ADVERTISEMENT

ಪದವಿ: ಮತ್ತೊಂದು ಅವಕಾಶ

ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತಿನ ಸಭೆ

​ಪ್ರಜಾವಾಣಿ ವಾರ್ತೆ
Published 21 ಮೇ 2015, 19:30 IST
Last Updated 21 ಮೇ 2015, 19:30 IST

ಬೆಂಗಳೂರು: ಸ್ನಾತಕ ಮತ್ತು ಸ್ನಾತಕೋ ತ್ತರ ಪದವಿಗಳನ್ನು ಅಪೂರ್ಣ ಗೊಳಿಸಿದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ ಬರೆಯುವ ಅವಕಾಶ ನೀಡಲು ಬೆಂಗಳೂರು ವಿಶ್ವವಿದ್ಯಾಲಯ ತೀರ್ಮಾನ ತೆಗೆದುಕೊಂಡಿದೆ.

ವಿ.ವಿಯ ಸೆನೆಟ್‌ಹಾಲ್‌ನಲ್ಲಿ ಗುರುವಾರ ನಡೆದ ವಿದ್ಯಾವಿಷಯಕ ಪರಿಷತ್ತಿನ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯವನ್ನು ಮೌಲ್ಯಮಾಪನ ಕುಲಸಚಿವ ಕೆ.ಎನ್. ನಿಂಗೇಗೌಡ ತಿಳಿಸಿದರು.

‘ವಿವಿಯ ಸಂಯೋಜಿತ ಕಾಲೇಜುಗಳಲ್ಲಿ 1964 ರಿಂದ ಪದವಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು. ವೈದ್ಯಕೀಯ ವಿಜ್ಞಾನ ಬಿಟ್ಟು ಉಳಿದ ವಿಷಯಗಳಿಗೆ ಈ ಅವಕಾಶ ನೀಡಲಾಗಿದೆ. ಈ ಹಿಂದೆ ಇದ್ದ ಪಠ್ಯಕ್ರಮಕ್ಕೆ ಸಮಾನಾಂತರ
ಪಠ್ಯವನ್ನು ಮರು ಪರೀಕ್ಷೆಗೆ ಹಾಜರಾ ಗುವ ವಿದ್ಯಾರ್ಥಿಗಳಿಗೆ ಒದಗಿ ಸಲಾಗುವುದು’  ಎಂದು ನಿಂಗೇಗೌಡ ಹೇಳಿದರು.

ಪೊಲೀಸ್‌ ತನಿಖೆ: ‘ಉತ್ತರ ಪತ್ರಿಕೆ ಕದ್ದು ಮನೆಯಲ್ಲೇ ಪದವಿ ಪರೀಕ್ಷೆ ಬರೆದಿದ್ದ ಬಿಎನ್‌ಎಂ ಕಾಲೇಜಿನ 8 ವಿದ್ಯಾರ್ಥಿಗಳನ್ನು ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ. ಅವರನ್ನು ಹೊರತುಪಡಿಸಿ ಉಳಿದ 229 ವಿದ್ಯಾರ್ಥಿಗಳ ಫಲಿತಾಂಶವನ್ನು ಒಂದೆರಡು ದಿನದಲ್ಲಿ ಪ್ರಕಟಿಸಲಾ ಗುವುದು’ ಎಂದು ಹೇಳಿದರು.

ತಪ್ಪಿತಸ್ಥರ ವಿರುದ್ಧ ಕ್ರಮ: ‘ಇತ್ತೀಚೆಗೆ ನಡೆದ ಪದವಿ ಪರೀಕ್ಷೆಗಳಲ್ಲಿ ಬಿ.ಕಾಂ ಪ್ರಶ್ನೆ ಪತ್ರಿಕೆ ಪೂರ್ತಿ ಸೋರಿಕೆ ಯಾಗಿರಲಿಲ್ಲ. ಮೂರು ಸೆಟ್ ಪ್ರಶ್ನೆಪತ್ರಿ ಕೆಗಳ ಪೈಕಿ ಕೇವಲ 2 ಪ್ರಶ್ನೆಗಳು ಮಾತ್ರ ಸೋರಿಕೆಯಾದ್ದವು. ವಿ.ವಿ ಸಿಬ್ಬಂದಿ ಯಿಂದಲೇ ಈ ಕೃತ್ಯ ನಡೆದಿದೆ ಎನ್ನುವುದು ತಿಳಿದುಬಂದಿದೆ. ಈ ಕುರಿತು ಪೊಲೀಸ್ ದೂರು ನೀಡಲಾಗಿದೆ. ವಿ.ವಿ ವತಿಯಿಂದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಕುಲಪತಿ ಪ್ರೊ.ಬಿ. ತಿಮ್ಮೇಗೌಡ ತಿಳಿಸಿದರು.

ಎಫ್‌ಐಆರ್‌ಗೆ ನಿರ್ಧಾರ: ‘ದೂರ ಶಿಕ್ಷಣ ನಿರ್ದೇಶನಾಲಯದಲ್ಲಿನ ಅಕ್ರಮ ಅಂಕಪಟ್ಟಿ ಪ್ರಕರಣ ಮತ್ತು  2013 ರಲ್ಲಿ ನಡೆದ ಪದವಿ ಪರೀಕ್ಷೆಗಳಲ್ಲಿ ಹಣ ಪಡೆದು ಅಂಕ ನೀಡಿದ ಪ್ರಕರಣ ಸಂಬಂಧ ಹಿಂದಿನ ಮೌಲ್ಯಮಾಪನ ಕುಲಸಚಿವ ಪ್ರೊ.ಆರ್.ಕೆ. ಸೋಮಶೇ ಖರ್ ವಿರುದ್ಧ ಎಫ್‌ಐಆರ್ ಹಾಕಲು ವಿವಿ ನಿರ್ಧರಿಸಿದೆ’ ಎಂದು ಹೇಳಿದರು.

‘ಪ್ರವಾಸೋದ್ಯಮಕ್ಕೆ ಸಂಬಂಧಿ ಸಿದಂತೆ 6 ತಿಂಗಳ ಡಿಪ್ಲೊಮಾ, 1 ವರ್ಷದ ಸರ್ಟಿಫಿಕೇಟ್ ಹಾಗೂ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‌ ಆರಂಭಿಸಲು ತೀರ್ಮಾನಿಸಲಾಗಿದೆ. ಜಲಶುದ್ಧೀಕರಣ ಘಟಕ ಸ್ಥಾಪನೆಗಾಗಿ ಜಲಮಂಡಳಿಯು ವಿ.ವಿಯಿಂದ 12  ಎಕರೆ ಜಮೀನು ಕೇಳಿದೆ. ಆ ಜಮೀನನ್ನು ಗುತ್ತಿಗೆ ಆಧಾರ ಮೇಲೆ ನೀಡಲು ನಿರ್ಧರಿಸಲಾಗಿದೆ’ ಎಂದರು.

ಸಂಬಳ ಕಡಿತ: ‘ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯಕ್ಕೆ ಶಿಕ್ಷಕರನ್ನು ಕಳುಹಿಸಿ ಕೊಡದಿರುವ ಕಾಲೇಜುಗಳ ಸಂಯೋಜನೆಯನ್ನು ರದ್ದುಗೊಳಿಸುವ ಜತೆಗೆ ಶಿಕ್ಷಕರ ಸಂಬಳ ಕಡಿತಗೊಳಿಸಲು ವಿ.ವಿ ನಿರ್ಧರಿಸಿದೆ’ ಎಂದು ನಿಂಗೇಗೌಡ ಹೇಳಿದರು.

ಮೇ 30 ರಂದು ಘಟಿಕೋತ್ಸವ
‘ವಿ.ವಿಯ 50ನೇ ಘಟಿಕೋತ್ಸವ ಮೇ 30 ರಂದು ನಡೆಯಲಿದೆ. 32,479 ವಿದ್ಯಾರ್ಥಿಗಳು ಇದರಲ್ಲಿ ಪದವಿ ಪ್ರಮಾಣ ಪತ್ರ ಪಡೆಯಲಿದ್ದಾರೆ. ಮೂರು ಗಣ್ಯವ್ಯಕ್ತಿಗಳಿಗೆ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಲಾಗಿದ್ದು, ಈ ಕುರಿತ ಕಡತವನ್ನು ರಾಜ್ಯಪಾಲರ ಅಂಕಿತಕ್ಕಾಗಿ  ಕಳುಹಿಸಲಾಗಿದೆ’ ಎಂದು ತಿಮ್ಮೇಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.