ADVERTISEMENT

ನೊರೆ:ವರ್ಷ ಕಳೆದರೂ ಪರಿಹಾರವಿಲ್ಲ

ಬೆಳ್ಳಂದೂರು ಕೆರೆಗೆ ಸೇರುತ್ತಿದೆ ಕಲುಷಿತ ನೀರು: ನೊರೆಯಿಂದ ಕಪ್ಪಾದ ತಡೆಗೋಡೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 20:26 IST
Last Updated 17 ನವೆಂಬರ್ 2017, 20:26 IST
ನೊರೆ:ವರ್ಷ ಕಳೆದರೂ ಪರಿಹಾರವಿಲ್ಲ
ನೊರೆ:ವರ್ಷ ಕಳೆದರೂ ಪರಿಹಾರವಿಲ್ಲ   

ಬೆಂಗಳೂರು: ಪುನಶ್ಚೇತನ ಕಾಮಗಾರಿ ಕೈಗೊಂಡು ವರ್ಷ ಕಳೆದರೂ ಬೆಳ್ಳಂದೂರು ಕೆರೆಯಲ್ಲಿ ನೊರೆ ಸಮಸ್ಯೆ ಹಾಗೂ ದುರ್ವಾಸನೆ ಮಾತ್ರ ಕಡಿಮೆಯಾಗಿಲ್ಲ.

910 ಎಕರೆ ಪ್ರದೇಶದಲ್ಲಿರುವ ಕೆರೆ ಬಳಿ ಈಗಲೂ ಜನ ಮೂಗು ಮುಚ್ಚಿಕೊಂಡು ಓಡಾಡುತ್ತಾರೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಎತ್ತರದ ತಡೆಗೋಡೆ ಹಾಕಿರುವುದರಿಂದ ನೊರೆಯು ರಸ್ತೆಗೆ ಹಾರುವುದು ತಪ್ಪಿದೆ.

‘ಬೆಳ್ಳಂದೂರು  ಕೆರೆಯಲ್ಲಿ ಬೆಳೆದಿರುವ ಗಿಡ ಹಾಗೂ ಕಳೆಯನ್ನು ಶೇ 70ರಷ್ಟು ತೆರವು ಮಾಡಿದ್ದೇವೆ’ ಎಂದು ಬಿಡಿಎ ಎಂಜಿನಿಯರ್‌ ವೀರಸಿಂಗ್‌ ನಾಯಕ್‌ ತಿಳಿಸಿದರು.

ADVERTISEMENT

‘ಕಳೆ ತೆಗೆಯುವ ಕೆಲಸ ನಿಲ್ಲಿಸುವಂತೆ ಬಿಡಿಎ ಮತ್ತು ಬೆಳ್ಳಂದೂರು ಕೆರೆ ಸಮಿತಿಯಿಂದ ನಿರ್ದೇಶನ ಬಂದಿದೆ. ಬಾಕಿ ಉಳಿದಿರುವ ಕಳೆಯು ಕೆರೆಯಲ್ಲಿನ ಪೋಷಕಾಂಶಗಳನ್ನು ಹೀರಿಕೊಳ್ಳಲಿದೆ’ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದರು.

ಹಾರ್ವಿನ್ಸ್‌ ಎಂಜಿನಿಯರಿಂಗ್‌ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿಯು ಕಳೆ ತೆಗೆಸುವುದಕ್ಕಾಗಿ ಮುಂಬೈನ ಕ್ಲೀನ್‌ ಟೆಕ್‌ ಕಂಪೆನಿಯಿಂದ ತರಿಸಿದ್ದ ಎರಡು ಕಟಾವು ಯಂತ್ರಗಳನ್ನು ದಡದಲ್ಲಿ ನಿಲ್ಲಿಸಲಾಗಿದೆ. ಅಲ್ಲದೆ, ಕೆರೆ ಇಕ್ಕೆಲಗಳಲ್ಲಿ ಬೆಳೆದಿದ್ದ ಕಳೆಯನ್ನು ಸ್ವಚ್ಛಗೊಳಿಸಲು ತಂದಿದ್ದ ಜೆಸಿಬಿಯೂ ಈಗ ಕಾರ್ಯನಿರ್ವಹಿಸುತ್ತಿಲ್ಲ.

ರಸ್ತೆಯ ಕಡೆಗಿರುವ ತಡೆಗೋಡೆಯ ಒಂದು ಭಾಗದ ಮೇಲೆ ಹೊಸದಾಗಿ ಕಳೆ ಬೆಳೆಯುತ್ತಿದೆ. ವಾಹನಗಳ ಮಾಲಿನ್ಯ ಮತ್ತು ನೊರೆಯಿಂದ ತಡೆಗೋಡೆಯ ಮತ್ತೊಂದು ಭಾಗ ಕಪ್ಪಾಗಿದೆ. ಸ್ಥಳೀಯರು ವಾಹನಗಳು ಕೈಗಾರಿಕೆಯ ಉಪಕರಣಗಳನ್ನು ಕೆರೆಯ ಹತ್ತಿರ ಸ್ವಚ್ಛಗೊಳಿಸುವುದು ಇನ್ನೂ ನಿಂತಿಲ್ಲ. ಇದರಿಂದ ಕಲುಷಿತ ನೀರು ಕೆರೆಗೆ ಸೇರುತ್ತಲೇ ಇದೆ.

‌ಕೆರೆ ಬಳಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆದರೆ, ನಿಗಾ ಇಡಲು ಮತ್ತು ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬಿಡಿಎ ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ. ಕೆರೆಗೆ ಕಸ ಹಾಕದಂತೆ ಭದ್ರತೆಗೆ ನೇಮಿಸಿದ್ದ ಪೊಲೀಸ್‌ ಸಿಬ್ಬಂದಿಯೂ ಕೆರೆ ಬಳಿ ಇಲ್ಲ. ಇದರಿಂದ ಕೆರೆಗೆ ಕಸ ಎಸೆಯುವುದು, ಕಟ್ಟಡ ತ್ಯಾಜ್ಯಗಳನ್ನು ಸುರಿಯುವುದು ಮುಂದುವರಿದಿದೆ.

ಸರ್ಕಾರವು ಎನ್‌ಜಿಟಿಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ‘ಬೆಳ್ಳಂದೂರು ಕೆರೆಯ ಪೂರ್ಣ ನೀರನ್ನು ಶುದ್ಧೀಕರಿಸಲು 2020ರವರೆಗೆ ಕಾಲಾವಕಾಶ ಬೇಕಿದೆ ಎಂದು ತಿಳಿಸಿದೆ. ಈಗಾಗಲೇ ಕೆಲ ಉಪಕ್ರಮಗಳನ್ನು ಕೈಗೊಂಡಿದ್ದರೂ, ಕೆರೆಯ ವಿವಿಧ ಕಡೆಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವ ಕೆಲಸ ನಡೆಯುತ್ತಿದೆ. 2020ರ ವೇಳೆಗೆ ಎಲ್ಲ ಘಟಕಗಳು ಕಾರ್ಯಾರಂಭ ಮಾಡಲಿವೆ. ಬಳಿಕ ಪೂರ್ಣ ಪ್ರಮಾಣದ ಕೊಳಚೆ ನೀರನ್ನು ಶುದ್ಧೀಕರಿಸಲು ಸಾಧ್ಯವಾಗಲಿದೆ’ ಎಂದು ಪ್ರತಿಪಾದಿಸಲಾಗಿದೆ.

**

ಮಳೆಯಿಂದ ಕೆರೆಗೆ ಶುದ್ಧ ನೀರು

‘ಮಳೆಯಿಂದ ಬೆಳ್ಳಂದೂರು ಕೆರೆಗೆ ಶುದ್ಧ ನೀರು ಸೇರಿ, ಕೆರೆ ಜೀವಂತವಾಗಿರಲು ಸಾಧ್ಯವಾಗಿದೆ’ ಎಂದು ಕೆರೆ ಪರಿಶೀಲನೆ ನಡೆಸಿದ ತಜ್ಞರ ಸಮಿತಿ ತಿಳಿಸಿದೆ.

‘ಮಳೆ ಬೀಳದಿದ್ದರೆ ಕೆರೆಯ ಪುನಶ್ಚೇತನ ಕೆಲಸ ಇನ್ನೂ ತಡವಾಗುತ್ತಿತ್ತು. ಎಲ್ಲ ಎಸ್‌ಟಿಪಿಗಳು ಕಾರ್ಯಾರಂಭ ಮಾಡುವವರೆಗೂ ಕೊಳಚೆ ನೀರನ್ನು ಶುದ್ಧೀಕರಿಸಲು ಸಾಧ್ಯವಾಗುತ್ತಿರಲಿಲ್ಲ. ನ್ಯಾಯಾಲಯವನ್ನು ಮೆಚ್ಚಿಸಲು ಸರ್ಕಾರವು ತಾತ್ಕಾಲಿಕ ಕ್ರಮಗಳನ್ನು ಮಾತ್ರ ಕೈಗೊಳ್ಳುತ್ತಿದೆ’ ಎಂದು ಸಮಿತಿಯು ತಿಳಿಸಿದೆ.

ಬೆಳ್ಳಂದೂರು ಕೆರೆ ಸುತ್ತಮುತ್ತಲಿನ ಎಲ್ಲಾ ಕೆರೆಗಳ ಸಮಗ್ರ ಅಧ್ಯಯನಕ್ಕಾಗಿ ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಕೆಎಲ್‌ಸಿಡಿಎ) ನಿವೃತ್ತ ಐಎಫ್‌ಎಸ್‌ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಿದೆ.

‘ಜೌಗು ಪ್ರದೇಶ ಪುನಶ್ಚೇತನ ಮಾದರಿಯನ್ನು ಅನುಷ್ಠಾನಗೊಳಿಸಬೇಕಿದೆ. ಕಳೆಯನ್ನು ತೆಗೆದಿರುವುದು ಬಿಟ್ಟರೆ ಕೆರೆ ಸ್ವಚ್ಛತೆಗಾಗಿ ಮತ್ತೇನು ಕೆಲಸ ನಡೆದಿಲ್ಲ. ನೊರೆ ಸಮಸ್ಯೆ ತಡೆಯಲು ಕೆಲವೆಡೆ ಏರಿಯೇಟರ್ಸ್‌ ಅಳವಡಿಸಿದ್ದಾರೆ. ಅದು ಸಾಕಾಗುವುದಿಲ್ಲ’ ಎಂದು ಸಮಿತಿ ಸದಸ್ಯ ಡಿ.ಎ.ವೆಂಕಟೇಶ್‌ ತಿಳಿಸಿದರು.

ಸಮಿತಿ ರಚನೆ ನಂತರ ಸದಸ್ಯರು ಕೆರೆ ಪರಿಶೀಲನೆ ನಡೆಸಿದ್ದಾರೆ. ಮೂರು ದಿನಗಳಲ್ಲಿ ಸಮಿತಿ ಚಿನ್ನಪ್ಪನಹಳ್ಳಿ, ಕುಂದನಹಳ್ಳಿ, ಕೈಕೊಂಡ್ರಹಳ್ಳಿ, ಹರಳೂರು, ಸಿದ್ದಾಪುರ, ಪಂತನೂರು ಕೆರೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.