ADVERTISEMENT

ಪತ್ರ ಬರೆದಿಟ್ಟು ಚಾಲಕ ನಾಪತ್ತೆ

ಹುದ್ದೆ ಕಾಯಂಗೊಳಿಸಲು ಲಂಚ ಕೇಳಿದ ಆರೋಪ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2015, 20:24 IST
Last Updated 25 ನವೆಂಬರ್ 2015, 20:24 IST

ಬೆಂಗಳೂರು: ‘ಚಾಲಕ ಹುದ್ದೆ ಕಾಯಂಗೊಳಿಸಲು ಸಾರಿಗೆ ಇಲಾಖೆ ಅಧಿಕಾರಿಗಳು ಲಂಚ ಕೇಳಿದ್ದರಿಂದ ಪತಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದಾರೆ’ ಎಂದು ಆರೋಪಿಸಿ ಜಯಲಕ್ಷ್ಮಿ ಎಂಬುವವರು ಬುಧವಾರ ನಗರದ ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದಾರೆ.

ನಾವು ಮೂಲತಃ ಮಂಡ್ಯ ಜಿಲ್ಲೆ ಮಳವಳ್ಳಿಯವರು.  ಚಿಕ್ಕಪೇಟೆ ಸಮೀಪದ  ರಾಠಾ ಸಿಂಗ್‌ ಪೇಟೆಯಲ್ಲಿ ವಾಸವಾಗಿದ್ದೇವೆ. ಪತಿ 1995ರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ  ಸಂಸ್ಥೆ (ಕೆಎಸ್ಆರ್‌ಟಿಸಿ) ಮೈಸೂರು  ನಗರ ವಿಭಾಗದಲ್ಲಿ ತಾತ್ಕಾಲಿಕ ಚಾಲಕ ಹುದ್ದೆಗೆ ಸೇರಿದ್ದರು.

‘ಪತಿ ಸೇರಿ 40ಕ್ಕೂ ಹೆಚ್ಚು ಚಾಲಕರು 2003ರಲ್ಲಿ ಹುದ್ದೆ ಕಾಯಂಗೆ ಅರ್ಜಿ ಸಲ್ಲಿಸಿದ್ದರು. ಆಗ ಸಾರಿಗೆ ಅಧಿಕಾರಿಗಳು ಪತಿಯಿಂದ ₹ 20 ಸಾವಿರ ಲಂಚ ಕೇಳಿದ್ದರು. ಲಂಚ ಕೊಡದಿದ್ದಾಗ ಶಾಲಾ  ವರ್ಗಾವಣೆ ಪತ್ರದಲ್ಲಿ ಲೋಪವಿದೆ ಎಂದು ಕಾಯಂಗೊಳಿಸಿರಲಿಲ್ಲ. ಉಳಿದ ಎಲ್ಲರನ್ನೂ ಕಾಯಂಗೊಳಿಸಲಾಯಿತು’ ಎಂದು  ದೂರಿನಲ್ಲಿ ತಿಳಿಸಿದ್ದಾರೆ.

‘ಕ್ಷೇತ್ರ ಶಿಕ್ಷಣಾಧಿಕಾರಿಗಳ ಬಳಿ ವರ್ಗಾವಣೆ ಪತ್ರದಲ್ಲಿನ ಲೋಪವನ್ನು ಸರಿಪಡಿಸಿ ತಂದರೂ ಪ್ರಯೋಜನವಾಗಲಿಲ್ಲ. ನಂತರ ಹಲವು ಬಾರಿ ಸಾರಿಗೆ ಇಲಾಖೆ ವ್ಯವಸ್ಥಾಪಕ ನಿರ್ದೇಶಕರಿಗೂ ಪತ್ರ ಬರೆಯಲಾಯಿತು. ಅವರಿಂದಲೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ’ ಎಂದು ಜಯಲಕ್ಷ್ಮಿ ದೂರಿನಲ್ಲಿ ಹೇಳಿದ್ದಾರೆ.

‘ಇದರಿಂದ ಬೇಸತ್ತ ಪತಿ ನ.30ರ ಒಳಗೆ ಹುದ್ದೆ ಕಾಯಂಗೊಳಿಸದಿದ್ದರೆ ಸಾರಿಗೆ ಇಲಾಖೆ ಕಚೇರಿ ಎದುರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮನೆ ಬಿಟ್ಟು ಹೋಗಿದ್ದಾರೆ. ಕೂಡಲೇ ಅವರನ್ನು ಹುಡುಕಿಸಿ’ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.