ADVERTISEMENT

ನ್ಯಾಯಮೂರ್ತಿಗಳಿಗೇ ಅನ್ಯಾಯ

ಮಂಜುನಾಥ್‌ ವಿರುದ್ಧ ಸಂಚು: ಮುಖ್ಯ ನ್ಯಾಯಮೂರ್ತಿ ಡಿ.ಎಚ್‌.ವಘೇಲಾ ವಿಷಾದ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2015, 20:42 IST
Last Updated 20 ಏಪ್ರಿಲ್ 2015, 20:42 IST

ಬೆಂಗಳೂರು: ನ್ಯಾಯಮೂರ್ತಿ ಕೆ.ಎಲ್‌. ಮಂಜುನಾಥ್‌ ಅವರಿಗೆ ಸರಿಪಡಿಸ ಲಾಗದ ಅನ್ಯಾಯವಾಗಿದೆ ಎಂದು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ಎಚ್‌.ವಘೇಲಾ ವಿಷಾದಿಸಿದರು.

ಸೋಮವಾರ ನಿವೃತ್ತರಾದ ನ್ಯಾಯಮೂರ್ತಿ ಕೆ.ಎಲ್‌.ಮಂಜುನಾಥ್‌ ಅವರಿಗೆ ಮುಖ್ಯ  ನ್ಯಾಯಮೂರ್ತಿಗಳ ಸಭಾಂಗಣದಲ್ಲಿ ಬೀಳ್ಕೊಡುಗೆ ನೀಡಲಾಯಿತು.

‘ಹೀಗಾದರೆ ಭವಿಷ್ಯದಲ್ಲಿ ನ್ಯಾಯಾಂಗ ಕ್ಷೇತ್ರವನ್ನು ಪ್ರವೇಶಿಸಲು ಯಾರು ತಾನೇ ಬಯಸುತ್ತಾರೆ’ ಎಂದು ವಘೇಲಾ ನೋವಿನಿಂದ ಪ್ರಶ್ನಿಸಿದರು.

‘ಮಂಜುನಾಥ್‌ ವಿರುದ್ಧ 4–5 ವರ್ಷಗಳಿಂದ ನಡೆದಿರುವ ವ್ಯವಸ್ಥಿತ ಸಂಚು ಸಾಮಾನ್ಯ ಜನರಿಗೆ ಗೊತ್ತಾಗು ವಂತಹುದಲ್ಲ. ಇದು ಯಾವುದೇ ನ್ಯಾಯ ಮೂರ್ತಿಗೆ ಯಾವತ್ತೂ ಆಗಬಾರದು’ ಎಂದು ಹೇಳಿದರು.

ನ್ಯಾಯಮೂರ್ತಿ ಕೆ.ಎಲ್‌. ಮಂಜು ನಾಥ್‌ ಮಾತನಾಡಿ, ‘ನನ್ನ ವಿರುದ್ಧ ಕೇರಳದ ಕ್ರೈಂ ಎಂಬ ಇಂಗ್ಲಿಷ್‌ ಪೀತ ಪತ್ರಿಕೆಯಲ್ಲಿ ಸುಳ್ಳು ಸುದ್ದಿ ಬರೆಸ ಲಾಯಿತು.  ಮಂಜುನಾಥ್‌ ಅಪಾರವಾದ ಅಕ್ರಮ ಆಸ್ತಿ ಗಳಿಸಿದ್ದಾರೆ. ಮಗಳ ಹೆಸರಿನಲ್ಲಿ ಕೂಡಿಟ್ಟಿದ್ದಾರೆ,  ನಾನೊಬ್ಬ ದೊಡ್ಡ ಜಾತಿವಾದಿ ಎಂದೆಲ್ಲಾ ಆಪಾದಿಸ ಲಾಯಿತು. ಇಂತಹ ಆರೋಪಗಳನ್ನು ಮಾಡಿದವರು ಬೇರಾರೂ ಆಗಿರಲಿಲ್ಲ. ಅವರೂ ನನ್ನ ಸಹೋದ್ಯೋಗಿ ನ್ಯಾಯ ಮೂರ್ತಿಗಳೇ ಆಗಿದ್ದರು.  ನನ್ನ ಏಳಿಗೆಗೆ ಕುತ್ತು ತರುವುದೇ ಅವರ ಏಕೈಕ ಉದ್ದೇಶ ವಾಗಿತ್ತು’ ಎಂದು ತಮ್ಮ ಮನದಾಳದ ಮಾತುಗಳನ್ನು ಬಿಡಿಸಿಟ್ಟರು.

‘ನಾನೀಗ ಎಲ್ಲವನ್ನೂ ಹೇಳಲೇ ಬೇಕಾಗಿದೆ’ ಎಂದ ಅವರು, ‘14 ವರ್ಷ 4 ತಿಂಗಳ ಕಾಲ ನ್ಯಾಯಮೂರ್ತಿಯಾಗಿ ವಿವಿಧ ಸ್ತರಗಳಲ್ಲಿ ದುಡಿದಿದ್ದೇನೆ. ವಿಭಾಗೀಯ ಪೀಠವೊಂದರಲ್ಲೇ  ಸುಮಾರು 10 ಸಾವಿರ ಆದೇಶಗಳನ್ನು ನೀಡಿದ್ದೇನೆ.  ನ್ಯಾಯಮೂರ್ತಿಯಾಗಿ ನಾನು ಅಸಮರ್ಥ ಎನ್ನುವ ಟೀಕಾಕಾರರಿಗೆ ಈ ಆದೇಶಗಳೇ ಉತ್ತರ ನೀಡುತ್ತವೆ’ ಎಂದು ಮಾರ್ಮಿಕವಾಗಿ ನುಡಿದರು.

‘ಹಾಲಿ ಸುಪ್ರೀಂ ಕೋರ್ಟ್‌ನಲ್ಲಿರುವ ಒಬ್ಬ ನ್ಯಾಯಮೂರ್ತಿ, ಹೊರ ರಾಜ್ಯದ ಲ್ಲಿರುವ, ಇಲ್ಲಿನವರೇ ಆದ ಇನ್ನೊಬ್ಬ ಹಿರಿಯ ನ್ಯಾಯಮೂರ್ತಿ ಹಾಗೂ ಅವರ ಪುತ್ರ ನನ್ನ ವಿರುದ್ಧ ಇನ್ನಿಲ್ಲದ ಷಡ್ಯಂತ್ರ ರೂಪಿಸಿದರು ಮತ್ತು ನಾನು ಪಂಜಾಬ್‌ ಹರಿಯಾಣ ಹೈಕೋರ್ಟ್‌ಗೆ ಮುಖ್ಯ ನ್ಯಾಯಮೂರ್ತಿಯಾಗಿ ಹೋಗುವುದನ್ನು ತಪ್ಪಿಸಿದರು’ ಎಂದು  ಆಪಾದಿಸಿದರು.

‘ನನ್ನ ವಿರುದ್ಧ ನಡೆಸಲಾದ ಈ ಸಂಚಿನಲ್ಲಿ ತಮಿಳುನಾಡು ವಕೀಲರೂ ಭಾಗಿಯಾದರು. ಆದರೂ ನಾನು ನ್ಯಾಯಮೂರ್ತಿಯಾಗಿ ನಿರ್ಗಮಿಸು ತ್ತಿರುವ ಈ ಸಂದರ್ಭದಲ್ಲಿ, ಓ ದೇವರೇ ನನ್ನನ್ನು ದ್ವೇಷಿಸುವವರನ್ನು ಕ್ಷಮಿಸಿಬಿಡು ಎಂದು ಕೇಳಿಕೊಳ್ಳುತ್ತೇನೆ’ ಎಂದರು.

ಗುಮಾಸ್ತರ ಸಂಘದಿಂದ ಅಭಿನಂದನೆ: ವಕೀಲರ ಗುಮಾಸ್ತರ ಸಂಘದಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮಂಜುನಾಥ್‌, ‘ಈ ಸಂಘವು ನನ್ನ ಕನಸಿನ ಕೂಸು. ಅಭದ್ರತೆಯಲ್ಲಿ ದುಡಿ ಯುವ ಈ ಗುಮಾಸ್ತರು ವಕೀಲರಿ ಗಿಂತಲೂ ಹೆಚ್ಚು ಜ್ಞಾನಿಗಳು’ ಎಂದು ಬಣ್ಣಿಸಿದರು.

‘ಎಲ್ಲ ನ್ಯಾಯಮೂರ್ತಿಗಳು ಕಕ್ಷಿ ದಾರರು ಮತ್ತು ವಕೀಲರಿಗೆ  ವಿಧಿಸುವ ದಂಡದ ಹಣದಲ್ಲಿ ಶೇಕಡ 25ರಷ್ಟ ನ್ನಾದರೂ ಗುಮಾಸ್ತರ ಸಂಘದ ಕ್ಷೇಮಾ ಭಿವೃದ್ಧಿ ನಿಧಿಗೆ ನೀಡಬೇಕು’ ಎಂದು ಮಂಜುನಾಥ್‌ ಮನವಿ ಮಾಡಿದರು.

ಬೀಳ್ಕೊಡುಗೆ: ಬೆಂಗಳೂರು ವಕೀಲರ ಸಂಘದ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಿವೃತ್ತ ನ್ಯಾಯಮೂರ್ತಿ ಕೆ.ಎಲ್‌. ಮಂಜುನಾಥ್‌ ಅವರನ್ನು ಬೀಳ್ಕೊಡಲಾಯಿತು.

ನಾನು ಯಾವತ್ತೂ ಬಡವರ ಪರವಾಗಿ ನ್ಯಾಯ ನೀಡಿದ್ದೇನೆ. ಎಂಥದೇ ಆಮಿಷವನ್ನೂ ಮೂಸಿ ನೋಡದೆ ಪ್ರಾಮಾಣಿಕವಾಗಿ ನನ್ನ ಕರ್ತವ್ಯ ನಿರ್ವಹಿಸಿದ್ದೇನೆ.
ಕೆ.ಎಲ್‌.ಮಂಜುನಾಥ್‌, ನಿವೃತ್ತ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.