ್ಯಯನದಿಂದ ಬೆಳಕಿಗೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2015, 19:53 IST
Last Updated 27 ಜುಲೈ 2015, 19:53 IST

ಬೆಂಗಳೂರು: ‘ನಗರದಲ್ಲಿ ಪ್ರತಿ ವ್ಯಕ್ತಿಯ ದಿನದ ನೀರಿನ ಬಳಕೆ ಪ್ರಮಾಣ ರಾಷ್ಟ್ರೀಯ ಮಾನದಂಡಕ್ಕಿಂತ ಕಡಿಮೆ ಇದೆ ಹಾಗೂ ವಾಹನ ದಟ್ಟಣೆಯಿಂದಾಗಿ ಜನರು ಪ್ರಯಾಣಕ್ಕೆ ಹೆಚ್ಚಿನ ಸಮಯ ಮೀಸಲಿಡುತ್ತಿದ್ದಾರೆ’ ಎಂಬ ಅಂಶ ನಗರದ ‘ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆ ಸಂಸ್ಥೆಯ (ಐಸೆಕ್‌) ನಗರ ವ್ಯವಹಾರದ ಸಂಶೋಧನಾ ಕೇಂದ್ರ’ದ  ಅಧ್ಯಯನದಿಂದ ಬೆಳಕಿಗೆ ಬಂದಿದೆ.

ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರದ ಕಲಾ ಎಸ್‌.ಶ್ರೀಧರ್‌ ಅವರು, ‘ಕೇಂದ್ರವು ನಾಗರಬಾವಿ ವಾರ್ಡ್‌ನ (ವಾರ್ಡ್ ಸಂಖ್ಯೆ 128) 20 ಕೊಳೆಗೇರಿ ಕುಟುಂಬಗಳು ಸೇರಿದಂತೆ 200 ಕುಟುಂಬಗಳ ಅಧ್ಯಯನ ನಡೆಸಿದೆ. ಸಮೀಕ್ಷೆಗೆ ಒಂಬತ್ತು ತಿಂಗಳು ತೆಗೆದುಕೊಳ್ಳಲಾಗಿದೆ’ ಎಂದರು.

ಸಂಚಾರ ದಟ್ಟಣೆ ಹೆಚ್ಚಳ: ‘ಶೇ 38 ಮಂದಿ (174ರಲ್ಲಿ 66 ಮಂದಿ) ಉದ್ಯೋಗಕ್ಕೆ ತೆರಳಲು 30 ನಿಮಿಷ ಅವಧಿ ತೆಗೆದುಕೊಳ್ಳುತ್ತಾರೆ. ಶೇ 50ಕ್ಕೂ ಅಧಿಕ ಮಂದಿ ಪ್ರಯಾಣಕ್ಕೆ 31 ನಿಮಿಷದಿಂದ ಒಂದು ಗಂಟೆಯವರೆಗೆ ಮೀಸಲಿಡುತ್ತಾರೆ. ಸಾಮಾನ್ಯವಾಗಿ ಎಲ್ಲ ಮನೆಗಳ ಉದ್ಯೋಗಿಗಳು ಕಚೇರಿಗೆ ತೆರಳಲು 42 ನಿಮಿಷ ತೆಗೆದುಕೊಳ್ಳುತ್ತಾರೆ’ ಎಂದು ವರದಿ ವಿಶ್ಲೇಷಿಸಿದೆ.

‘ಈ ಅವಧಿ 1991ರಲ್ಲಿ 25 ನಿಮಿಷ ಹಾಗೂ 2001ರಲ್ಲಿ 40 ನಿಮಿಷ ಆಗಿತ್ತು.   ಸಂಚಾರ ದಟ್ಟಣೆಯಿಂದ ಜನರು ಈಗ ಹೆಚ್ಚು ಸಮಯ ಪ್ರಯಾಣಕ್ಕೆ ಮೀಸಲಿಡುತ್ತಿದ್ದಾರೆ’ ಎಂದು ತಿಳಿಸಿದೆ.

ಆಂಗ್ಲ ಶಿಕ್ಷಣಕ್ಕೆ ಒಲವು: ‘ಶೇ 91 ಮನೆಯ ಮಕ್ಕಳು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಇದರಲ್ಲೂ ಶೇ 57ರಷ್ಟು ಮಕ್ಕಳು ಸಿಬಿಎಸ್‌ಇ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ.

  ಶೇ 31ರಷ್ಟು ಮಕ್ಕಳು ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ, ಶೇ 12ರಷ್ಟು ಮಕ್ಕಳು ಐಸಿಎಸ್‌ಇ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ಶೇ 6.4 ಮಕ್ಕಳು ಕನ್ನಡ ಮಾಧ್ಯಮದಲ್ಲಿ ಹಾಗೂ ಶೇ 2.5ರಷ್ಟು ಮಕ್ಕಳು ತಮಿಳು ಮಾಧ್ಯಮದಲ್ಲಿ ಅಧ್ಯಯನ ಮಾಡುತ್ತಿದ್ದಾರೆ’ ಎಂದು ವರದಿ ತಿಳಿಸಿದೆ.

ನೀರಿನ ವೆಚ್ಚ ಜಾಸ್ತಿ: ‘ವಾರ್ಡ್‌ನಲ್ಲಿ ಪ್ರತಿ ವ್ಯಕ್ತಿಯ ದಿನದ ನೀರಿನ ಬಳಕೆ 83 ಲೀಟರ್ ಇದೆ. ಕೊಳೆಗೇರಿಗಳಲ್ಲಿ ಬಳಕೆ ಪ್ರಮಾಣ (59 ಲೀಟರ್‌) ಇನ್ನೂ ಕಡಿಮೆ ಇದೆ. ನಗರೀಕರಣದ ರಾಷ್ಟ್ರೀಯ ಆಯೋಗದ ಮಾನದಂಡದ ಪ್ರಕಾರ ಪ್ರತಿ ವ್ಯಕ್ತಿಯ ದಿನದ ನೀರಿನ ಬಳಕೆ ಪ್ರಮಾಣ 135 ಲೀಟರ್‌ ಆಗಿದೆ’ ಎಂದು ತಿಳಿಸಿದೆ. 

‘ಕೊಳೆಗೇರಿಗಳ ನಿವಾಸಿಗಳು ನೀರಿಗಾಗಿ ಪ್ರತಿ ತಿಂಗಳು ₨191 ಖರ್ಚು ಮಾಡುತ್ತಿದ್ದಾರೆ. ಉಳಿದವರು ಮಾಡುವ ವೆಚ್ಚ ₨102. ಕೊಳೆಗೇರಿಗಳ ಬಹುತೇಕ ನಿವಾಸಿಗಳು ಟ್ಯಾಂಕರ್‌ ನೀರನ್ನು ಅವಲಂಬಿಸಿದ್ದಾರೆ. ಇದರಿಂದ ನೀರಿನ ವೆಚ್ಚ ಹೆಚ್ಚಿದೆ’ ಎಂದು ವರದಿ ತಿಳಿಸಿದೆ.

ಶೇ 77 ಮಂದಿಗೆ ಜೀವನಶೈಲಿ ಕಾಯಿಲೆ: ‘ಸಮೀಕ್ಷೆಗೆ ಉತ್ತರ ನೀಡಿದವರಲ್ಲಿ ಶೇ 77 ಮಂದಿ ಜೀವನಶೈಲಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ನಗರ ಜೀವನ ಶೈಲಿಯಿಂದ ಶೇ 42 ಮಂದಿ ಅಧಿಕ ರಕ್ತದೊತ್ತಡ, ಹೃದಯದೊತ್ತಡ, ಶೇ 13 ಮಂದಿ ಮಧುಮೇಹದಿಂದ ಬಳಲುತ್ತಿದ್ದಾರೆ. ವಾಯುಮಾಲಿನ್ಯ ಹಾಗೂ ಒತ್ತಡದಿಂದ ಶೇ 13 ಮಂದಿ ತಲೆನೋವಿನಿಂದ ಬಳಲುತ್ತಿದ್ದಾರೆ’ ಎಂದಿದೆ.

‘ಇವರಲ್ಲಿ ಶೇ 87 ಮಂದಿ ಖಾಸಗಿ ಆಸ್ಪತ್ರೆಗಳಲ್ಲಿ ಹಾಗೂ ಶೇ 7 ಮಂದಿ ಖಾಸಗಿ ಕ್ಲಿನಿಕ್‌ಗಳಲ್ಲಿ ಚಿಕಿತ್ಸೆ ಪಡೆಯಲು ಬಯಸುತ್ತಿದ್ದಾರೆ. ಶೇ 5ರಷ್ಟು ಮಂದಿ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಒಲವು ತೋರಿದ್ದಾರೆ’ ಎಂದು ವರದಿ ಬೆಳಕು ಚೆಲ್ಲಿದೆ.

‘ಇಂತಹ ಬೆಳವಣಿಗೆಗಳ  ನಡುವೆಯೂ ಶೇ 91 ರಷ್ಟು ಮಂದಿ ಬೆಂಗಳೂರಿನಲ್ಲೇ ನೆಲೆಸಲು ಬಯಸಿದ್ದಾರೆ. ಪರಿಸರ ಮಲಿನವಾಗುತ್ತಿರುವುದಕ್ಕೆ ಅನೇಕರು ಅಸಹನೆ ವ್ಯಕ್ತಪಡಿಸಿದ್ದಾರೆ’ ಎಂದು ಕಲಾ ಶ್ರೀಧರ್‌ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.